ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಮಾ.9ರಂದು ರಾತ್ರಿ ದೇವರ ದರ್ಶನ ಬಲಿ ಹಾಗೂ ದೈವಗಳ ನೇಮೋತ್ಸವು ನೆರವೇರಿತು.
ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಮಾ.8ರಂದು ಸಂಜೆ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಪ್ರವೇಶ ರಾತ್ರಿ ರಂಗಪೂಜೆ ನಡೆಯಿತು. ಮಾ.8ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ದೈವಗಳ ಭಂಡಾರ ತೆಗೆದ ನಂತರ ಶ್ರೀದೇವರ ಬಲಿ ಹೊರಟು, ಉತ್ಸವ, ವಸಂತ ಕಟ್ಟೆಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿಭೂತ, ಗುಳಿಗ ದೈವಗಳ ನೇಮೋತ್ಸವ, ಮಾ.10ರಂದು ಕಲಶ, ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳು ಸಂಪನ್ನಗೊಂಡಿತು.