ಕೇಂದ್ರ ಸರಕಾರದಿಂದ ದ.ಕ ಜಿಲ್ಲೆ ರೂ.1 ಲಕ್ಷ ಕೋಟಿ ಅನುದಾನ-ನಳಿನ್ ಕುಮಾರ್ ಕಟೀಲ್
ಪುತ್ತೂರು: ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಬಳಿಕ ಅಭಿವೃದ್ಧಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ದ.ಕ ಜಿಲ್ಲೆಗೆ ಕೇಂದ್ರ ಸರಕಾರದಿಂದ ರೂ.1ಕೋಟಿ ಅನುದಾನ ಬಂದಿರುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಲ್ನಾಡು ಗ್ರಾಮದ ಕುರುಡಕಟ್ಟೆ-ಬೈರಮೂಲೆ-ಕೆಳಗಿನಮನೆ ರಸ್ತೆಗೆ ಸಂಸದರ ನಿಧಿ ರೂ.15 ಲಕ್ಷ ಅನುದಾನದಲ್ಲಿ ನಡೆಯಲಿರುವ ಕಾಂಕ್ರಿಟೀಕರಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ವಿಕಸಿತ ಭಾರತ ಕಲ್ಪನೆಯಂತೆ ಹೆಚ್ಚು ಅನುದಾನ ಕೇಂದ್ರ ಸರಕಾರದಿಂದ ಬರುತ್ತಿದೆ. ಅನುದಾನದ ಬಗ್ಗೆ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವವರು ಕಣ್ಣುಬಿಟ್ಟು ನೀಡಿಕೊಳ್ಳಬೇಕು. ಜಿಲ್ಲೆಯಲ್ಲಿ ನಮ್ಮ ಅವಧಿಯಲ್ಲಿ ಚತುಷ್ಪಥ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು ಈ ಕಾಮಗಾರಿಗಳಿಗರ ರೂ.20,000 ಕೋಟಿ ಅನುದಾನ ಬಂದಿದೆ. ರೈಲ್ವೇ ಇಲಾಖೆ ಅಭಿವೃದ್ಧಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಲೆಕ್ಟ್ರೋವಿಷನ್ ರೈಲು ಓಡಾಟ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಅಂಡರ್ ಪಾಸ್ ನಾಲ್ಕರಿಂದ ಇಪ್ಪತ್ತೇಳಕ್ಕೆ ಏರಿಕೆಯಾಗಿದೆ. ಪ್ಲೈಓವರ್ 2ರಿಂದ 42ಕ್ಕೆ ಏರಿಕೆಯಾಗಿದೆ. ಬಹುಗ್ರಾಮ ಕುಡಿಯುವ ನೀರು, ನರೇಗಾ, ಸಡಕ್ ಯೋಜನೆಗಳ ಮೂಲಕ ಅತೀ ಹೆಚ್ಚು ಅನುದಾನ ಬಂದಿದೆ. ಮಂಗಳೂರಿನಲ್ಲಿ ಸುಮಾರು 27,000 ಮನೆಗಳಿಗೆ ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜು ಆಗುತ್ತಿದ್ದು ಮುಂದಿನ ಎರಡು ವರ್ಷದಲ್ಲಿ ಪುತ್ತೂರಿನಲ್ಲಿಯೂ ಪ್ರತಿ ಮನೆಗಳಿಗೆ ಪೈಪ್ ಲೈನ್ ಮೂಲಕ ಗ್ಯಾಸ್ ಬರಲಿದೆ. ಮಾಣಿ-ಮೈಸೂರು ಚತುಷ್ಪಥ ಕಾಮಗಾರಿಗೆ ಡಿಪಿಆರ್ ಆಗಿದ್ದು ಟೆಂಡರ್ ಹಂತದಲ್ಲಿದೆ. ಈ ಕಾಮಗಾರಿಯು ಪೂರ್ಣಪ್ರಮಾಣದಲ್ಲಿ ಕೇಂದ್ರ ಸರಕಾರ ಹೆದ್ದಾರಿ ಇಲಾಖೆಯಿಂದ ನಡೆಯುತ್ತಿದ್ದರೂ ಕೆಲವರು ನಾನು ಮಾಡಿದ್ದು ಎಂದು ಹೇಳುತ್ತಿದ್ದಾರೆ. ಶಿರಾಡಿ ಘಾಟಿಯ ಚತುಷ್ಪಥ ಹಾಗೂ ಟನಲ್ ನಿರ್ಮಾಣಕ್ಕೆ ಟೆಂಡರ್ ಆಗಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕರಾದ ಕಿರಣ್ ಶೆಟ್ಟಿ ಕಬ್ಬಿನಹಿತ್ತಿಲು, ಚಂದ್ರಶೇಖರ ರಾವ್ ಬಪ್ಪಳಿಗೆ, ಅರುಣ್ ವಿಟ್ಲ, ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷ ರವಿಚಂದ್ರ, ಸದಸ್ಯರಾದ ಕೃಷ್ಣಪ್ಪ, ವಸಂತಿ, ನಿವೃತ್ತ ಮುಖ್ಯಗುರು ಜಯರಾಮ ರೈ, ರಾಮಚಂದ್ರ ರೈ ಬೀಡು ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು. ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಕ್ಷಯ್ ಬಲ್ನಾಡು ಸ್ವಾಗತಿಸಿ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್ ವಂದಿಸಿದರು.