ಸ್ವಾಭಿಮಾನದ ನಡೆಯಲ್ಲಿ ಮಹಿಳೆಯರು ಸಾಗಬೇಕು- ಸುಮ ಆಶೋಕ್ ರೈ
ಪುತ್ತೂರು: ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯರು ದೃಢ ನಿರ್ಧಾರ, ಆಚಲವಾದ ನಂಬಿಕೆಯನ್ನು ಇಟ್ಟು, ಸ್ವಾಭಿಮಾನದ ನಡೆಯಲ್ಲಿ ಸಾಗಿದಾಗ ಸಮಾಜಲ್ಲಿ ತಾವು ಕೈಗೊಂಡ ಯಾವುದೇ ಕಾರ್‍ಯದಲ್ಲಿ ಯಶಸ್ಸು ಖಚಿತ ಎಂದು ಶಾಸಕ ಅಶೋಕ್ ಕುಮಾರ್ ರೈಯವರ ಪತ್ನಿ ಉದ್ಯಮಿ ಸುಮಾ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.
ಮಾ.10ರಂದು ಪುತ್ತೂರು ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿದ ಮಹಿಳಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಭಾ ಕಾರ್‍ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ, ನೆರವೇರಿಸಿ ಅವರು ಮಾತನಾಡಿದರು. ಮಹಿಳೆಯರು ಸ್ವ-ಉದ್ಯೋಗ ಕ್ಷೇತ್ರದತ್ತ ಹೆಚ್ಚಿನ ಗಮನವನ್ನು ಹರಿಸಬೇಕು, ಮಹಿಳೆ ಎಂದಿಗೂ ಅಬಲೆಯಲ್ಲ. ಇಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಹತ್ತಿರವಾಗಿದೆ. ಪರಿಪೂರ್ಣವಾದ ಶಿಕ್ಷಣವನ್ನು ಪಡೆದುಕೊಂಡು, ಬಂಟ ಮಹಿಳೆಯರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು ಎಂದು ಹೇಳಿದ ಅವರು, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆಯಾಗಿ ಸಬಿತಾ ಭಂಡಾರಿರವರು ನಡೆಸಿಕೊಟ್ಟ ಎಲ್ಲಾ ಕಾರ್‍ಯಕ್ರಮಗಳನ್ನು ಗಮನಿಸಿದ್ದೇನೆ, ತುಂಬಾ ಅರ್ಥಪೂರ್ಣ ಕಾರ್‍ಯಕ್ರಮದ ಮೂಲಕ ಮಹಿಳಾ ಬಂಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೆಸರನ್ನು ತಂದಿದ್ದಾರೆ ಎಂದು ಸಬಿತಾ ಭಂಡಾರಿಯವರನ್ನು ಅಭಿನಂದಿಸಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಒಟ್ಟಾಗಿ ಒಂದಾಗಿ ಕಾರ್‍ಯಕ್ರಮ ಸಂಘಟಿಸಿ ಯಶಸ್ಸು ಕಂಡಿದ್ದಾರೆ ಎಂದು ಹೇಳಿದರು.
ಮಹಿಳಾ ಬಂಟರ ಸಂಘಟನೆಯನ್ನು ಬಲಪಡಿಸಬೇಕು- ಸಬಿತಾ ಭಂಡಾರಿ: ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ ಸಮಾಜದ ಮಹಿಳೆಯರು ಒಗ್ಗಟ್ಟಾಗಿ, ಮಹಿಳಾ ಬಂಟರ ಸಂಘಟನೆಯನ್ನು ಬಲಪಡಿಸಬೇಕು ಎಂದು ಹೇಳಿ, ತನ್ನ ಅವಧಿಯಲ್ಲಿ ಸಹಕಾರವನ್ನು ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಬಂಟ ಮಹಿಳೆಯರು ಸಮಾಜದಲ್ಲಿ ಯಶಸ್ಸಿನ ಹಾದಿಯಲ್ಲಿ- ಹೇಮನಾಥ ಶೆಟ್ಟಿ: ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಬಂಟ ಮಹಿಳೆಯರು ಸಮಾಜದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶ್ಸಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಮಹಿಳೆಯರು ಉನ್ನತವಾದ ಶಿಕ್ಷಣದತ್ತ ಹೆಚ್ಚಿನ ಗಮನವನ್ನು ನೀಡಬೇಕು ಎಂದು ಹೇಳಿದರು.
ಉತ್ತಮ ಕೆಲಸ- ಶಶಿಕುಮಾರ್ ರೈ: ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ಅವರ ತಂಡ ಉತ್ತಮ ಕೆಲಸವನ್ನು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಗ್ರಾಮದಲ್ಲಿ ಸಂಘಟಿಸಬೇಕು- ದಯಾನಂದ ರೈ: ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಮಹಿಳಾ ಬಂಟರ ಸಂಘವನ್ನು ಪ್ರತಿ ಗ್ರಾಮ ಗ್ರಾಮದಲ್ಲಿ ಸಂಘಟಿಸಬೇಕು ಎಂದು ಹೇಳಿದರು.
ಲೇಖಕಿ ವಿಜಯ ಶೆಟ್ಟಿ ಸಾಲೆತ್ತೂರುರವರು ಆಶಯ ಭಾಷಣಗೈದರು.
ತಾಲೂಕು ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆಯಾಗಿರುವ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ರವರು ಮಾತನಾಡಿ ಸಬಿತಾ ಭಂಡಾರಿ ಮತ್ತು ತಂಡವು ಸಂಘಟಿಸಿದ ಎಲ್ಲಾ ಕಾರ್‍ಯಕ್ರಮಗಳು ತುಂಬಾ ಉತ್ತಮವಾಗಿ ನಡೆದಿದೆ ಎಂದು ಹೇಳಿದರು.
ಸಬಿ ನೆಂಪು ಬಿಡುಗಡೆ: ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಮತ್ತು ಅವರ ತಂಡ 2022-24ರ ಅವಧಿಯಲ್ಲಿ ನಡೆಸಿಕೊಟ್ಟ ಕಾರ್‍ಯಕ್ರಮದ ಪೂರ್ಣ ವರದಿಯ ಕಿರು ಪುಸ್ತಕ ಸಬಿ ನೆಂಪು ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕುಸುಮ ಪಿ.ಶೆಟ್ಟಿಯವರು ಸಂಚಿಕೆಯ ಬಗ್ಗೆ ಮಾತನಾಡಿ ಸಬಿ ನೆಂಪು ಸಂಚಿಕೆಯ ನಿರ್ವಹಣೆಗೈದ ತಾಲೂಕು ಬಂಟರ ಸಂಘದ ನಿರ್ದೇಶಕ ರಾಕೇಶ್ ರೈ ಕೆಡೆಂಜಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ವೇದಿಕೆಯಲ್ಲಿ ಮಾಲಿನಿ ಎಂ. ಶೆಟ್ಟಿ ನಡಿಬೈಲುಬೀಡು ಉಪಸ್ಥಿತರಿದ್ದರು.
ಸನ್ಮಾನ:ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ, ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಕೃಷ್ಣವೇಣಿ ಕೆ.ರೈ ಮತ್ತು ಸವಣೂರು ಗ್ರಾ.ಪಂ, ಅಧ್ಯಕ್ಷೆಯಾಗಿ ಸಾಧನೆಗೈದ ರಾಜೀವಿ ವಿ. ಶೆಟ್ಟಿ ಕೆಡೆಂಜಿರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ಸನ್ಮಾನಿಸಲಾಯಿತು. ಆಟೋಟ ಸ್ವರ್ಧೆಗಳನ್ನು ಮಾಧವಿ ರೈ ಮತ್ತು ರೂಪರೇಖಾ ಆಳ್ವರವರು ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್‍ಯಕ್ರಮವನ್ನು ಮಹಿಳಾ ಬಂಟರ ಸಂಘ ಕೈಕಾರ ವಲಯದವರು ನಡೆಸಿಕೊಟ್ಟರು. ಮಾಲಿನಿ ಎಂ. ಶೆಟ್ಟಿ ಮಲ್ಲಿಕಾ ಜೆ.ರೈರವರು ಹಾಡು ಹಾಡಿದರು. ಶಕುಂತಳಾ ವಿ.ಕೆ.ಶೆಟ್ಟಿ ಪ್ರಾರ್ಥನೆಗೈದರು. ದೀಪ್ತಿ ರಾಕೇಶ್ ರೈ ಕೆಡೆಂಜಿ, ಅನಿತಾ ಹೇಮನಾಥ ಶೆಟ್ಟಿ, ವತ್ಸಲಾ ಪದ್ಮನಾಭ ಶೆಟ್ಟಿರವರುಗಳು ಸನ್ಮಾನಿತರ ಪರಿಚಯಗೈದರು.
ಧನಸಹಾಯ ವಿತರಣೆ: ಅನನ್ಯಾ ಬಿ.ಶೆಟ್ಟಿ ನೆಲ್ಯಾಡಿ, ಸ್ವಂದನಾ ರವರ ವಿದ್ಯಾಭ್ಯಾಸಕ್ಕೆ ಧನಸಹಾಯ ವಿತರಣೆ ಮಾಡಲಾಯಿತು. ಕುಸುಮ ಪಿ.ಶೆಟ್ಟಿ, ಭವ್ಯ ರೈ, ಜಯಂತಿ ಎಂ. ರೈ, ಜಯ ಆರ್ ಶೆಟ್ಟಿ, ಸುಚೇತಾ ಎಸ್ ಶೆಟ್ಟಿ, ಗೀತಾ ಮೋಹನ್ ರೈ ನರಿಮೊಗರು, ಶಿಲ್ಪಾ ಹರಿಪ್ರಸಾದ್ ರೈ ತಿಂಗಳಾಡಿರವರು ಅತಿಥಿಗಳನ್ನು ಗೌರವಿಸಿದರು, ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ ಸ್ವಾಗತಿಸಿ, ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ ವಂದಿಸಿದರು. ಪ್ರಧಾನ ಕಾರ್‍ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.