ಮಾ.26: ಹಸಿರುವಾಣಿ ಹೊರೆಕಾಣಿಕೆ
ಮಾ.27: ದೈವಗಳ ಪ್ರತಿಷ್ಠೆ, ಕಲಶಾಭಿಷೇಕ
ಮಾ.28: ದೈವದ ಭಂಡಾರ ಏರುವುದು, ಕುಳಿಚ್ಚಾಟ
ಮಾ.29: ಬಯಲು ಕೋಲ, ಗುಳಿಗ ದೈವದ ಕೋಲ
ಪುತ್ತೂರು:ನೆಟ್ಟಣಿಗೆ ಮುಡ್ನೂರು ಗ್ರಾಮದ ಅರಿಪ್ಪಳ ಎಂಬಲ್ಲಿ ನವೀಕೃತ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವ ಹಾಗೂ ದೈವದ ಬಯಲುಕೋಲ ಮಾ.26ರಿಂದ 29ರವರೆಗೆ ಶ್ರೀಕ್ಷೇತ್ರ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕ್ಷೇತ್ರದ ಹಿನ್ನಲೆ:
ಜೈನರಸರ ಕಾಲದಲ್ಲಿ ಸ್ಥಾಪಿತಗೊಂಡಿದ್ದ ಅತ್ಯಂತ ಪುರಾತನ ಶ್ರೀವಿಷ್ಣುಮೂರ್ತಿ ದೈವಚೈತನ್ಯ ಇತ್ತೀಚಿನವರೆಗೆ ಸ್ಥಳೀಯ ಸ್ಥಾನಿಕ ಬ್ರಾಹ್ಮಣರ ಆಡಳಿತದಲ್ಲಿ ನಡೆದುಕೊಂಡು ಬರುತ್ತಿತ್ತು. ಕಾಲದ ಪ್ರಭಾವಕ್ಕೆ ಒಳಪಟ್ಟು ಜೀರ್ಣ ಸ್ಥಿತಿಗೆ ಬಂದ ಸಂದರ್ಭದಲ್ಲಿ ಪರಿಸರದ ಭೂಮಿ ಅನುಭೋಗಿಸುವ ಜನ ಸಾಮಾನ್ಯರಿಗೆ ತೊಂದರೆಗಳು ಕಂಡು ಬಂತು. ಈ ಸಂದರ್ಭದಲ್ಲಿ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಅಷ್ಠಮಂಗಲ ಚಿಂತನೆ ನಡೆಸಿ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಎಂಬ ಸಾರ್ವಜನಿಕ ನೋಂದಾಯಿತ ಸಮಿತಿಯನ್ನು ರಚಿಸಿಕೊಂಡು ಜೀಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಸಮಿತಿಯ ಹೆಸರಿನಲ್ಲಿ ದೈವಸ್ಥಾನದ ಸ್ಥಳವನ್ನು ನೋಂದಾಯಿಸಿಕೊಂಡು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ದೈವಸ್ಥಾನ, ಬಾವಿ, ಗುಳಿಗನ ಕಟ್ಟೆ, ಆವರಣ ಗೋಡೆ, ಕಾರ್ಯಾಲಯ ನಿರ್ಮಾಣ ಅಲ್ಲದೆ ಸಂಪೂರ್ಣವಾಗಿ ತೇಗ ಮರದಿಂದಲೇ ಪಯ್ಯನ್ನೂರಿನ ವಾಸ್ತುಶಿಲ್ಪಿ ರಾಘವ ಆಚಾರ‍್ಯರವರ ವಾಸ್ತು ಸಲಹೆಯಂತೆ ದೈವಸ್ಥಾನ ಮರದ ಮಾಡಿನ ನಿರ್ಮಾಣ ಕೆಲಸ ನಡೆಸಲಾಗಿದೆ. ಸುಮಾರು 3 ಲಕ್ಷ ರೂ.ವೆಚ್ಚದ ನೂತನ ಬೆಳ್ಳಿ ಕವಚದ ಉಪಾದಿಗಳ ಸಮರ್ಪಣೆಯಾಗಿದೆ.
ಮಾ.26ರಂದು ಬೆಳಿಗ್ಗೆ ಹಸಿರುವಾಣಿ ಹೊರೆಕಾಣಿಕೆ, ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಅಘೋರ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಚಾಟನೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ ನಡೆಯಲಿದೆ. ಮಾ.27ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ ಅನ್ನಸಂತರ್ಪಣೆ. ಸಂಜೆ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಮಾ.28ರಂದು ಸಂಜೆ ದೈವದ ಭಂಡಾರ ಏರುವುದು, ತೊಡಂಞಲ್, ಭಜನೆ, ಅನ್ನಸಂತರ್ಪಣೆ, ಕುಳಿಚ್ಚಾಟ ನಡೆಯಲಿದೆ. ಮಾ.29ರಂದು ಬೆಳಿಗ್ಗೆ ದೈವದ ಬಯಲು ಕೋಲ, ಪ್ರಸಾದ ಸ್ವೀಕಾರ, ಅನ್ನಪ್ರಸಾದ, ಗುಳಿಗ ದೈವದ ಕೋಲ ನಡೆಯಲಿದೆ.
ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ:
ಮಾ.27ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ|ಶ್ರೀಶ ಕುಮಾರ್ ಯಂ.ಕೆ., ತಾ.ಪಂ.ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್. ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ. ಅರಿಪ್ಪಳ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ ಗೌರವ ಉಪಸ್ಥಿತರಿರಲಿದ್ದಾರೆ. ಸಭಾಕಾರ್ಯಕ್ರಮ ಬಳಿಕ ಸಮರ್ಥ ಸಾಂಸ್ಕೃತಿಕ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.