ಹಿರಿಯ ಕರಸೇವಕ, ನಟ್ಟೋಜ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್‌ ದೈವಾಧೀನ

0

ಪುತ್ತೂರು: ಅಂಬಿಕಾ ವಿದ್ಯಾ ಸಂಸ್ಥೆಗಳ ಮಾತೃಸಂಸ್ಥೆ ನಟ್ಟೋಜ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ್ ರಾವ್ (93) ಪುತ್ತೂರಿನ ಆಸ್ಪತ್ರೆಯಲ್ಲಿ ಮಾ.12ರಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪ್ರಗತಿಪರ ಕೃಷಿಕರಾಗಿದ್ದ ಇವರು, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಸಕ್ರೀಯರಾಗಿದ್ದು, ವಿಶ್ವ ಹಿಂದೂ ಪರಿಷತ್ ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಯೋಧ್ಯೆಯ ರಾಮಮಂದಿರ ಹೋರಾಟದಲ್ಲೂ ಗುರುತಿಸಿಕೊಂಡಿದ್ದ ಶಿವಾನಂದ್ ರಾವ್, ಮಾಜಿ ಶಾಸಕ ರಾಮ್ ಭಟ್ ಅವರ ಆತ್ಮೀಯರಾಗಿದ್ದರು. ಮೃತರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಅಂಬಿಕಾ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗುವುದರ ಹಿಂದೆ ಧರ್ಮ, ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಶಿವಾನಂದ್ ರಾವ್ ಅವರ ಕೊಡುಗೆ ಬಹಳಷ್ಟಿದೆ. ಸ್ಪಷ್ಟವಾದ ಆದರ್ಶ, ಮಕ್ಕಳು ಹೀಗೆಯೇ ಬೆಳೆಯಬೇಕೆಂಬ ಆಶಯ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್‌ ಅವರ ನಿಲುವಾಗಿತ್ತು. ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸದ ಕರಸೇವಕರಲ್ಲಿ ಒಬ್ಬರಾಗಿ, ಪುತ್ತೂರು ಭಾಗದ ಹಿಂದೂ ನಾಯಕರಾಗಿ, ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಲೇಬೇಕೆಂಬ ದೃಢಸಂಕಲ್ಪದೊಂದಿಗೆ 1989ರ ಸಮಯದಲ್ಲಿ ಶ್ರೀರಾಮ ಪೂಜನ ಸಮಿತಿ ಪತ್ತೂರು ಪ್ರಖಂಡದ ಅಧ್ಯಕ್ಷರಾಗಿ ಪುತ್ತೂರಿನ ಬೀದಿ ಬೀದಿಗಳಲ್ಲಿ ಕೇರಿ ಕೇರಿಗಳಲ್ಲಿ ಜನಜಾಗೃತಿ ಮೂಡಿಸಿದ್ದರು. ಹಳ್ಳಿಹಳ್ಳಿಗಳನ್ನೂ ಸುತ್ತಾಡಿ ರಾಮಮಂದಿರ ಹೋರಾಟಕ್ಕೆ ಜನರನ್ನು ಆಣಿಗೊಳಿಸಿ ಶ್ರೀರಾಮಚಂದ್ರನ ಆದರ್ಶವನ್ನು ಪುತ್ತೂರಿನ ಮಣ್ಣಿನಲ್ಲಿ ಬಿತ್ತುವ ಪ್ರಯತ್ನವನ್ನು ದಶಕಗಳ ಕಾಲ ನಿರಂತರವಾಗಿ ಮುಂದುವರಿಸಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ 1989 ಹಾಗೂ 1992 ರಲ್ಲಿ ಎರಡು ಬಾರಿಯೂ ಕರಸೇವಕರಾಗಿ ಮುಂಚೂಣಿಯಲ್ಲಿದ್ದು ಇತರರಿಗೆ ಪ್ರೇರಣೆಯಾಗಿದ್ದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತದೆ ಎಂಬುದು ಇಡೀ ಭಾರತವೇ ಹೆಮ್ಮೆಪಡುವ ವಿಚಾರವಾಗಿತ್ತು. ಪುತ್ತೂರಿನಿಂದ 400 ರಷ್ಟು ಜನರು ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದು, ಶಿವಾನಂದ ರಾವ್‌ ಮಂಚೂಣಿಯಲ್ಲಿದ್ದರು. ಮಧ್ಯಪ್ರದೇಶದಲ್ಲಿ ಕರಸೇವಕರನ್ನು ತಡೆದು 14 ದಿನಗಳ ಕಾಲ ಜೈಲಿಗೆ ಹಾಕಿದ್ದರು. ಶಿವಾನಂದ ರಾವ್‌ ಜೈಲಿನಲ್ಲಿರುವಾಗಲೇ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯ ನಡೆದಿದ್ದು, ಆ ದೃಶ್ಯವನ್ನು ಟಿವಿಯಲ್ಲಿ ನೋಡಿ ಆನಂದಪಟ್ಟಿದ್ದರು. 1992ರಲ್ಲಿ ಮತ್ತೆ ಅಯೋಧ್ಯೆಗೆ ತೆರಳಿದ್ದ ಶಿವಾನಂದ ರಾವ್‌, ಶಿಲಾನ್ಯಾಸದ ವೇಳೆ ಅಡ್ವಾಣಿಯವರು ಪುತ್ತೂರಿನ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದನ್ನು ನೆನಪಿಸಿಕೊಳ್ಳುತ್ತಿದ್ದರು.

ಅಯೋಧ್ಯೆ ಹೋರಾಟದ ಹಿರಿಯ ಕರಸೇವಕರಾಗಿದ್ದ, ಪುತ್ತೂರು ನಗರ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ನಟ್ಟೋಜ ಶಿವಾನಂದ ರಾವ್‌ ಇಂದು ನಮ್ಮೆಲ್ಲರನ್ನು ಅಗಲಿ ದೇವರಪಾದ ಸೇರಿದ್ದಾರೆ. ಅಗಲಿದ ದಿವ್ಯಾತ್ಮಕ್ಕೆ ಪರಮಾತ್ಮ ಶಾಂತಿಯನ್ನು ನೀಡಲಿ.

LEAVE A REPLY

Please enter your comment!
Please enter your name here