ಸರಕಾರಿ, ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಸಭೆ

0

ಪುತ್ತೂರು: ಮಾ.25ರಂದು ನಡೆಯಲಿರುವ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರ ಪೂರ್ವಸಿದ್ಧತಾ ಸಭೆಯು ನೆಲ್ಲಿಕಟ್ಟೆ ಬಿಆರ್‌ಸಿ ಕೇಂದ್ರದಲ್ಲಿ ನಡೆಯಿತು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ಪುತ್ತೂರು ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಯು ಕಳೆದ ಸಾಲಿನಲ್ಲಿ ಪಡೆದ ರಾಜ್ಯ, ಜಿಲ್ಲಾ ಹಾಗೂ ತಾಲೂಕುವಾರು ಫಲಿತಾಂಶಗಳನ್ನು ಪರಿಶೀಲಿಸಿ ಫಲಿತಾಂಶ ಹೆಚ್ಚಿಸುವಂತೆ ಸಲಹೆ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಕೇವಲ 10 ದಿನಗಳು ಮಾತ್ರ ಉಳಿದಿದೆ. 10 ದಿನಗಳಲ್ಲಿ ಸಾಧ್ಯವಾದಷ್ಟು ಪ್ರಶ್ನೆಪತ್ರಿಕೆಗಳ ಅಭ್ಯಾಸ ಮಾಡಿಸಬೇಕು. ಶಿಕ್ಷಕರಿಗೆ ಯವುದೇ ಕಾರಣಕ್ಕೂ ರಜೆ ನೀಡಬೇಡಿ. ಒಳ್ಳೆಯ ಪರಿಶ್ರಮ ಪಟ್ಟು ಉತ್ತಮ ಫಲಿತಾಂಶ ತರಲು ಪ್ರಯತ್ನಿಸಬೇಕು ಎಂದರು. ಈ ಬಾರಿ ರಂಜಾನ್ ಅವಧಿ ಬಂದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮುಖ್ಯಶಿಕ್ಷಕರುಗಳು ಶಿಕ್ಷಣಾಧಿಕಾರಿ ಅವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿಯವರು ಸ್ಥಳೀಯ ಮದ್ರಸದ ಮುಖ್ಯಸ್ಥರೊಂದಿಗೆ, ಮುಸ್ಲಿಂ ಧರ್ಮಗುರುಗಳೊಂದಿಗೆ ಮಾತನಾಡಿ ಸಹಕಾರ ನೀಡುವಂತೆ ತಿಳಿಸಲು ಸೂಚಿಸಿದರು. ರಾತ್ರಿ ತರಗತಿ ನಡೆಸುವುದಾದರೆ ಪೋಷಕರ ಒಪ್ಪಿಗೆ ಪಡೆದು ಹುಡುಗರಿಗೆ ಮಾತ್ರ ರಾತ್ರಿ ತರಗತಿ ನಡೆಸಿ ಎಂದರು. ಸರಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನವೀನ್ ವೇಗಸ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪುತ್ತೂರು ತಾಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here