ಕುಡಿಯುವ ನೀರು ದುರುಪಯೋಗಿಸಿದಲ್ಲಿ ಸಂರ್ಪಕ ಕಡಿತ, 2 ಸಾವಿರ ರೂ. ದಂಡ ವಸೂಲಿಗೆ ನಿರ್ಣಯ
ನೆಲ್ಯಾಡಿ: ಕುಡಿಯುವ ನೀರಿನ ದುರುಪಯೋಗ ಕಂಡುಬಂದಲ್ಲಿ ಸಂಪರ್ಕ ಕಡಿತಗೊಳಿಸಲು ಹಾಗೂ 2 ಸಾವಿರ ರೂ.ದಂಡ ವಸೂಲಿಗೆ ಕೌಕ್ರಾಡಿ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ಮಾ.13ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕುಡಿಯುವ ನೀರಿನ ಅಭಾವ ತಲೆದೋರುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಕ್ರಾಡಿ ಹಾಗೂ ಇಚ್ಲಂಪಾಡಿ ಗ್ರಾಮದಲ್ಲಿ ಗ್ರಾ.ಪಂ.ನಿಂದ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡವರು ನಳ್ಳಿ ನೀರನ್ನು ಗೃಹ ಬಳಕೆಗೆ ಮಾತ್ರ ಉಪಯೋಗಿಸಬೇಕು. ಇದರ ಹೊರತುಪಡಿಸಿ ಕೃಷಿ ತೋಟಕ್ಕೆ, ಬಾವಿಗೆ ನಳ್ಳಿ ನೀರು ಬಿಡುವುದು, ನಳ್ಳಿ ಬಂದ್ ಮಾಡದೇ ನೀರು ಪೋಲು ಮಾಡುವುದು ಕಂಡುಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅವರ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಲು ಹಾಗೂ ಅವರಿಂದ 2 ಸಾವಿರ ರೂ.ದಂಡ ವಸೂಲಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡವರು ಗೃಹಬಳಕೆಗೆ ಮಾತ್ರ ನೀರು ಬಳಸಿಕೊಳ್ಳಬೇಕೆಂದು ಕೋರಲಾಯಿತು. ಸಭೆಯಲ್ಲಿ ಇತರೇ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಾಯಿತು.
ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಭವಾನಿ, ಸವಿತಾ, ಡೈಸಿ ವರ್ಗೀಸ್, ಶೈಲಿ, ದೇವಕಿ, ಪುಷ್ಪ, ರತ್ನಾವತಿ, ಸಂಧ್ಯಾ ಪಿ.ಸಿ., ಮಹೇಶ್ ಪಿ., ಹನೀಫ್, ಜನಾರ್ದನ, ಸುಧಾಕರ, ಉದಯಕುಮಾರ್, ಕುರಿಯಾಕೋಸ್, ದಿನೇಶ್, ವಿಶ್ವನಾಥ ಅವರು ಸಭೆಯಲ್ಲಿ ಉಪಸ್ಥಿತರಿದ್ದು ವಿವಿಧ ವಿಚಾರ ಪ್ರಸ್ತಾಪಿಸಿದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿ, ಸಾರ್ವಜನಿಕ ಅರ್ಜಿ, ಸರಕಾರದ ಸುತ್ತೋಲೆಗಳನ್ನು ಸಭೆಗೆ ಮಂಡಿಸಿದರು. ಪಿಡಿಒ ದೇವಿಕಾ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.