ಹರೀಶ್ ಪೂಂಜರೇ… ಒಂದು ವರ್ಷ ‘ಸುದ್ದಿ ಉದಯ’ ಪತ್ರಿಕೆ ನಡೆಸಿದ್ದಕ್ಕೆ ಅಭಿನಂದನೆಗಳು-ಪೂಂಜರೇ ಸುದ್ದಿ ಬಿಡುಗಡೆ ಪತ್ರಿಕೆ ಯಾರ ವಿರೋಧಿಯೂ ಅಲ್ಲ, ಯಾರ ಪರವೂ ಅಲ್ಲ. ನಿಷ್ಪಕ್ಷಪಾತ ಪತ್ರಿಕೆ ಎಂಬ ಬಗ್ಗೆ ನಿಮ್ಮನ್ನೂ ಸೇರಿಸಿ ಬಹಿರಂಗ ಚರ್ಚೆ ಇರಿಸೋಣವೇ?.

0

ಸುದ್ದಿಬಿಡುಗಡೆ ಪತ್ರಿಕೆ ಬೆಳ್ತಂಗಡಿಯಲ್ಲಿ 38 ವರ್ಷಗಳಿಂದ ನಡೆದುಬರುತ್ತಿದೆ. ಪೂಂಜರು ರಾಜಕೀಯಕ್ಕೆ ಬರುತ್ತಾರೆ ಎಂದು ಅವರಿಗಾಗಿ ಮಾಡಿದ ಪತ್ರಿಕೆ ಇದಲ್ಲ. ಬೆಳ್ತಂಗಡಿಯ ಜನತೆಗಾಗಿ ಮಾಡಿರುವ ಪತ್ರಿಕೆ ಇದು. ಪತ್ರಿಕೆ ತನ್ನ ಪರವಾಗಿ ಬರೆಯಬೇಕು, ತನ್ನ ವಿರೋಧಿಗಳ ಜಾಹೀರಾತು, ವರದಿ ಹಾಕಬಾರದು ಎಂದು ಪೂಂಜರು ಮಾಡಿರುವ ಒತ್ತಡಕ್ಕೆ ನಾವು ಮಣಿಯಲಿಲ್ಲ. ಅದಕ್ಕಾಗಿ ಸುದ್ದಿ ಬಿಡುಗಡೆಯನ್ನು ಶಾಶ್ವತವಾಗಿ ನಿಲ್ಲಿಸಲು ನಮ್ಮ 15 ಜನರಲ್ಲಿಯ 11 ಪ್ರಮುಖರನ್ನು ಹೈಜಾಕ್ ಮಾಡಿ ಪೂಂಜರು ತಮಗೆ ಬೇಕಾದಂತೆ ಬರೆಯುವ ಉದ್ದೇಶಕ್ಕಾಗಿ ಸುದ್ದಿ ಉದಯ ಪತ್ರಿಕೆ ಮಾಡಿದರು. ಆ ಘಟನೆ ನಡೆದು 1 ವರ್ಷ ಆಗುತ್ತಾ ಬಂದಿದೆ. ಪೂಂಜರು ನಮ್ಮ ಹಳೇಯ ತಂಡವನ್ನು ಕಟ್ಟಿಕೊಂಡು ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಅವರ ಪತ್ರಿಕೋದ್ಯಮದ ಸಾಹಸಕ್ಕೆ ಅಭಿನಂದನೆ ಸಲ್ಲಲೇ ಬೇಕು.


ನಾವು ಕೇವಲ 4 ಜನರನ್ನು ಕಟ್ಟಿಕೊಂಡು ಹೊಸಬರನ್ನು ಸೇರಿಸಿಕೊಂಡು ಸುದ್ದಿಬಿಡುಗಡೆ ಪತ್ರಿಕೆಯನ್ನು ಮುಚ್ಚದೆ ಉಳಿಸಿಕೊಂಡಿದ್ದೇವೆ. ಪ್ರತೀ ವಾರ ನಡೆಸುತ್ತಾ ಬಂದಿದ್ದೇವೆ. ಓದುಗರಿಗೆ ಹಿಂದಿಗಿಂತ ಹೆಚ್ಚು ಸುಂದರವಾಗಿ, ನಿಷ್ಪಕ್ಷಪಾತವಾಗಿ ಪತ್ರಿಕೆ ನಡೆಸುತ್ತಿದ್ದೇವೆ. ಈ ಸಾಧನೆಗೆ ಸುದ್ದಿ ಹಳೇ ತಂಡಕ್ಕೆ, ಹೊಸಬರಿಗೆ, ಏಜೆಂಟರಿಗೆ, ಓದುಗರಿಗೆ, ಜಾಹೀರಾತುದಾರರಿಗೆ ಹೃದಯಾಂತರಾಳದ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ.


‘ಸುದ್ದಿ ಉದಯ’ದ ಪ್ರಾರಂಭದ ದಿವಸ ಪೂಂಜರು ಮಾಡಿದ ಭಾಷಣವನ್ನು ಇನ್ನೊಮ್ಮೆ ಬೆಳ್ತಂಗಡಿಯ ಜನತೆ ಕೇಳಬೇಕು. ಅಂದು ಅವರು ಜನರ ಪರವಾದ ಪತ್ರಿಕೆ ಬೆಳ್ತಂಗಡಿಗೆ ಅವಶ್ಯಕತೆ ಇದೆ ಎಂದು ಹೇಳಿದ್ದರು. ಅದರ ಅರ್ಥ ಅವರ ಪರ ಬರೆಯಬೇಕೆಂದೇ ಆಗಿತ್ತು. ಅದರ ನಂತರ ಪತ್ರಿಕಾ ದಿನಾಚರಣೆಯಂದು ‘ಸುದ್ದಿ ಬಿಡುಗಡೆ ಪತ್ರಿಕೆ ದಾರಿ ತಪ್ಪಿದೆ ಜನರು ನೋಡಿಕೊಳ್ಳುತ್ತಾರೆ’ ಎಂಬ ಬೆದರಿಕೆಯನ್ನೂ ನೀಡಿದ್ದರು. ಆ ವಿಷಯವನ್ನು ಮುಂದಿಟ್ಟು ಜನರ ಬಳಿ ಪೂಂಜರ ಪರವಾಗಿ ಬರೆಯುವ ಪತ್ರಿಕೆ ಬೇಕೇ?, ಜನರ ಪರವಾಗಿ ಬರೆಯುವ ಪತ್ರಿಕೆ ಬೇಕೇ? ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟು ಕೇಳಿದ್ದೆವು. ಅದಕ್ಕೆ ಜನರು ನಿಷ್ಪಕ್ಷಪಾತವಾಗಿ ಬರೆಯುವ ಪತ್ರಿಕೆ ಬೆಳ್ತಂಗಡಿಗೆ ಬೇಕು, ಯಾರ ಪರವಾಗಿಯೂ ಬರೆಯುವ ಪತ್ರಿಕೆ ಬೇಡ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿ ಪ್ರೋತ್ಸಾಹ ನೀಡಿದ್ದರು. ಆ ಪ್ರಶ್ನೆಯನ್ನು ಈಗಲೂ ಪೂಂಜರ ಮುಂದೆ ಇಡಲು ಬಯಸುತ್ತೇನೆ.


ತುಂಬಾ ಜನರಿಗೆ ಸುದ್ದಿ ಬಿಡುಗಡೆ ಪತ್ರಿಕೆ ಪ್ರಸಾರದ ಬಗ್ಗೆ ಅಪಪ್ರಚಾರದಿಂದಾಗಿ ಸರಿಯಾದ ಮಾಹಿತಿ ಇಲ್ಲ. ಸುದ್ದಿ ಬಿಡುಗಡೆ ಪತ್ರಿಕೆ ತಾಲೂಕಿನ ಎಲ್ಲಾ ಪತ್ರಿಕೆಗಳಿಗಿಂತ ಹೆಚ್ಚು ಪ್ರಸಾರ ಹೊಂದಿದೆ. ಸುದ್ದಿ ಉದಯ ಪತ್ರಿಕೆಗಿಂತ 5-10 ಪಟ್ಟು ಹೆಚ್ಚು ಪ್ರಸಾರವನ್ನು ಹೊಂದಿದೆ ಎಂದು ತಿಳಿಸಲು ಇಚ್ಚಿಸುತ್ತೇನೆ. ಅದು ಸುಳ್ಳಾಗಿದ್ದರೆ ಪತ್ರಿಕೆಯನ್ನೇ ನಿಲ್ಲಿಸಿಬಿಡುತ್ತೇನೆ ಎಂಬ ಪಂಥಾಹ್ವಾನವನ್ನು ಪೂಂಜರಿಗೆ ನೀಡುತ್ತಿದ್ದೇನೆ. ಅದು ಹೌದಾಗಿದ್ದರೆ ಪೂಂಜರು ಪತ್ರಿಕೆ ನಿಲ್ಲಿಸಬೇಕಾಗಿಲ್ಲ. ಸುದ್ದಿ ಬಿಡುಗಡೆ ಪತ್ರಿಕೆಯ ಬಗ್ಗೆ ಹೇಳಿದ ಮಾತನ್ನು ಹಿಂದಕ್ಕೆ ಪಡೆದುಕೊಂಡು ‘ಸುದ್ದಿ ಬಿಡುಗಡೆ ಪತ್ರಿಕೆ ಸರಿ ದಾರಿಯಲ್ಲಿದೆ’ ಎಂದು ಒಪ್ಪಿಕೊಂಡು ಸುದ್ದಿ ಬಿಡುಗಡೆಗೆ ನೀಡುತ್ತಿರುವ ತೊಂದರೆಗಳನ್ನು ನಿಲ್ಲಿಸಬೇಕೆಂದು ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.


ಹರೀಶ್ ಪೂಂಜರ ಪ್ರಭಾವವಿರುವ ಕೆಲವು ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ರಸಾರದಲ್ಲಿರುವ ಸುದ್ದಿ ಬಿಡುಗಡೆ ಪತ್ರಿಕೆಗೆ ಜಾಹೀರಾತು ನೀಡದೆ ಪೂಂಜರ ಪತ್ರಿಕೆಗೆ ನೀಡುತ್ತಿದ್ದಾರೆ. ಅವರ ಪತ್ರಿಕೆಗೆ ನೀಡಲಿ ಆದರೆ ಅತೀ ಹೆಚ್ಚು ಪ್ರಸಾರವಿರುವ ನಮ್ಮ ಪತ್ರಿಕೆಗೆ ನೀಡದಿರುವುದು ಜನತೆಗೆ ಮಾಡಿದ ಅನ್ಯಾಯವಲ್ಲವೇ?. ಅದಕ್ಕಾಗಿ ಪಂಚಾಯತ್‌ನ ಎದುರು ಪ್ರತಿಭಟನೆ ಮಾಡಿಯೇ ನ್ಯಾಯವನ್ನು ಪಡೆಯಬೇಕೇ?. ಜನತೆಯಲ್ಲಿ ಕೇಳಲಿದ್ದೇವೆ.


ಸುದ್ದಿ ಬಿಡುಗಡೆ ಪತ್ರಿಕೆ ನಿಷ್ಪಕ್ಷಪಾತ ಪತ್ರಿಕೆಯಲ್ಲ, ಪೂಂಜರ ವಿರುದ್ಧ ಬರೆಯುವ ಪತ್ರಿಕೆ ಎಂಬ ಅಭಿಪ್ರಾಯ ಯಾರಲ್ಲಾದರು ಇದ್ದರೆ ಇಷ್ಟು ವರ್ಷಗಳ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಅವರ ಸುದ್ದಿ ಉದಯ ಪತ್ರಿಕೆಯನ್ನು ಇಟ್ಟುಕೊಂಡು ಜನರ ಮುಂದೆ ವಿಮರ್ಶೆಗೆ ಇಡಲಿದ್ದೇವೆ. ಜನತೆ ನಮ್ಮ ತಪ್ಪುಗಳನ್ನು ತೋರಿಸಿಕೊಟ್ಟರೆ ಒಪ್ಪಿಕೊಂಡು ತಿದ್ದಿಕೊಳ್ಳುತ್ತೇವೆ ಎಂದು ತಿಳಿಸುತ್ತಾ ಪೂಂಜರು ಅಥವಾ ಯಾರೇ ಆದರೂ ನಮಗೆ ಎಷ್ಟೇ ತೊಂದರೆಗಳನ್ನು ಕೊಟ್ಟರೂ ವರದಿಯ ವಿಷಯಕ್ಕೆ ಬಂದಾಗ ನಾವು ಸತ್ಯ ವರದಿಯನ್ನೇ ಬರೆಯುತ್ತೇವೆ ಹೊರತು ದ್ವೇಷದಿಂದ ವರದಿ ಮಾಡುವುದಿಲ್ಲ ಎಂದು ಎಲ್ಲರಿಗೂ ತಿಳಿಸಲು ಇಚ್ಚಿಸುತ್ತೇನೆ.

LEAVE A REPLY

Please enter your comment!
Please enter your name here