276 ಬ್ಯಾಲೆಟ್ ಯೂನಿಟ್, 276 ಕಂಟ್ರೋಲ್ ಯೂನಿಟ್ ಹಾಗೂ 289 ವಿವಿ ಪ್ಯಾಟ್‌ಗಳ ಬಳಕೆ-ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ
ಪುತ್ತೂರು: ಪುತ್ತೂರು ವಿಧಾನ ಸಭಾ ವ್ಯಾಪ್ತಿಯಲ್ಲಿರುವ ಹಾರಾಡಿ ಶಾಲಾ ಹಳೆಯ ಶಿಥಿಲಗೊಂಡಿರುವ ಕಟ್ಟಡದಲ್ಲಿದ್ದ ಮತಗಟ್ಟೆ ಸಂಖ್ಯೆ 127 ಹಾಗೂ 128ನ್ನು ಶಾಲೆಯ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಚುನಾವಣಾ ಆಯೋಗ ಆದೇಶ ಮಾಡಿದೆ ಎಂದು ಲೋಕ ಸಭಾ ಚುನಾವಣೆಯ ಸಹಾಯಕ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ಸಹಾಯಕ ಆಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಲೋಕಸಭಾ ಚುನಾವಣಾ ಪೂರ್ವಸಿದ್ದತೆಗಳ ಕುರಿತು ಮಾಹಿತಿ ನೀಡಿದರು. ಶಾಲೆಯ ಹಳೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಸದರಿ ಮತಗಟ್ಟೆಯನ್ನು ಬದಲಾಯಿಸಲು ಅನುಮತಿಗಾಗಿ ಪ್ರಸ್ತಾವಣೆ ಸಲ್ಲಿಸಲಾಗಿದ್ದು ಚುನಾವಣಾ ಆಯೋಗವು ಸ್ಥಳಾಂತರಿಸಿ ಅದೇಶಿಸಿದ್ದಾರೆ. ಇದರ ಬಗ್ಗೆ ರಾಜಕೀಯ ಪಕ್ಷಗಳಿಗೆ ಹಾಗೂ ಬಿಎಲ್‌ಓಗಳಿಗೆ ಮಾಹಿತಿ ನೀಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 276 ಬ್ಯಾಲೆಟ್ ಯೂನಿಟ್, 276 ಕಂಟ್ರೋಲ್ ಯೂನಿಟ್ ಹಾಗೂ 289 ವಿವಿ ಪ್ಯಾಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಎಲ್ಲವನ್ನು ರಾಜಕೀಯ ಪಕ್ಷಗಳ ನಾಯಕರ ಮುಂದೆ ಸೀಲ್ ಮಾಡಿಕೊಳ್ಳಲಾಗಿದೆ. ಅದನ್ನು ವಿವೇಕಾನಂದ ಶಾಲಾ ಕಟ್ಟಡದ ಭದ್ರತಾ ಕೊಠಡಿಯೊಳಗೆ ಇರಿಸಲಾಗಿದ್ದು ಅಲ್ಲಿ 24*7 ಮಾದರಿಯಲ್ಲಿ ಭದ್ರತೆ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಕಾರ್ಯಕ್ರಮಗಳಿಗೆ ಅನುಮತಿ ಪಡೆದುಕೊಳ್ಳಲು ಜನರ ಅನುಕೂಲಕ್ಕಾಗಿ ಏಕ ಗವಾಕ್ಷಿ(ಸಿಂಗಲ್ ವಿಂಡೋ)ವನ್ನು ಕೆಲ ಅಂತಸ್ಥಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ವಿಶಾಲ ಸ್ಥಳಾವಕಾಶವನ್ನು ಒದಗಿಸಲಾಗಿದೆ. ನಗರ ಸಭೆ, ಕಂದಾಯ ಇಲಾಖೆ ಒಂದೇ ಕಡೆ ಕಾರ್ಯನಿರ್ವಹಿಸಲಿದ್ದು ಅನುಮತಿಗಾಗಿ ಜನರು ಅಲೆದಾಡಬೇಕಾಗಿಲ್ಲ. ತಾಲೂಕು ಆಡಳಿತದ ಸೌಧದ ಲಿಫ್ಟ್ ದುಸ್ಥಿಪಡಿಸಲಾಗಿದೆ. 58 ವರ್ಷ ಮೇಲ್ಪಟ್ಟ ಹಾಗೂ ಪಿಡಬ್ಲ್ಯೂಡಿ ಮತದಾರರನ್ನು ಬಿಎಲ್‌ಓಗಳ ಈಗಾಗಲೇ ಗುರುತಿಸಲಾಗಿದ್ದು ಒಟ್ಟು 4186 ಮತದಾರರಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿದಿನ ಸೆಕ್ಟರ್ ಅಧಿಕಾರಿಗಳು ಹಾಗೂ ಬಿಎಲ್‌ಓಗಳಿಗೆ ಮಾಹಿತಿ ನೀಡಲಾಗುತ್ತಿದೆ. ಮತದಾನದ ದಿನವನ್ನು ಚುನಾವಣಾ ಆಯೋಗವು ತಿಳಿಸಳಿದೆ.
ಚುನಾವಣಾ ಸಮಯದಲ್ಲಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುಮತಿ ಪಡೆದುಕೊಳ್ಳಲು ಕಾರ್ಯಕ್ರಮಗಳ ಕುರಿತು ವಿವರ ನೀಡಬೇಕು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಯಾವುದೇ ವ್ಯಕ್ತಿಗಳ ಹೆಸರು ಉಲ್ಲೇಖಿಸುವಂತಿಲ್ಲ. ಆಮಂತ್ರಣ ಪತ್ರದ ಪ್ರತಿಯನ್ನು ಆಧಾರಿಸಿ, ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದು. ಕಾರ್ಯಕ್ರಮಗಳಲ್ಲಿ ರಾಜಕೀಯ ವ್ಯಕ್ತಿಗಳ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ.
ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಿ.ವಿಷಿಲ್ ಆ್ಯಪ್:
ಚುನಾವಣಾ ನೀತಿ ಸಂಹಿತ ಉಲ್ಲಂಘನೆಯ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಸಿ-ವಿಜಿಲ್ (c-vigil) ಮೊಬೈಲ್ ಆಪ್‌ನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ದೂರು ದಾಖಲಿಸಬಹುದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸುವಿದಾ ಆ್ಯಪ್ ಮೂಲಕ ಚುನಾವಣಾ ಪ್ರಚಾರ ಕಾರ್ಯಗಳೊಗೆ ಅನುಮತಿಯನ್ನು ಪಡೆಯಲು ಚುನಾವಣಾ ಆಯೋಗವು ಅವಕಾಶ ಕಲ್ಪಿಸಿದೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ರದ್ದು ಹಾಗೂ ವಿಳಾಸ ಬದಲಾವಣೆಗೆ ಮಾ.25 ಅಂತಿಮ ದಿನವಾಗಿದ್ದು ಈ ದಿನ ಸಲ್ಲಿಸುವವರಿಗೆ ಮತದಾನದ ಹಕ್ಕು ಪಡೆಯಲಿದ್ದಾರೆ. ಎ.4ರಂದು ಮತದಾರರ ಅಂತಿಮಪಟ್ಟಿ ಪ್ರಕಟವಾಗಲಿದೆ. ಇನ್ನು ಮುಂದೆ ರ್ಸೇಡೆಗೊಳ್ಳುವವರಿಗೆ ಈ ಲೋಕ ಸಭಾ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶಗಳಿರುವುದಿಲ್ಲ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಚಕ್‌ಪೋಸ್ಟ್ಗಳನ್ನು ಅಳವಡಿಸಲಾಗಿದ್ದು ಅಲ್ಲಿ ಮೂರು ಶಿಫ್ಟ್ಗಳಲ್ಲಿ ಸಿಬಂದಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಲಿದ್ದಾರೆ.
ಟೋಲ್ ಫ್ರೀ ಕಂಟ್ರೋಲ್ ರೂಂ:
ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂನ್ನು ತೆರೆಯಲಾಗಿದ್ದು 1950 ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಈ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದ ಪ್ರಕರಣಗಳು ಕಂಡು ಬಂದಲ್ಲಿ ಈ ಕಂಟ್ರೋಲ್ ರೂಂಗೆ ದೂರು ಸಲ್ಲಿಸಬಹುದು ಹಾಗೂ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಂಟ್ರೋಲ್ ರೂಂ 08251-230357 ನಂಬರ್‌ಗೆ ಕರೆ ಮಾಡಬಹುದು.
9 ಸ್ವೀಪ್ ಮತಗಟ್ಟೆಗಳು:
ಪುತ್ತೂರಿನಲ್ಲಿ ಒಟ್ಟು 9 ಮಾದರಿ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಇದರಲ್ಲಿ 6 ಸಖಿ ಮತಗಟ್ಟೆ, ವಿಕಲಚೇತನ, ಯುವ ಹಾಗೂ ಸಾಂಪ್ರದಾಯಿಕ ತಲಾ ಒಂದು ಮತಗಟ್ಟೆಗಳನ್ನು ಒಳಗೊಂಡಿದೆ. ಈ ಮತಗಟ್ಟೆಗಳಲ್ಲಿ ಈಗಾಗಲೇ ಪೈಂಟಿಂಗ್ ಕಾರ್ಯಗಳು ನಡೆಯುತ್ತಿದೆ. ಅಲ್ಲದೆ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾಟಕ ಮೊದಲಾದ ಕಾರ್ಯಕ್ರಮಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸ್ವೀಪ್ ನೋಡೆಲ್ ಅಧಿಕಾರಿಯಾಗಿರುವ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪುರ ತಿಳಿಸಿದರು.
ತಹಶೀಲ್ದಾರ್ ಅಹಮ್ಮದ್ ಕುಂ, ಮಾಸ್ಟರ್ ಟ್ರೈನರ್ ಪ್ರಶಾಂತ್ ನಾಯಕ್ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.