ನೆಲ್ಯಾಡಿ: ಶ್ರೀ ವಿಷ್ಣುಮೂರ್ತಿ ಮಹಾದ್ವಾರ ಲೋಕಾರ್ಪಣೆ

0

ಆಧ್ಯಾತ್ಮಿಕ, ಸಾಮಾಜಿಕ ಸೇವೆಯಿಂದ ಬದುಕು ಪರಿಪೂರ್ಣ: ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ

ನೆಲ್ಯಾಡಿ: ಸೇವೆ ನಿಸ್ವಾರ್ಥ ಆಗಿರಬೇಕು. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆ ಮೂಲಕ ಬದುಕು ಪರಿಪೂರ್ಣ ಆಗಲಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಅವರು ನೆಲ್ಯಾಡಿ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವಿಷ್ಣುಮೂರ್ತಿ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾವು ಮಾಡುವ ಆಚಾರ ಹಾಗೂ ಸತ್ಕರ್ಮಗಳು ನಮ್ಮನ್ನು ಸದಾ ಕಾಪಾಡುತ್ತವೆ. ಶ್ರದ್ಧಾಕೇಂದ್ರಗಳಲ್ಲಿ ಕಾಲಕಾಲಕ್ಕೆ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ನಡೆಯುವುದು ನಾಡಿನ ಅಭಿವೃದ್ಧಿಯ ಸಂಕೇತವಾಗಿದೆ. ದೇವಸ್ಥಾನದ ಇರುವಿಕೆ, ದೇವರ ಮೇಲಿನ ಭಕ್ತಿ ತೋರ್ಪಡಿಕೆಗೆ ಮಹಾದ್ವಾರಗಳ ಅವಶ್ಯಕತೆ ಇದೆ ಎಂದು ನುಡಿದರು.


ಅಯೋಧ್ಯೆಯಲ್ಲಿ ಅದ್ಬುತ ಶಿಲ್ಪಕಲೆ:
ಅಯೋಧ್ಯೆಗೆ ತೆರಳಿದ್ದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಅಲ್ಲಿಂದ ಆಗಮಿಸಿದವರು ಮಾ.8ರಂದು ಬೆಳಿಗ್ಗೆ ನೇರವಾಗಿ ಪಡುಬೆಟ್ಟು ದೇವಸ್ಥಾನಕ್ಕೆ ಆಗಮಿಸಿದರು. ಅಯೋಧ್ಯೆಯಲ್ಲಿ ನಡೆದ ಉತ್ಸವದಲ್ಲಿ ಭಾಗವಹಿಸಿದ ಸವಿನೆನಪು ಹಂಚಿಕೊಂಡ ಸ್ವಾಮೀಜಿ, ಶ್ರೀ ರಾಮನಿಗೆ ಭವ್ಯ ರಾಮಮಂದಿರ ನಿರ್ಮಾಣ ಆಗುವ ಮೂಲಕ ದೇಶ ರಾಮರಾಜ್ಯ ಆಗುತ್ತಿದೆ. ಭವ್ಯ ಮಂದಿರದಲ್ಲಿ ಅದ್ಬುತ ಶಿಲ್ಪ ಕಲೆಯಿದೆ. ಭಕ್ತರು ತಮಗೆ ಅನುಕೂಲ ಸಮಯದಲ್ಲಿ ಅಯೋಧ್ಯೆಗೆ ಭೇಟಿ ನೀಡುವಂತೆ ಹೇಳಿದರು.

ಅತಿಥಿಯಾಗಿದ್ದ ಸೌತಡ್ಕ ನೈಮಿಷ ಡ್ರೈಫ್ರುಟ್ಸ್ ಮತ್ತು ಸ್ಪೈಸಸ್‌ನ ಬಾಲಕೃಷ್ಣ ನೈಮಿಷ ಅವರು ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಊರಿನ ಭಕ್ತರು ಸಹಕರಿಸಬೇಕು. ಇನ್ನೊಬ್ಬರ ಏಳಿಗೆ ಬಗ್ಗೆ ಅಸೂಯೆ ಪಡದೇ ಒಗ್ಗಟ್ಟಿನಿಂದ ಬಾಳಬೇಕು. ಸಮಾಜದಿಂದ ಪಡೆದ ಒಂದಂಶವನ್ನು ಸಮಾಜಕ್ಕೆ ಅರ್ಪಿಸಬೇಕು. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಆರ್ಥಿಕ ನೆರವು ನೀಡಬೇಕೆಂದು ಹೇಳಿದರು. ಬೆನ್ನು ಮುರಿತಕ್ಕೊಳಗಾದವರ ಚಿಕಿತ್ಸೆಗಾಗಿ ಸೌತಡ್ಕದಲ್ಲಿ ‘ಸೇವಾಧಾಮ’ ಎಂಬ ಪುನಶ್ಚೇತನ ಕೇಂದ್ರ ತೆರೆಯಲಾಗಿದೆ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವಂತೆ ಹೇಳಿದರು.

ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಹಾಗೂ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪಾದಸ್ಪರ್ಶದ ಬಳಿಕ ಭಕ್ತರ ಸಹಕಾರ ದೊರೆತು ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕೆಲಸ ನಡೆದಿದೆ. ಅರ್ಚಕರಿಗೆ ಮನೆ, ವಿಷ್ಣು ಸಭಾಭವನ ನಿರ್ಮಾಣಗೊಂಡಿದೆ. ಇದೀಗ ಮಹಾದ್ವಾರ ನಿರ್ಮಾಣಗೊಂಡಿದೆ. ಮುಂದೆ ಶೌಚಾಲಯ, ದೇವಸ್ಥಾನದ ಮುಂಭಾಗ ಶೀಟ್ ಅಳವಡಿಕೆಗೆ ನಿರ್ಧರಿಸಲಾಗಿದ್ದು ಇದಕ್ಕೆ ಭಕ್ತರು ಸಹಕಾರ ನೀಡಬೇಕೆಂದು ಹೇಳಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸುಬ್ರಹ್ಮಣ್ಯ ಶಬರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಾರ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಶಿವಪ್ರಸಾದ್ ಬೀದಿಮಜಲು ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ.ಟಿ ನಿರೂಪಿಸಿದರು.

ಪ್ರತಿಷ್ಠಾ ವಾರ್ಷಿಕೋತ್ಸವ:
ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅನಂತರ ದೈವಗಳ ನೇಮೋತ್ಸವ ನಡೆಯಿತು. ಬೆಳಿಗ್ಗೆ 7.00ರಿಂದ ಸಂಜೆ 6.00ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಸನ್ಮಾನ:
ಸುಮಾರು 5 ಲಕ್ಷ ರೂ.ವೆಚ್ಚದಲ್ಲಿ ಮಹಾದ್ವಾರ ನಿರ್ಮಾಣಗೊಂಡಿದ್ದು ಈ ಹಿನ್ನೆಲೆಯಲ್ಲಿ ದ್ವಾರ ಸಮಿತಿಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರನ್ನು ದೇವಸ್ಥಾನದ ಪರವಾಗಿ ಸ್ವಾಮೀಜಿಯವರು ಪೇಟ, ಹಾರಾರ್ಪಣೆ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು. ಮಹಾದ್ವಾರ ನಿರ್ಮಾಣದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ, 5 ಸಾವಿರ ರೂ.ದೇಣಿಗೆ ನೀಡಿದವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here