ಶಾಂತಿಮೊಗರು: ಕಿಂಡಿ ಅಣೆಕಟ್ಟು ನೀರು ಬರಿದು ಮಾಡಿದ್ದ ಪ್ರಕರಣ – ಪರಿಶೀಲನೆ ನಡೆಸಿದ ಅಧಿಕಾರಿಗಳಿಂದ ಡಿಸಿಗೆ ವರದಿ – ಆರೋಪಿಗಳ ವಿರುದ್ಧ ಕ್ರಮಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು

0

ಕಾಣಿಯೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮೊಗರು ಎಂಬಲ್ಲಿ ಕುಮಾಧಾರ ನದಿಗೆ ನಿರ್ಮಾಣವಾಗಿರುವ ಬೃಹತ್ ಕಿಂಡಿ ಅಣೆಕಟ್ಟೆಯ ಗೇಟುಗಳನ್ನು ಅಕ್ರಮವಾಗಿ ತೆಗೆದು ಅಣೆಕಟ್ಟೆಯಲ್ಲಿದ್ದ ನೀರು ಬರಿದಾಗಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿವರಿಗೆ ವರದಿ ಸಲ್ಲಿಸಿದ್ದಾರೆ. ಕುಕೃತ್ಯ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.
ಅಣೆಕಟ್ಟೆಯಲ್ಲಿನ ಗೇಟುಗಳಲ್ಲಿ ಅಳವಡಿಸಲಾಗಿದ್ದ ಹಲಗೆಗಳನ್ನು ಯಾರೋ ಕಿಡಿಗೇಡಿಗಳು ತೆಗೆದುದರಿಂದ ಭಾರೀ ಪ್ರಮಾಣದಲ್ಲಿ ಶೇಖರಣೆಯಾಗಿದ್ದ ನೀರು ಒಮ್ಮಿಂದೊಮ್ಮೆಲೇ ಖಾಲಿಯಾದಾಗ ಸ್ಥಳೀಯ ರೈತರು ಅಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ ಶೆಟ್ಟಿ, ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡಿ.ಎಂ ಹಾಗೂ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ವರದಿ ಸಲ್ಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಶಾಂತಿಮೊಗರು ಕಿಂಡಿ ಅಣೆಕಟ್ಟಿಗೆ ಫೆಬ್ರವರಿ ತಿಂಗಳಲ್ಲಿ ಗೇಟುಗಳನ್ನು ಅಳವಡಿಸಿ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವಂತೆ ಮತ್ತು ಕುಡಿಯುವ ನೀರಿನ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುವಂತೆ ಆಣೆಕಟ್ಟಿನಲ್ಲಿ ನೀರನ್ನು ಶೇಖರಣೆ ಮಾಡಲಾಗಿತ್ತು. ಮಾರ್ಚ್ 15ರ ವರೆಗೂ ಅಣೆಕಟ್ಟಿನಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಶೇಖರಣೆಯಾಗಿತ್ತು. ಬಳಿಕ, ಅಕ್ರಮ ಮರಳುಗಾರಿಕೆ ನಡೆಸುವವರು ಅಕ್ರಮವಾಗಿ ಗೇಟುಗಳನ್ನು ತೆಗೆದಿರುವುದಾಗಿ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಂಟಿಯಾಗಿ ಸ್ಥಳ ಪರಿವೀಕ್ಷಣೆ ನಡೆಸಿರುವ ಅಧಿಕಾರಿಗಳು ಕಿಂಡಿ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಲು ಅಳವಡಿಸಲಾಗಿದ್ದ ಎಮ್.ಎಸ್ ಗೇಟ್‌ಗಳ ರಬ್ಬರ್ ಬೀಡಿಂಗ್‌ಗಳನ್ನು ತೆಗೆದು ಗೇಟ್‌ನ್ನು ಮೇಲೆತ್ತಿ ಸಂಗ್ರಹವಾಗಿರುವ ನೀರನ್ನು ಹರಿಯಬಿಟ್ಟಿರುವುದು ಕಂಡು ಬಂದಿರುತ್ತವೆ. ಸಾರ್ವಜನಿಕರನ್ನು ವಿಚಾರಿಸಿದಾಗ ಇಲ್ಲಿ ನಡೆಯುವ ಮರಳುಗಾರಿಕೆಗೆ ಅನುಕೂಲವಾಗಲು ಯಾರೋ ಕಿಡಿಗೇಡಿಗಳು ಸಂಗ್ರಹವಾಗಿರುವ ನೀರನ್ನು ಬರಿದು ಮಾಡಿರುವುದು ಕಂಡು ಬಂದಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಣೆಕಟ್ಟಿಗೆ ವರ್ಷಕ್ಕೆ ಒಂದು ಸಲ (ನವೆಂಬರ್/ಡಿಸೇಂಬರ್ ತಿಂಗಳಿನಲ್ಲಿ) ಮಾತ್ರ ಗೇಟ್‌ಗಳನ್ನು ಅಳವಡಿಸಲು ಮತ್ತು ಎಪ್ರಿಲ್/ಮೇ ತಿಂಗಳಿನಲ್ಲಿ ಮಾತ್ರ ಗೇಟ್‌ಗಳನ್ನು ತೆಗೆಯಲು ಇಲಾಖೆಯಲ್ಲಿ ಅವಕಾಶವಿದ್ದು, ಪದೇ ಪದೇ ಹಲಗೆಗಳನ್ನು ಈ ರೀತಿ ಗೇಟ್‌ಗಳನ್ನು ತೆಗೆಯುವುದರಿಂದ, ನೀರು ಶೇಖರಣೆಯಾಗದೇ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ವಿಪರೀತ ಅಭಾವ ಆಗಿರುವುದು ಕಂಡು ಬಂದಿರುತ್ತದೆ. ಆದರೆ ಇನ್ನೊಮ್ಮೆ ನೀರು ಸಂಗ್ರಹಿಸಲು ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದಲ್ಲದೆ ಇದಕ್ಕಾಗಿ ಪುನಃ ವೆಚ್ಚ ಮಾಡಲು ಯಾವುದೇ ಅನುದಾನ ಇಲಾಖೆಯಲ್ಲಿ ಇರುವುದಿಲ್ಲ ಎಂದಿರುವ ಅಧಿಕಾರಿಗಳು, ಅಕ್ರಮವಾಗಿ ಅಣೆಕಟ್ಟಿನ ನೀರನ್ನು ಖಾಲಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವೆಂದು ವರದಿಯಲಿ ಉಲ್ಲೇಖಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿಗೂ ವರದಿ ಸಲ್ಲಿಸಲಾಗಿದ್ದು. ಅಕ್ರಮವಾಗಿ ಗೇಟುಗಳನ್ನು ತೆಗೆದವರ ವಿರುದ್ಧ ಕನೂನು ಕ್ರಮಕ್ಗೊಳ್ಳುವಂತೆ ಕಡಬ ಹಾಗೂ ಬೆಳ್ಳಾರೆ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಿಂಡಿ ಅಣೆಕಟ್ಟೆಯ ಹಲಗೆಗಳನ್ನು ಮರು ಅಳವಡಿಸುವಂತೆ ಫಲಾನುಭವಿಗಳು ಅಹವಾಲು ಸಲ್ಲಿಸಿದ್ದಾರೆ. ಸುಳ್ಯ ಶಾಸಕರು ಕೂಡಾ ಗೇಟುಗಳನ್ನು ಮರು ಜೋಡಣೆ ಮಾಡಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುತ್ತಾರೆ ಇದಕ್ಕೆ ಸೂಕ್ತ ನಿರ್ದೆಶನ ನೀಡಬೇಕೆಂದು ಜಿಲ್ಲಾಧಿಕಾರಿಯವರನ್ನು ಕೋರಲಾಗಿದೆ.

LEAVE A REPLY

Please enter your comment!
Please enter your name here