ನೆಲ್ಯಾಡಿ-ಪುತ್ಯೆ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ.ಅನುದಾನ ಬಿಡುಗಡೆ

0

ನೆಲ್ಯಾಡಿ: ಈ ಭಾಗದ ಗ್ರಾಮಸ್ಥರ ಬಹು ವರ್ಷಗಳ ಬೇಡಿಕೆಯಾದ ನೆಲ್ಯಾಡಿ ಪೇಟೆಯಿಂದ ಪುತ್ಯೆ ಮೂಲಕ ಕೊಕ್ಕಡ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 70 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು ಟೆಂಡರ್ ಸಹ ಆಗಿದೆ.

2023-24ನೇ ಸಾಲಿನ ರಾಜ್ಯ ಹೆದ್ದಾರಿ ನಿರ್ವಹಣೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ವಿಭಾಗಕ್ಕೆ 1.50 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಅದರಲ್ಲಿ ಪುತ್ತೂರು ಉಪವಿಭಾಗಕ್ಕೆ 70 ಲಕ್ಷ ರೂ.ಅನುದಾನ ಹಂಚಿಕೆ ಮಾಡಲಾಗಿದೆ. ಈ ಅನುದಾನವನ್ನು ಸುಳ್ಯ ಪೈಚಾರ್-ದಿಡುಪೆ ರಾಜ್ಯ ಹೆದ್ದಾರಿಯ 37.35ರಿಂದ 38.00ರ ತನಕ ಅಭಿವೃದ್ಧಿ ಕಾಮಗಾರಿಗೆ ಹಂಚಿಕೆ ಮಾಡಲಾಗಿದ್ದು ನೆಲ್ಯಾಡಿ-ಪುತ್ಯೆ ರಸ್ತೆಗೆ ಈ ಅನುದಾನ ಬಳಕೆಯಾಗಲಿದೆ. ಈ ಕಾಮಗಾರಿಗೆ ಟೆಂಡರ್ ಸಹ ಆಗಿದೆ. ರಾಜ್ಯ ಹೆದ್ದಾರಿಯ ನೆಲ್ಯಾಡಿಯಿಂದ ಪುತ್ಯೆ ತನಕ 1.15 ಕಿ.ಮೀ.ರಸ್ತೆ ಅಭಿವೃದ್ಧಿಗೆ ಬಾಕಿ ಇದ್ದು ಇದರಲ್ಲಿ ಬಿಡುಗಡೆಯಾಗಿರುವ 70 ಲಕ್ಷ ರೂ.ಅನುದಾನದಲ್ಲಿ 5.5 ಮೀ.ಅಗಲಕ್ಕೆ ಅಂದಾಜು 400 ಮೀ. ಉದ್ದಕ್ಕೆ ರಸ್ತೆ ಡಾಮರೀಕರಣ ಆಗಲಿದೆ. ಪಿಡಬ್ಲ್ಯುಡಿ ಗುತ್ತಿಗೆದಾರ ಬಪ್ಪಳಿಗೆಯ ಹರೀಶ್‌ಕುಮಾರ್ ಅವರಿಗೆ ಟೆಂಡರ್ ಆಗಿದ್ದು ಇನ್ನೆರಡು ದಿನದಲ್ಲಿ ಕಾಮಗಾರಿಯೂ ಆರಂಭಗೊಳ್ಳಲಿದೆ. ಆದರೂ ಇಲ್ಲಿ ಇನ್ನೂ ಅಂದಾಜು 700 ಮೀ.ರಸ್ತೆ ಅಭಿವೃದ್ಧಿಗೆ ಬಾಕಿ ಆಗಲಿದೆ.

ಕೆಟ್ಟು ಹೋಗಿರುವ ರಸ್ತೆ:
ಸದ್ರಿ ರಸ್ತೆಯು ಸುಳ್ಯ-ಪೈಚಾರು-ಸವಣೂರು-ಕುದ್ಮಾರು, ಆಲಂಕಾರು-ಮಾದೇರಿ-ಪಟ್ರಮೆ-ದಿಡುಪೆ-ಬೆಳ್ತಂಗಡಿ-ಧರ್ಮಸ್ಥಳ ರಾಜ್ಯ ಹೆದ್ದಾರಿಯಾಗಿದೆ. ಇದರಲ್ಲಿ ಬರುವ ನೆಲ್ಯಾಡಿ ಜಂಕ್ಷನ್‌ನಿಂದ ಪುತ್ಯೆ ಸೇತುವೆ ತನಕದ 1.15 ಕಿ.ಮೀ.ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ. ಇಲ್ಲಿ ಜಲ್ಲಿ ಕಲ್ಲುಗಳು ಎದ್ದುಹೋಗಿದ್ದು ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ತೀರಾ ಹದಗೆಟ್ಟ ಸದ್ರಿ ರಸ್ತೆಯಲ್ಲಿ ಬೈಕ್ ಸವಾರರು ಎದ್ದುಬಿದ್ದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚಾರವೇ ಕಷ್ಟ ಸಾಧ್ಯವಾಗಿತ್ತು. ಈ ರಸ್ತೆಯು ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು ಎರಡೂ ಪಂಚಾಯತ್‌ಗಳ ಗ್ರಾಮಸಭೆಗಳಲ್ಲೂ ರಸ್ತೆ ವಿಚಾರ ಪ್ರಸ್ತಾಪಗೊಂಡಿತ್ತು. ಸದ್ರಿ ರಸ್ತೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಪುತ್ಯೆ ಸೇತುವೆಯಲ್ಲಿಂದ ಕೊಕ್ಕಡದ ತನಕ ನಾಲ್ಕು ವರ್ಷದ ಹಿಂದೆಯೇ ರಸ್ತೆ ಕಾಂಕ್ರಿಟೀಕರಣಗೊಂಡಿತ್ತು. ನೆಲ್ಯಾಡಿಯಿಂದ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಮಾಯಿಲಕೋಟೆ ದೈವಸ್ಥಾನಕ್ಕೆ ಹೋಗುವ ಭಕ್ತರು ಇದೇ ರಸ್ತೆ ಬಳಕೆ ಮಾಡುತ್ತಿದ್ದಾರೆ. ಆದರೆ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದುದ್ದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚಾರಕ್ಕೆ ಪರದಾಟ ನಡೆಸುತ್ತಿದ್ದರು.

ಪಿಡಬ್ಲ್ಯೂಡಿ ಸಚಿವರಿಗೆ ಮನವಿ:
ನೆಲ್ಯಾಡಿ-ಕೊಕ್ಕಡ ಸಂಪರ್ಕ ರಸ್ತೆಯ ನೆಲ್ಯಾಡಿಯಿಂದ ಪುತ್ಯೆ ಸೇತುವೆ ತನಕ ರಸ್ತೆ ತೀರಾ ಹದಗೆಟ್ಟುಹೋಗಿದೆ. ಇಲ್ಲಿನ 1.15 ಕಿ.ಮೀ.ರಸ್ತೆ ಅಭಿವೃದ್ಧಿಗೆ 1.80 ಕೋಟಿ ರೂ.ಅಂದಾಜು ಪಟ್ಟಿ ಸಿದ್ದಪಡಿಸಿ ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ ಅವರ ಮೂಲಕ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಮಾಡಲಾಗಿತ್ತು. ಇದೀಗ 70 ಲಕ್ಷ ರೂ.ಅನುದಾನ ಮಂಜೂರುಗೊಂಡು ಟೆಂಡರ್ ಸಹ ಆಗಿದೆ. ಎರಡು ದಿನದೊಳಗೆ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಉಳಿಕೆ ರಸ್ತೆಯ ಅಭಿವೃದ್ಧಿಗೆ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ ಪಿಡಬ್ಲ್ಯುಡಿ ಸಚಿವರಿಗೆ, ಇದಕ್ಕೆ ಶ್ರಮಿಸಿದ ಜಿ.ಕೃಷ್ಣಪ್ಪ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಸರ್ವೋತ್ತಮ ಗೌಡ, ಮಾಜಿ ಸದಸ್ಯರು, ದ.ಕ.ಜಿ.ಪಂ.

ಲೋಕೋಪಯೋಗಿ ಇಲಾಖೆಯಿಂದ ಪುತ್ತೂರು ಉಪವಿಭಾಗಕ್ಕೆ 70 ಲಕ್ಷ ರೂ.ಅನುದಾನ ಮಂಜೂರುಗೊಂಡಿದ್ದು, ಈ ಅನುದಾನ ನೆಲ್ಯಾಡಿ-ಪುತ್ಯೆ ರಸ್ತೆ ಅಭಿವೃದ್ಧಿಗೆ ಬಳಕೆಯಾಗಲಿದೆ. 5.5 ಮೀ.ಅಗಲಕ್ಕೆ ಅಂದಾಜು 400 ಮೀ.ರಸ್ತೆ ಡಾಮರೀಕರಣ ಕಾಮಗಾರಿ ನಡೆಯಲಿದೆ. ಗುತ್ತಿಗೆದಾರ ಬಪ್ಪಳಿಗೆಯ ಹರೀಶ್‌ಕುಮಾರ್ ಅವರಿಗೆ ಟೆಂಡರ್ ಆಗಿದೆ.
-ಸಿಕ್ವೇರಾ, ಇಂಜಿನಿಯರ್, ಲೋಕೋಪಯೋಗಿ ಇಲಾಖೆ

LEAVE A REPLY

Please enter your comment!
Please enter your name here