ಪುತ್ತೂರು: ಸಂತಾನ ಭಾಗ್ಯ ಮತ್ತು ನೀರಿನ ಮೂಲಕ್ಕೆ ಕಾರಣಿಕ ಕ್ಷೇತ್ರವಾದ ಶಾಂತಿಗೋಡು ಗ್ರಾಮದ ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಕಾರ್ಯಕ್ರಮ ಮತ್ತು ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ನಿವೃತ್ತಿ ಕಾರ್ಯಕ್ರಮ ಮಾ.8 ರಿಂದ 10ರ ತನಕ ನಡೆಯಲಿದೆ. ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರತ್ನಾಕರ ಪಿ ಎಸ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ದೇವಳದ ಜೀರ್ಣೋದ್ಧಾರ ಪ್ರಯುಕ್ತ ತಾಂಬೂಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ದೋಷಗಳಿಗೆ ಪ್ರಾಯಶ್ಚಿತ ಕಾರ್ಯಕ್ರಮ ನಡೆಸಲಾಗುವುದು. ಮಾ.8ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಮಾ.9 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನವಕಲಶ ಪೂಜೆ, ಮೃತ್ಯುಂಜಯ ಹೋಮ, ಭಾಗ್ಯೈಕ್ಯಮತ್ಯ ಸೂಕ್ತ ಹೋಮ, ನಿಧಿಕುಂಭ ಸಮರ್ಪಣೆ, ವಿಷ್ಣು ಸಹಸ್ರನಾಮ ಹೋಮ, ಪವಮಾನಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ನಾಗದೇವರಿಗೆ ಆಶ್ಲೇಷಾ ಬಲಿ, ಕಲಶಾಭಿಷೇಕ ತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ ನವಕ ಕಲಶಾಭಿಷೇಕ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದುರ್ಗಾಪೂಜೆ, ಸುದರ್ಶನ ಹೋಮ ನಡೆಯಲಿದೆ. ಮಾ.10ರಂದು ಪ್ರಾಯಶ್ಚಿತಕ್ಕೆ ಸಂಬಂಧಿಸಿ ವಿವಿಧ ಹೋಮ ಹವನಗಳು ನಡೆಯಲಿದೆ ಎಂದವರು ಹೇಳಿದರು. ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಉದಯ ಶಂಕರ ಭಟ್ ಮಲೆಪಡ್ಪು, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಪಂಜಿಗ, ಸದಸ್ಯ ಕಿಟ್ಡಣ್ಣ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ತಾಲೂಕಿನಲ್ಲೇ ಜೀರ್ಣೋದ್ದಾರ ಆಗದ ದೇವಸ್ಥಾನ
ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ತಾಲೂಕಿನಲ್ಲೇ ಜೀರ್ಣೋದ್ದಾರ ಆಗದ ದೇವಸ್ಥಾನವಾಗಿ ಉಳಿದಿದೆ. ತಾಲೂಕಿನಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನಗಳಲ್ಲಿರುವ ಶ್ರೀ ವಿಷ್ಣುವಿನ ಅತೀ ದೊಡ್ಡ ವಿಗ್ರಹ ಈ ದೇವಸ್ಥಾನದಲ್ಲಿದ್ದು, ಸುಮಾರು 500 ವರ್ಷಗಳ ಹಿಂದೆ ಮೂಲ ನೆಲೆಯಲ್ಲಿ ಅಗ್ನಿ ಅವಘಡದಿಂದ ಈಗಿರುವ ಸ್ಥಳದಲ್ಲಿ ಶ್ರೀ ದೇವರ ಪ್ರತಿಷ್ಠೆಯಾಗಿದೆ ಎಂದು ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಿದೆ. ಈಗಿರುವ ದೇವಸ್ಥಾನದಲ್ಲಿ ಶ್ರೀ ವಿಷ್ಣು ಸಂತೃಪ್ತನಾಗಿರುವುದಾಗಿ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ದಾರ ಕಾರ್ಯಗಳು ನಡೆಯಲಿದೆ ಎಂದು ರತ್ನಾಕರ ಪಿ ಎಸ್ ಹೇಳಿದರು.
ಮಾ.8ಕ್ಕೆ ಹೊರೆಕಾಣಿಕೆ -ಸುವಸ್ತುಗಳನ್ನು ಸಮರ್ಪಣೆಗೆ ಅವಕಾಶ
ವಾರ್ಷಿಕೋತ್ಸವ ಹಾಗೂ ಪರಿಹಾರ ಕ್ರಿಯಾದಿ ಕಾರ್ಯಗಳಿಗೆ ಬೇಕಾದ ಹೂವು, ಹಿಂಗಾರ, ಬಾಳೆಎಲೆ, ಬಾಳೆ ಗೊನೆ, ತೆ೦ಗಿನ ಕಾಯಿ, ಅಕ್ಕಿ ಹಾಗೂ ಇನ್ನಿತರ ಸುವಸ್ತುಗಳು ದೇವಸ್ಥಾನಕ್ಕೆ ಸಮರ್ಪಣೆ ಮಾಡಲು ಭಕ್ತರಿಗೆ ಅವಕಾಶವಿದೆ. ಮಾ.8ಕ್ಕೆ ಬೆಳಿಗ್ಗೆ ಗಂಟೆ 9ಕ್ಕೆ ಆನಡ್ಕ ಅಯ್ಯಪ್ಪ ಭಜನಾ ಮಂದಿರದಿಂದ ಹೊರೆಕಾಣಿಕೆ ಹೊರಡಲಿದೆ ಎಂದು ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಪಂಜಿಗ ತಿಳಿಸಿದ್ದಾರೆ.