ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ-ನೂತನ ಮಹಾದ್ವಾರ ಉದ್ಘಾಟನೆ

0

ಪುತ್ತೂರು: ದೈವರಾಧನೆಗೆ ವಿಶಿಷ್ಠ ಶಕ್ತಿಯಿದೆ. ದೈವರಾಧನೆಯ ಮೂಲಕ ಸಮಾಜದಲ್ಲಿ ಎಲ್ಲಾ ಸಮುದಾಯದ ಜನರು ಒಟ್ಟು ಸೇರುತ್ತಾರೆ. ಪರಸ್ಪರ ಪ್ರೀತಿಯಿಂದ ಜನರು ದೈವರಾಧನೆಯಲ್ಲಿ ಒಟ್ಟು ಸೇರಿಕೊಂಡು ಎಲ್ಲಾ ಸೇವಾ ಕಾರ್ಯಗಳನ್ನು ತೊಡಗಿಸಿಕೊಳ್ಳುತ್ತಾರೆ. ದೈವರಾಧನೆಯನ್ನು ಶ್ರದ್ಧೆ, ಭಕ್ತಿಯಿಂದ ಆರಾಧಿಸಿದರೆ ಉತ್ತಮ ಫಲ ನೀಡುತ್ತದೆ ಎನ್ನುವುದಕ್ಕೆ ಮಜಲ ಕ್ಷೇತ್ರ ದೊಡ್ಡ ಸಂದೇಶ ನೀಡುತ್ತದೆ ಎಂದು ಶ್ರೀಧಾಮ ಮಾಣಿಲ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಸ್ವಾಮಿಜಿಯವರು ಹೇಳಿದರು.

ಕಲಿಯುಗ ಕಲೆ ಕಾರಣಿಕ ಇತಿಹಾಸ ಪ್ರಸಿದ್ದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಮಾ.18ರಂದು ನಡೆದ ವರ್ಷಾವಧಿ ನೇಮೋತ್ಸವ, ಕ್ಷೇತ್ರ ಮಹಾದ್ವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ನಮ್ಮಲ್ಲಿ ಭಕ್ತಿ ಮುಖ್ಯವಾಗಿರಬೇಕು. ಶಕ್ತಿ ನಂತರ. ದೇವರು ಒಲಿದು ಅನುಗ್ರಹ ದೊರೆಯಬೇಕಾದರೆ ಭಕ್ತಿ ಮುಖ್ಯ. ಮಜಲು ಕ್ಷೇತ್ರವು ಭಕ್ತಿ ಪ್ರಧಾನವಾದ ಕ್ಷೇತ್ರವಾಗಿದೆ. ಭಕ್ತರ ಅಭೀಷ್ಟಗಳು ಈಡೇರುತ್ತಿದೆ. ಕ್ಷೇತ್ರದ ಧರ್ಮದರ್ಶಿ ಮಣಿ ಸ್ವಾಮಿಯುವ ಶ್ರದ್ಧೆ, ಭಕ್ತಿಯಿಂದ ದೈವದ ಸೇವೆ ಮಾಡುತ್ತಿದ್ದು ದೈವವೇ ಅವರಿಗೆ ದೊಡ್ಡ ಸಂಪತ್ತು. ಅದನ್ನು ಕ್ಷೇತ್ರದ ಮುಖಾಂತರ ಭಕ್ತರಿಗೆ ತಲುಪಿಸುತ್ತಿದ್ದಾರೆ. ಶ್ರದ್ಧೆ, ಭಕ್ತಿ, ಪ್ರೀತಿಯಿಂದ ಬರುವವರಿಗೆ ಕ್ಷೇತ್ರದಲ್ಲಿ ಪುಣ್ಯ ಪ್ರಾಪ್ತಿಯಾಗಲಿದೆ. ಗುರು, ಹಿರಿಯರು, ದೇವ ದೇವರ ಅನುಗ್ರಹವಿಲ್ಲದೆ ಜೀವನ ಅಪೂರ್ಣ. ದೈವ ದೇವರ ಸೇವೆ ಮುಖ್ಯ. ನಾನು, ನನ್ನದು ಎಂಬ ಭಾವನೆಗಳು ಕ್ಷಣಿಕ. ಸಾನಿಧ್ಯ ಕ್ಷೇತ್ರ ಶಾಶ್ವತ. ದೈವ ದೇವರು ನಮ್ಮ ಮೂಲಕ ಸೇವೆ ಪಡೆದುಕೊಳ್ಳುತ್ತಾರೆ. ಸಮರ್ಪನಾ ಭಾವದಿಂದ ಸೇವೆ ಮಾಡಿದಾಗ ಕ್ಷೇತ್ರ ಸಾನಿಧ್ಯ ವೃದ್ದಿಯಾಗಲಿದೆ ಎಂದ ಅವರು ಮಜಲು ಕ್ಷೇತ್ರದಲ್ಲಿ ದೈವರಾದನೆಯ ಜೊತೆಗೆ ಪ್ರತಿವರ್ಷ ಕಲೆಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ದೈವರಾಧನೆಯ ಮುಖಾಂತರ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ಸಮಾಜದ ಪರಿವರ್ತನೆಯಾಗಿದೆ. ಸಮಾಜದಲ್ಲಿರುವ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಮಜಲು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿಯವರು ಶ್ರದ್ಧೆ, ಭಕ್ತಿಯಿಂದ ಆರಾಧನೆ ಮಾಡುತ್ತಿದ್ಧು ಕ್ಷೇತ್ರ ಬೆಳಗಿದೆ. ಜನರು ಭಕ್ತಿ, ನಂಬಿಕೆಯಿಂದ ಕ್ಷೇತ್ರದಲ್ಲಿ ಸೇವಾ ಕಾರ್ಯಗಳು ನೆರವೇರುತ್ತಿದೆ. ಕ್ಷೇತ್ರವು ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಕ್ಷೇತ್ರವಾಗಲಿ ಬೆಳಗಲಿ ಎಂದು ಹಾರೈಸಿದರು. ನಗರ ಸಭಾ ಸದಸ್ಯೆ ಶೈಲಾ ಪೈ, ಜಿ.ಪಂ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ್, ಉದ್ಯಮಿ ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ನಾಗೇಶ್ ಬಾಳೆಹಿತ್ಲು, ಕ್ಷೇತ್ರ ಧರ್ಮದರ್ಶಿ ಮಣಿ ಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಮಂಗಳೂರು ಕಳವಾರು ಶ್ರೀಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಸುರೇಂದ್ರ ಮಳಿ, ದೈವಸ್ಥಾನದ ಕೆಲಸ ಕಾರ್ಯಗಳಲ್ಲಿ ನಿರಂತರವಾಗಿ ಸಹಕರಿಸುತ್ತಿರುವ ರವಿರಾಜ್ ವಳತ್ತಡ್ಕ, ಸುಮನ್ ಮೊಟ್ಟೆತ್ತಡ್ಕ, ಜನಾರ್ದನ ರೈ ಮುಕ್ರಂಪಾಡಿ, ಉತೇಶ್ ಮೊಟ್ಟೆತ್ತಡ್ಕ ಹಾಗೂ ಸುಮತಿ ಸೂತ್ರಬೆಟ್ಟುವರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಧ್ವನಿ ಸುರುಳಿ ಬಿಡುಗಡೆ:
ಮಜಲು ಕ್ಷೇತ್ರದ ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವದ ಕುರಿತ ಧ್ವನಿ ಸುರುಳಿ ʼಮಜಲ್‌ದಜ್ಜನ ಸತ್ಯೊದ ಚರಿತ್ರೆ’ಯನ್ನು ಮಾಣಿಲ ಮೋಹನದಾಸ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಧ್ವನಿ ಸುರುಳಿಯಲ್ಲಿ ಹಾಡಿದ ಪುಟಾಣಿ ಆಧ್ಯಳನ್ನು ಸನ್ಮಾನಿಸಲಾಯಿತು. ಖ್ಯಾತ ಗಾಯಕ, ನಿರೂಪಕ ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ವಂದಿಸಿದರು.

ಧಾರ್ಮಿಕ ಕಾರ್ಯಕ್ರಮಗಳು:
ವರ್ಷಾವಧಿ ನೇಮೋತ್ಸವದ ಅಂಗವಾಗಿ ತಂತ್ರಿ ಪ್ರೀತಂ ಪುತ್ತೂರಾಯರವರ ಆಶೀರ್ವಾದದೊಂದಿಗೆ ಸೂರ್ಯಪ್ರಕಾಶ ಅಂಗಿತ್ತಾಯ ಅಮ್ಮುಂಜರವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ಮೊಗೇರ್ಕಳ ತಂಬಿಲ, ಸಂಜೆ ಅಗ್ನಿ ಹಾಕುವುದು, ರಾತ್ರಿ ದೈವಗಳ ಭಂಡಾರ ತೆಗೆದು, ಅಗ್ನಿ ಸೇವೆ, ದೈವಗಳಿಗೆ ಎಣ್ಣೆ ಬೂಲ್ಯ, ಸಾರ್ವಜನಿಕ ಅನ್ನಸಂತರ್ಪಣೆ, ನಂತರ ಚೆಂಡೆ, ಡೋಲು, ಕೊಂಬು, ತಾಲಗಳೊಂದಿಗೆ ಅಗ್ನಿ ಕಲ್ಲುರ್ಟಿ, ಕೊರಗಜ್ಜ, ಮಂತ್ರ ಗುಳಿಗ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಕಳವಾರು ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯ ʼಸತ್ಯೊದ ಸ್ವಾಮಿ ಕೊರಗಜ್ಜ’ ಯಕ್ಷಗಾನ ಬಯಲಾಟ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿ, ವರ್ಷಾವಧಿ ನೇಮೋತ್ಸವದ ವೈಭವವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here