ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 2 ಕೋಟಿ ರೂ ಕಾಮಗಾರಿಗೆ ಶಿಲಾನ್ಯಾಸ

0

ಕೆಲವೇ ತಿಂಗಳಲ್ಲಿ ಪುತ್ತೂರು ನಗರದ ಚಿತ್ರಣವೇ ಬದಲಾಗಲಿದೆ: ಅಶೋಕ್ ರೈ
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡುಗಳ ರಸ್ತೆ ಅಭಿವೃದ್ದಿಗೆ ಹಾಗೂ ಇತರೆ ಕಾಮಗಾರಿಗೆ 2 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ, ನಗರಸಭಾ ವ್ಯಾಪ್ತಿಯ ಬಹುಬೇಡಿಕೆಯ ಎಲ್ಲಾ ರಸ್ತೆಗಳಲ್ಲೂ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗುವುದು ಮುಂದಿನ ಕೆಲವೇ ತಿಂಗಳಲ್ಲಿ ಪುತ್ತೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಶಾಸಕರ ಕಚೇರಿಯಲ್ಲಿ ನಡೆದ ಪುತ್ತೂರು ನಗರಸಭಾ ವ್ಯಾಪ್ತಿಯ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1500ಕೋಟಿ ಅನುದಾನ ಬಂದಿರುವ ವಿಚಾರ ಬಯಲಾಗುತ್ತಿದ್ದಂತೆಯೇ ಕೆಲವರಿಗೆ ಅನುಮಾನ ಶುರುವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಸುಳ್ಳು ಹೇಳಿಯೇ ಜನರನ್ನು ಮೋಸ ಮಾಡಿದವರಿಗೆ ಮತ್ತು ಜೀವಮಾನ ಇಡೀ ಸುಳ್ಳು ಹೇಳಿದವರಿಗೆ ಬೇರೆಯವರು ಸತ್ಯ ಹೇಳಿದರೂ ಅದು ಸುಳ್ಳೇ ಎಂಬ ಸಂಶಯ ಸೃಷ್ಟಿಯಗುತ್ತದೆ. ಸದ್ಯಕ್ಕೆ ವಿರೋಧ ಪಕ್ಷದವರ ಮನೋಸ್ಥಿತಿ ಅದೇ ರೀತಿಯಾಗಿದೆ ಎಂದು ಹೇಳಿದರು.
ನಾನು ಶಾಸಕನಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1500 ಕೋಟಿ ಅನುದಾನ ಬಂದಿದೆ. ಈ ಅನುದಾನವನ್ನು ಎಲ್ಲೆಲ್ಲೆ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ನನ್ನಲ್ಲಿದೆ. ಆದರೆ ಸಂಸದರು ಹೇಳಿದ ಕೇಂದ್ರ ಸರಕಾರದ ಒಂದು ಲಕ್ಷ ಕೋಟಿ ಅನುದಾನ ಎಲ್ಲಿ ಹೋಗಿದೆ ಎಂಬುದರ ಲೆಕ್ಕವನ್ನು ಕೊಡಬೇಕು ಎಂದು ಶಾಸಕರು ಹೇಳಿದರು.

ಮೊದಲಿಗೆ ಹೈವೇ ಕೆಲಸ ಮುಗಿಸಿ
ಒಂದು ಲಕ್ಷ ಕೋಟಿಯಲ್ಲ, ಎರಡು ಲಕ್ಷ ಕೋಟಿಯಾದರೂ ಬರಲಿ ನಮಗೆ ಸಂತೋಷವೇ. ಅಭಿವೃದ್ದಿ ಯಾರೇ ಮಾಡಿದರೂ ನಾವು ಅಂಥವರಿಗೆ ಬೆಂಬಲ ಕೊಡುತ್ತೇವೆ. ಅಭಿವೃದ್ದಿಯಲ್ಲಿ ನಾವು ಎಂದೂ ರಾಜಕೀಯ ಮಾಡಿಲ್ಲ. ದ.ಕ ಜಿಲ್ಲೆಗೆ ಒಂದು ಲಕ್ಷ ಕೋಟಿ ಬಂದಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ಮಂಗಳೂರು- ಬೆಂಗಳೂರು ಹೈವೇ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿಬಿಡಿ, ಕಳೆದ 10 ವರ್ಷಗಳ ಹಿಂದೆ ಆರಂಭಗೊಂಡ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಹೈವೇಯಲ್ಲಿ ಸಂಚಾರ ಮಾಡುವವರು ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದು ರಸ್ತೆಯನ್ನು ಮಾಡಲಾಗದವರು ಕೋಟಿ ಲೆಕ್ಕದ ಬಗ್ಗೆ ಮಾತನಾಡುತ್ತಾರೆ ಎಂದು ಶಾಸಕರು ವ್ಯಂಗ್ಯವಾಡಿದರು.

ಜನ ಬಿರುಮಲೆ ಬೆಟ್ಟಕ್ಕೆ ಬರುವ ಹಾಗೆ ಮಾಡುತ್ತೇನೆ
ಪುತ್ತೂರಿನ ಬಿರುಮಲೆ ಬೆಟ್ಟವನ್ನು ನಿರ್ಲಕ್ಷ್ಯಿಸಲಾಗಿದೆ. ಇಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಪುತ್ತೂರಿನ ಸುಂದರ ಬೆಟ್ಟವಾದ ಬಿರುಮಲೆ ಬೆಟ್ಟಕ್ಕೆ 2 ಕೋಟಿ ಅನುದಾನ ಇಟ್ಟಿದ್ದೇನೆ. ಇಲ್ಲಿನ ಅಭಿವೃದ್ದಿ ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿದ್ದು, ಪುತ್ತೂರಿನ ಜನತೆ ಬೆಟ್ಟಕ್ಕೆ ಬರುವ ಹಾಗೇ ಇಲ್ಲಿ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಒಂದೊಂದಾಗಿ ಈಡೇರಿಸುತ್ತೇವೆ. ಪ್ರತೀ ವಾರ್ಡಿನ ಪ್ರತೀ ರಸ್ತೆಗೂ ಅನುದಾನವನ್ನು ನೀಡಲಾಗುವುದು. ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ ಎಂದು ಶಾಸಕರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಯವರು ಮಾತನಾಡಿ ಶಾಸಕರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here