ರೈತರು ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲಗಳ ಬಡ್ಡಿ ಮನ್ನಾ ಮಾಡಲು ಸರಕಾರದ ನಿರ್ಧಾರ: ಅಧಿಸೂಚನೆ ಹೊರಡಿಸಿದ ಸರಕಾರ
ಪುತ್ತೂರು: ಸಂಕಷ್ಟದಲ್ಲಿದ್ದ ರೈತರಿಗೆ ಸಂತೋಷದ ಸುದ್ದಿಯನ್ನು ರಾಜ್ಯ ಸರಕಾರ ನೀಡಿದ್ದು ರೈತರು ವಿವಿಧ ಸಹಕಾರಿ ಸಂಘಗಳಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲು ಆದೇಶ ಹೊರಡಿಸಿದೆ. ದ ಕ ಮತ್ತು ಉಡುಪಿ ಜಿಲ್ಲೆಯ ರೈತರ ಸಂಕಷ್ಠಗಳ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಪುತ್ತೂರಿನ ಶಾಸಕ ಅಶೋಕ್ ರೈ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದರು. ಇದೀಗ ಸರಕಾರ ಬಡ್ಡಿ ಮನ್ನಾ ಮಾಡಿ ಆದೇಶ ಹೊರಡಿಸಿದೆ.
ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು 2023 ಡಿ.31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:29-02-2024 ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿಯಿರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಕೆಲವು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ಯೋಜನೆಯಲ್ಲಿ ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿಯನ್ವಯ ದಿನಾಂಕ:29-02-2024 ರವರೆಗೆ 29,456 ರೈತರು ರೂ.281.88 ಕೋಟಿಗಳ ಸುಸ್ತಿ ಸಾಲವನ್ನು ಮರುಪಾವತಿಸಿದ್ದು ಇದರ ಮೇಲೆ ಸರ್ಕಾರದ ಬಡ್ಡಿ ರೂ.214.55 ಕೋಟಿಗಳಾಗಿರುತ್ತದೆ.
ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿ ಸುಸ್ತಿ ಸಾಲಗಳ ಮರುಪಾವತಿ ಅವಧಿಯನ್ನು ದಿನಾಂಕ: 31-03-2024 ರವರೆಗೆ ವಿಸ್ತರಿಸುವಂತೆ ನಿಬಂಧಕರು ಕೋರಿದ್ದು . ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಿಒ 291 ಸಿಎಲ್‌ಎಸ್ 2023, ದಿನಾಂಕ:20-01-2024 ರ ಆದೇಶದಲ್ಲಿ ಬಡ್ಡಿಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲು ರಾಜ್ಯದ ರೈತರು ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:31-12-2023 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂದಿತ ಸಾಲಗಳ ಕಂತುಗಳ ಅಸಲನ್ನು ಪಾವತಿಸಲು ನಿಗದಿಪಡಿಸಿದ್ದ ದಿನಾಂಕ:29-02-2024ನ್ನು ದಿನಾಂಕ:31-03-2024 ರವರೆಗೆ ವಿಸ್ತರಿಸಿ ಆದೇಶ ನೀಡಿದೆ.