ಅನಾಥ ವೃದ್ದೆಯ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಈಶ್ವರಮಂಗಲದ ಉದ್ಯಮಿ..!-ವೃದ್ಧೆ ಮುಲ್ಕಿಯ ಮೈಮೂನ ಫೌಂಡೇಶನ್‌ಗೆ ದಾಖಲು

0

ಪುತ್ತೂರು: ಅನಾರೋಗ್ಯಕ್ಕೀಡಾಗಿದ್ದ ಅನಾಥ ಮಹಿಳೆಯೋರ್ವರನ್ನು ಈಶ್ವರಮಂಗಲದ ಉದ್ಯಮಿಯೋರ್ವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಆ ಬಳಿಕ ಮೂಲ್ಕಿ ಹಳೆಯಂಗಡಿಯಲ್ಲಿರುವ ಮೈಮೂನ ಫೌಂಡೇಶನ್ ಸೆಂಟರ್‌ಗೆ ದಾಖಲಿಸಿದ ಘಟನೆ ನಡೆದಿದೆ.


ನೆ.ಮುಡ್ನೂರು ಗ್ರಾಮದ ಮೇನಾಲ ನಿವಾಸಿ 85 ವರ್ಷ ಪ್ರಾಯದ ಐಸಮ್ಮ ಅವರು ಮಾತ್ರ ಮನೆಯಲ್ಲಿ ವಾಸವಾಗಿದ್ದು ಅವರಿಗೆ ಮಕ್ಕಳಿಲ್ಲ, ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಐಸಮ್ಮ ಒಬ್ಬರೇ ತಮ್ಮ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಮನೆಯೊಳಗೆ ಬಿದ್ದು ಅವರಿಗೆ ಗಾಯವಾಗಿತ್ತು. ಅವರು ಮನೆಯೊಳಗೆ ಬಿದ್ದು ಗಾಯವಾಗಿರುವ ಬಗ್ಗೆ ಎರಡು ದಿನ ಬಿಟ್ಟು ಸ್ಥಳೀಯರ ಗಮನಕ್ಕೆ ಬಂದಿತ್ತು. ವಿಷಯ ತಿಳಿದ ಈಶ್ವರಮಂಗಲದ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅವರು ತಕ್ಷಣ ಐಸಮ್ಮ ಅವರ ಮನೆಗೆ ಧಾವಿಸಿ ಅವರನ್ನು ಸ್ಥಳೀಯರ ಸಹಕಾರದಿಂದ ಓಮ್ನಿ ಕಾರಿನ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಐಸಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಸ್ಥಳೀಯ ಫ್ಯಾಕ್ಟರಿಯೊಂದರ ಸಿಬ್ಬಂದಿಗಳು ಅಬ್ದುಲ್ ರಹಿಮಾನ್ ಜೊತೆ ಸಹಕಾರ ನೀಡಿದರು.

ಮತ್ತೆ ‘ಆಪತ್ಭಾಂಧವನಾದ’ ಆಸಿಫ್..!
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದ ಐಸಮ್ಮ ಚೇತರಿಸಿಕೊಂಡರು. ಬಳಿಕ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ ಮೊದಲಾದವರು ಐಸಮ್ಮ ಅವರ ಯೋಗಕ್ಷೇಮದ ವಿಚಾರವಾಗಿ ಮುಲ್ಕಿ ಹಳೆಯಂಗಡಿಯಲ್ಲಿರುವ ಮೈಮೂನಾ ಫೌಂಡೇಶನ್‌ನ ಮುಖ್ಯಸ್ಥ ಆಸಿಫ್ ಆಪತ್ಭಾಂಧವ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದರು. ಕೂಡಲೇ ಸ್ಪಂಧಿಸಿದ ಆಸಿಫ್ ಅವರು ಮರುದಿನ ಪುತ್ತೂರು ಸರಕಾರಿ ಆಸ್ಪತ್ರೆಗೆ ಆಗಮಿಸಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಹಾಗೂ ಹನೀಫ್ ಮಧುರಾ ಜೊತೆ ಮಾತುಕತೆ ನಡೆಸಿ ಬಳಿಕ ಐಸಮ್ಮ ಅವರನ್ನು ಆರೈಕೆ ಮಾಡುವ ಸಲುವಾಗಿ ತಮ್ಮ ‘ಮೈಮೂನ ಫೌಂಡೇಶನ್’ಗೆ ದಾಖಲಿಸಿದರು.

‘ಮಿನಿ ಫ್ಯಾಮಿಲಿ’ಯಿಂದ ಖರ್ಚುವೆಚ್ಚ:
ಐಸಮ್ಮ ಅವರನ್ನು ಮುಲ್ಕಿ ಹಳೆಯಂಗಡಿಯಲ್ಲಿರುವ ಮೈಮೂನ ಫೌಂಡೇಶನ್ ಸೆಂಟರ್‌ಗೆ ದಾಖಲಿಸಿದ ಮರು ದಿನ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಹಾಗೂ ಹನೀಫ್ ಮಧುರಾ ಅವರು ಮೈಮೂನ ಫೌಂಡೇಶನ್‌ಗೆ ಭೇಟಿ ನೀಡಿ ಐಸಮ್ಮ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಈಶ್ವರಮಂಗಲದ ‘ಮಿನಿ ಫ್ಯಾಮಿಲಿ’ ವತಿಯಿಂದ ಐಸಮ್ಮ ಅವರ ಜೀವಿತಾವಧಿ ವರೆಗಿನ ಖರ್ಚನ್ನು ಕೊಡುವುದಾಗಿ ತಿಳಿಸಿ ನಿರ್ಧಿಷ್ಟ ಮೊತ್ತವನ್ನು ಆಸಿಫ್ ಆಪತ್ಭಾಂಧವ ಅವರಿಗೆ ಹಸ್ತಾಂತರಿಸಿದರು.
ಅನಾಥ ಮಹಿಳೆಯೋರ್ವರ ಸಂಕಷ್ಟಕ್ಕೆ ಮಿಡಿದು ನೆರವು ನೀಡಿದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಹನೀಫ್ ಮಧುರಾ ಹಾಗೂ ‘ಮಿನಿ ಫ್ಯಾಮಿಲಿ’ಯವರ ಮಾನವೀಯ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಬಡವರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮ ಧರ್ಮ, ಯಾರೇ ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಅಬ್ದುಲ್ ರಹಿಮಾನ್ ಹಾಜಿ ಮೇನಾಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here