ಮತ್ತೆ ಅಡಿಕೆ ಆಮದು ಸತ್ಯಕ್ಕೆ ದೂರ-ಶೋಭಾ ಕರಂದ್ಲಾಜೆ
ಕಡಬ: ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ಬಗ್ಗೆ ಈ ಹಿಂದಿನ ಸರಕಾರ ವರದಿ ನೀಡಿದ್ದರಿಂದ ಅದು ಸುಪ್ರೀಂ ಕೋರ್ಟ್ನಲ್ಲಿದೆ ಅದರಿಂದ ರೇಟ್ ಇಳಿಕೆ ಕಂಡಿತ್ತು. ಆದರೆ ನಾವು ಅಡಿಕೆ ಆರೋಗ್ಯಕ್ಕೆ ಹಾನಿಕರ ಅಲ್ಲ ಎಂಬುದನ್ನು ಸಾಬೀತು ಪಡಿಸಲು ದೇಶದ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿಸಿಕೊಂಡು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಭಾರತ ಸರಕಾರ ರೂಪಾಯಿ 10 ಕೋಟಿ ರೂ. ಹಣ ಮೀಸಲಿಟ್ಟು ಮುಂದಕ್ಕೆ ಹೆಜ್ಜೆ ಇಟ್ಟು ಮೊನ್ನೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದ ಕಿದು ಸಿಪಿಸಿಆರ್ಐನಲ್ಲಿ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಬಗ್ಗೆ ಕೇಂದ್ರದ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೆವು. ಅಡಿಕೆ ಪರವಾಗಿ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದರು. ಅಡಿಕೆ ಹಾನಿಕಾರ ಅಲ್ಲ ಎಂಬ ವೈಜ್ಞಾನಿಕ ವರದಿ ಬೇಕು. ಈ ಬಗ್ಗೆ ಕಾನೂನಾತ್ಮಕ ಕ್ರಮಕ್ಕೆ ಅವರು ಬೆಂಬಲ ಸೂಚಿಸಿದ್ದರು ಎಂದರು.
ಅಡಿಕೆ ಆಮದು ಇಲ್ಲ;
ಮತ್ತೆ ಅಡಿಕೆ ಆಮದು ಮಾಡಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. 2020-21ರಲ್ಲಿ ಭೂತಾನ್ನಿಂದ ಅಡಿಕೆ ಆಮದಿಗೆ ಯಾವುದೇ ಸಮಸ್ಯೆ ಆಗದಂತೆ ಅನುಮತಿ ನೀಡಲಾಗಿತ್ತು. ಈ ವರ್ಷ ಭೂತಾನ್ ಸಹಿತ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಲು ಅನುಮತಿ ನೀಡಿಲ್ಲ, ಈ ಬಗ್ಗೆ ಸರಕಾರದಿಂದ ಯಾವುದೇ ಆದೇಶವಾಗಿಲ್ಲ. ಈಗ ವಿದೇಶದಿಂದ ಅಡಿಕೆ ಆಮದು ಎಂಬ ಸುದ್ದಿ ಹಬ್ಬಿಸಿ ದರ ಕುಸಿತ ಮಾಡಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ ಶೋಭಾ ಕರಂದ್ಲಾಜೆ ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ನಿರ್ವಹಣೆಗೆ 225 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಪೂರಕ ಆರೋಗ್ಯಕ್ಕೆ ಕ್ರಮಕ್ಕೆ ರಾಜ್ಯಕ್ಕೆ ಸೂಚನೆ ನೀಡಿದ್ದೇವೆ ಎಂದರು. ತೆಂಗಿನಲ್ಲಿ ಕಂಡು ಬಂದ ರೋಗ ಪರಿಹಾರ ಹಾಗೂ ಅಧ್ಯಯನಕ್ಕೂ ಕೇಂದ್ರದಿಂದ ಕೋಟ್ಯಾಂತರ ಹಣ ನೀಡಲಾಗಿದೆ ಎಂದರು.
ರೈತರ ಜೊತೆ ಭಾರತ ಸರಕಾರವಿದೆ;
ಕೃಷಿಕರು, ರೈತರ ಹಿತ ಕಾಯುವಲ್ಲಿ ನರೇಂದ್ರ ಮೋದಿ ಸರಕಾರ ಸದಾ ಜತೆಯಾಗಿದೆ. ರೈತರು ಒಂದೇ ಬೆಳೆಯನ್ನು ಹೊಂದಿಕೊಳ್ಳದೇ ಮಿಶ್ರ ಬೆಳೆಯನ್ನು ಬೆಳೆದು ಆದಾಯ ಗಳಿಸಲು ಮುಂದಾಗಬೇಕು ಎಂದ ಅವರು, ಸರಕಾರದ ಸಹಕಾರ ಪಡೆದು ಕೃಷಿಯಲ್ಲೂ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಬಹುದು ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಕೃಷಿಯೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೃಷಿಕರಿಗೆ ಪರಿಹಾರ ಸೂಚಿಸಬೇಕು ಎಂಬ ನಿಟ್ಟಿನಲ್ಲಿ ಸಿಪಿಸಿಆರ್ಐ ಸಂಸ್ಥೆ ಕೃಷಿ ಮೇಳ ನಡೆಸುತ್ತಿರುವುದು ಶ್ಲಾಘನೀಯ. ಹಿಂದೆ ಗದ್ದೆ ಜೊತೆಗೆ ತೆಂಗು ಬೆಳೆದು ಜೀವನ ನಡೆಸುತ್ತಿದ್ದರು. ಆದರೆ ಇಂದು ಆಧುನಿಕ ಲೋಕಕ್ಕೆ ಮಾರು ಹೋಗಿ ನಮ್ಮ ಇಳುವರಿ ಕಳೆದುಕೊಳ್ಳುತ್ತಿದ್ದೇವೆ ಎಂದರು.
ಕೇಂದ್ರದ ತೋಟಗಾರಿಕಾ ಡಿಡಿಜಿ ಡಾ| ಸಂಜೀವ್ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಭಾರತ ಸರಕಾರದ ತೋಟಗಾರಿಕಾ ಇಲಾಖೆ ಆಯುಕ್ತ ಡಾ| ಪ್ರಭಾತ್ ಕುಮಾರ್, ಕೋಝೀಕೋಡ್ ಡಿಎಎಸ್ಡಿ ನಿರ್ದೇಶಕ ಹೋಮಿ ಚೆರಿಯನ್, ಕೊಚ್ಚಿ ಸಿಡಿಬಿ ಸಿಸಿಡಿಒ ಡಾ| ಬಿ.ಹನುಮಂತೇ ಗೌಡ, ಬಿಳಿನೆಲೆ ಗ್ರಾ.ಪಂ. ಸದಸ್ಯ ಸತೀಶ್ ಕಳಿಗೆ, ಕಿದು ಸಿಪಿಸಿಆರ್ಐ ವಿಜ್ಞಾನಿ ದಿವಾಕರ ವೈ ಮತ್ತಿತರರು ಉಪಸ್ಥಿತರಿದ್ದರು. ಸಿಪಿಸಿಆರ್ಐ ಕಾಸರಗೋಡು ನಿರ್ದೇಶಕ ಡಾ| ಕೆ.ಬಿ.ಹೆಬ್ಬಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಡಾ| ವಿ.ನಿರಲ್ ವಂದಿಸಿದರು. ವಿಟ್ಲ ಸಿಪಿಸಿಆರ್ಐ ಹಿರಿಯ ವಿಜ್ಞಾನಿ ಡಾ| ನಾಗರಾಜ್ ಎನ್.ಆರ್. ಕಾರ್ಯಕ್ರಮ ನಿರೂಪಿಸಿದರು.
ಕಲ್ಪ ಸುವರ್ಣ ತಳಿ ಬಿಡುಗಡೆ;
ಸಿಪಿಸಿಆರ್ಐ ಅಭಿವೃದ್ಧಿಗೊಳಿಸಿದ ಕಲ್ಪ ಸುವರ್ಣ ಗಿಡ್ಡ ತಳಿಯ ಬಿಡುಗಡೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಿದರು. ಬಳಿಕದಲ್ಲಿ ಕೊಕ್ಕೋ ಸಂಕರಣ ವಿಟ್ಲ ಕೊಕ್ಕೋ ಹೈಬೀಡ್ 1, ವಿಟ್ಲ ಕೊಕ್ಕೋ ಹೈಬ್ರೀಡ್ 2 ತಳಿಯನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು. ಕೃಷಿಕರಿಗೆ ವಿತರಣೆ ಮಾಡಲಾಯಿತು. ತರಬೇತುದಾರರಿಗೆ ಪ್ರಮಾಣಪತ್ರ ಹಾಗೂ ಉಪಕರಣ, ಸುಧಾರಿತ ತೆಂಗಿನ ತಳಿಗಳ ಪ್ರಕಟಣೆ ಬಿಡುಗಡೆ ಮಾಡಲಾಯಿತು.
ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ
ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನೆಟ್ಟಣ ಕಿದು ಸಿಪಿಸಿಆರ್ಐ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂದರ್ಭ, ಈ ಬಾರಿ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧೆ ಮಾಡುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ,ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ನಗುತ್ತಾ ಉತ್ತರಿಸಿದರು.
ಪ್ರಸ್ತುತ ಸಂಸದರಾಗಿ ಪ್ರತಿನಿಧಿಸುತ್ತಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವ ಕುರಿತು ಕೇಳಿದಾಗ, ರಾಜಕೀಯ ಎಂದರೆ ಅಸಮಾಧಾನಗಳು ಇರುತ್ತೆ.ಗೆಲ್ಲುವ ಸೀಟನ್ನು ಎಲ್ಲರೂ ಕೇಳುತ್ತಾರೆ.ಸೀಟು ಕೇಳುವಾಗ ಗೊಂದಲಗಳು ಆಗಿಯೇ ಆಗುತ್ತದೆ.ಆದರೆ ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ಹೇಳಿದರಲ್ಲದೆ, ಕೊನೆಗೆ ಕೇಂದ್ರದ ಚುನಾವಣಾ ಮಂಡಳಿ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಗೆಲುವು:
ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಘೋಷಣೆ ಆಗಲಿದೆ.ಭಾರತೀಯ ಜನತಾ ಪಾರ್ಟಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ.ಅದಕ್ಕೆ ನಾವು ಬದ್ಧರಾಗಿದ್ದೇವೆ.ಕಳೆದ 10 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದ ಅಭಿವೃದ್ಧಿಯಾಗಿದೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ರೈಲು ವಿದ್ಯುದೀಕರಣ, ಅಮೃತ ಯೋಜನೆಯಡಿ ಸುಬ್ರಹ್ಮಣ್ಯ,ಉಡುಪಿ, ಚಿಕ್ಕಮಗಳೂರು ಭಾಗದ ರೈಲು ನಿಲ್ದಾಣ ಆಯ್ಕೆಗೊಂಡು ಅಭಿವೃದ್ಧಿ ಆಗುತ್ತಿದೆ.ಸಿಆರ್ಎಫ್ ನಲ್ಲಿ ರಸ್ತೆ ಬಂದಿದೆ,ಯಾವುದೇ ಹಳ್ಳಿಗಳಿಗೆ ತೆರಳಿದರೂ ಶೇ.80-90ರಷ್ಟು ಜನರು ಕೇಂದ್ರದ ಬೇರೆ ಬೇರೆ ಯೋಜನೆಗಳನ್ನು ಪಡೆದುಕೊಂಡಿದ್ದಾರೆ.ಅಭಿವೃದ್ಧಿ ಆಧಾರದಲ್ಲಿಯೇ ಓಟು ಕೇಳಲಿದ್ದೇವೆ ಎಂದ ಅವರು ಕರ್ನಾಟಕದಲ್ಲಿ ಬಿಜೆಪಿ ಶೇ.100ರಷ್ಟು ಗೆಲುವು ಸಾಧಿಸುವ ವಿಶ್ವಾಸ ಇದೆ. ನರೇಂದ್ರ ಮೋದಿ ಅವರು ಅಭಿವೃದ್ಧಿಗಾಗಿ ಇಲ್ಲಿಗೆ ಬಂದಿದ್ದಾರೆ.ಜನರಿಗೆ ಮೋದಿ ಬೇಕಿದೆ ಎಂದರು.