ಪ್ರತಿಯೊಂದು ಹಬ್ಬಗಳ ಆಚರಣೆಗಳಲ್ಲಿ ತನ್ನದೇ ಆದ ಪ್ರತೀತಿ,ಹಿನ್ನೆಲೆ,ಇತಿಹಾಸ, ಪರಂಪರೆಗಳಿರುತ್ತದೆ ತಲೆ ತಲೆಮಾರುಗಳಿಂದ ಹಿರಿಯರಿಂದ ನಡೆಸಲ್ಪಡುವ ಈ ಹಬ್ಬಗಳಲ್ಲಿ ರೂಢಿ, ಸಂಪ್ರದಾಯಗಳ, ಸಮ್ಮಿಲಿತ ವಾಗಿರುತ್ತದೆ.ಧಾರ್ಮಿಕ , ಸಾಂಸ್ಕೃತಿಕ, ಐತಿಹ್ಯದ ಹಿನ್ನಲೆಗಳಿರುತ್ತದೆ.
ಈಸ್ಟರ್ ಹಬ್ಬ ಕ್ರೈಸ್ತ ಧರ್ಮೀಯರಿಗೆ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಗುಡ್ ಫ್ರೈಡೆ ಆಚರಣೆಯ ನಂತರ ಬರುವ ಭಾನುವಾರ ಈ ಹಬ್ಬವಾಗಿದೆ. ಅತ್ಯಂತ ಭಕ್ತಿಯಿಂದ ಕ್ರೈಸ್ತ ಮತೀಯರು ಈ ಹಬ್ಬ ಆಚರಿಸುತ್ತಾರೆ. ಕ್ರಿಸ್ತ ಯೇಸುವಿನ ಪುನರುತ್ಥಾನದ ವಾರ್ಷಿಕ ಸ್ಮರಣೆಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ತನ್ನದೇ ಆದ ಐತಿಹ್ಯವಿರುದರಿಂದ ಇದರ ಪೂರ್ವ ತಯಾರಿಯಾಗಿ ಕೆಲವೊಂದು ಆಚರಣೆಗಳು ರೂಢಿಯಲ್ಲಿದೆ. ಕ್ರಿಸ್ತ ಯೇಸುವಿನ ಪುನರುತ್ಥಾನದ ಸಂಭ್ರಮಕ್ಕೆ ಆಧ್ಯಾತ್ಮಿಕವಾಗಿ, ದೈಹಿಕವಾಗಿ, ನಮ್ಮನ್ನು ನಾವು ದಂಡಿಸಬೇಕಾಗಿರುತ್ತದೆ. ಹಾಗಾಗಿ ಇಂದಿಗೂ ಶತ ಶತಮಾನಗಳ ಸಾಂಪ್ರದಾಯಿಕ ಆಚರಣೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಪ್ರಮುಖವಾದವುಗಳು
ವಿಭೂತಿ ಭಾನುವಾರ (Ash Wednesday)
ವಿಭೂತಿ ಬುಧವಾರ ಈಸ್ಟರ್ ಹಬ್ಬಕ್ಕೆ ಮುನ್ನುಡಿಯಾಗಿದೆ. ಬೈಬಲಿನಲ್ಲಿ ಉಲ್ಲೇಖಿಸಿರುವಂತೆ ಇದೊಂದು ಅನಾದಿಕಾಲದಿಂದಲೂ ಆಚರಿಸುವ ಪದ್ಧತಿಯಾಗಿದೆ. ಮೊದಲು ದೇವರಿಗೆ ವಿಮುಖವಾಗಿದ್ದರಿಂದ ಕಷ್ಟ ನಷ್ಟವನ್ನು ಅನುಭವಿಸಬೇಕಾಗಿ ಬಂತು ಎಂಬ ಪ್ರಾಯಶ್ಚಿತ ರೂಪವಾಗಿ ಮೈಗೆಲ್ಲ ಬೂದಿಯನ್ನು ಬಳಿದುಕೊಂಡು ತಪಸ್ಸನ್ನು ಆಚರಿಸುತ್ತಿದ್ದರು. ಆ ಆಚರಣೆಯ ಸಂಕೇತವಾಗಿ ಕ್ರೈಸ್ತರು ಇಂದಿಗೂ ಈ ರೀತಿಯಾಗಿ ಆಚರಿಸುತ್ತಾರೆ ಬೂದಿ ಬುಧವಾರದಂದು ಚರ್ಚಿಗೆ ತೆರಳಿ ದೇವರನ್ನು ಆರಾಧಿಸಿ, ಪ್ರಾರ್ಥಿಸಿ ಸಾಲಾಗಿ ನಿಂತು ಪಾದ್ರಿ ಬೂದಿಯ ಬಟ್ಟಲನ್ನು ಹಿಡಿದು ಅದರಿಂದ ಸ್ವಲ್ಪ ಬೂದಿ ತೆಗೆದು ಎಲ್ಲರ ಹಣೆಗೆ ಶಿಲುಬೆ ಆಕಾರದಲ್ಲಿ ಬಳೆಯುತ್ತಾರೆ. ಮಣ್ಣಿನಿಂದ ಬಂದ ನೀನು ಮರಳಿ ಮಣ್ಣಿಗೆ ಹೋಗುವೆ ಎಂಬ ಉದ್ಘಾರವನ್ನು ಹೇಳುತ್ತಾರೆ ಹೀಗೆ ತ್ಯಾಗ, ತಪಸ್ಸುಕಾಲದ ಜೀವನಕ್ಕೆ ಮುನ್ನುಡಿಯೇ ಈ ವಿಭೂತಿ ಬುಧವಾರದ ದಿನವಾಗಿದೆ.
- ತಪಸ್ಸುಕಾಲ (Lent)
- ಹಬ್ಬಕ್ಕೆ ಹಿಂದಿನ 40 ದಿನದ ವೃತ ಉಪವಾಸ ಕಾಲವಾಗಿದೆ. ಈ ವೃತ ಬಹಳ ಪ್ರಾಚೀನವಾದದ್ದು ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ಕೂಡ ಉಲ್ಲೇಖವಿದೆ. 40 ದಿನಗಳ ಜಪ,ಧ್ಯಾನ ,ಉಪವಾಸಗಳಿಗೆ ಕರೆ ನೀಡುತ್ತದೆ. ಪಶ್ಚಾತಾಪವನ್ನು ಪಡಬೇಕು, ಮಾಂಸಹಾರನ್ನು ವರ್ಜಿಸುವುದು, ತಪ್ಪು ಕೆಡುಕುಗಳನ್ನು ಮಾಡದಿರುವುದು, ಕಡ್ಡಾಯವಾಗಿ ಶುಕ್ರವಾರದ ಉಪವಾಸ ಮಾಡುವುದು, ಹಾಗೂ ಮಾಂಸಹಾರ ಸೇವನೆ ನಿಷೇಧಿಸಿದೆ. 40 ದಿನಗಳ ಉಪವಾಸ ಈ ಹಬ್ಬದ ತಯಾರಿಯಾಗಿದೆ ಈ ವೃತ್ತದ ಕೊನೆಯ ವಾರವನ್ನು ಪವಿತ್ರ ವಾರವೆಂದು ಪರಿಗಣಿಸಲಾಗುತ್ತದೆ.
- ಗರಿಗಳ ಭಾನುವಾರ (Palm sunda)
- ಪಾಮ್ ಸಂಡೆ ಗರಿಗಳ ಭಾನುವಾರ ಈಸ್ಟರ್ ಭಾನುವಾರದ ಹಿಂದಿನ ಭಾನುವಾರ ಆಚರಿಸಲ್ಪಡುತ್ತದೆ. ಬೈಬಲಿನಲ್ಲಿ ಉಲ್ಲೇಖಿಸಿರುವಂತೆ ಯೇಸು ಸ್ವಾಮಿ ಶಿಲುಬೆಯಲ್ಲಿ ಯಾತನೆ ಪಡುವ ಮೊದಲು ಜೆರುಸಲೇಮಿಗೆ ಪ್ರವೇಶಿಸುವಾಗ ಅಲ್ಲಿನ ಜನರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರಮಾಡಿಕೊಂಡರು. ಇದರ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಗರಿಗಳ ಭಾನುವಾರವನ್ನು ಆಚರಿಸುತ್ತಾರೆ . ಮೊದಲು ಚರ್ಚ್ ಆವರಣದಲ್ಲಿ ಗುರುಗಳು ಗರಿಗಳ ಆಶೀರ್ವದಿಸಿದ ಬಳಿಕ ಅವುಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ತದನಂತರ ಮನೆಗೆ ಬಂದು ಆ ಗರಿಗಳನ್ನು ಶಿಲುಬೆ ಕಟ್ಟುತ್ತಾರೆ. ಹೀಗೆ ಬೈಬಲಿನಲ್ಲಿ ಉಲ್ಲೇಖಿತವಾಗಿರುವ ಪಾಮ್ ಸಂಡೆಯನ್ನು ಇಂದಿಗೂ ಆಚರಿಸಲಾಗುತ್ತದೆ.
- ಪವಿತ್ರ ಗುರುವಾರ (Last supper)
- ಬೈಬಲಿನಲ್ಲಿ ಉಲ್ಲೇಖಿಸಿರುವಂತೆ ಯೇಸುವನ್ನು ಶಿಲುಬೆಗೇರಿಸುವ ಮುಂಚೆ ತನ್ನ 12 ಜನ ಶಿಷ್ಯರೊಂದಿಗೆ ಭೋಜನವನ್ನು ಮಾಡುತ್ತಾರೆ. ಯೇಸು ರೊಟ್ಟಿಯನ್ನು ತೆಗೆದುಕೊಂಡು ಮುರಿದು ತನ್ನ ಶಿಷ್ಯರಿಗೆ ಕೊಡುತ್ತ ತಿನ್ನಿರಿ. ಯಾಕೆಂದರೆ ಇದು ನಿಮಗೋಸ್ಕರ ಕೊಡಲಾಗುವ ನನ್ನ ದೇಹ .ಅನಂತರ ದ್ರಾಕ್ಷ ಪಾತ್ರೆಯನ್ನು ಅವರಿಗೆ ಕೊಟ್ಟು ಕುಡಿಯಿರಿ ಯಾಕೆಂದರೆ ಇದು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತ ಎಂದು ಹೇಳಿದರು. ಈ ವಿಶೇಷ ಭೋಜನವನ್ನು ಕರ್ತನ ರಾತ್ರಿ ಭೋಜನ ಎಂದು ಕರೆಯುತ್ತಾರೆ. ಇದು ಯೇಸುವಿನ ಕೊನೆಯ ಭೋಜನವಾಗಿತ್ತು.ಭೋಜನದ ವೇಳೆ ಯೇಸು12 ಮಂದಿ ಶಿಷ್ಯರ ಪಾದವನ್ನು ತೊಳೆದರು ಈ ಮೂಲಕ ಯೇಸು ಸೇವೆ ಸಂಸ್ಕಾರವನ್ನು ಪ್ರತಿಪಾದಿಸಿದರು.
- ಇಂದಿಗೂ ಕೂಡ ಪವಿತ್ರ ಗುರುವಾರದೊಂದು ಭಕ್ತಿ ಪೂರ್ವಕವಾಗಿ ಪೂಜಾ ಬಲಿದಾನವನ್ನು ಸಲ್ಲಿಸಿ ಪ್ರತಿ ಚರ್ಚಗಳಲ್ಲಿ ಕೂಡ 12 ಜನರ ಪಾದವನ್ನು ಪಾದ್ರಿಗಳು ತೊಳೆಯುತ್ತಾರೆ. ಮಹಿಳೆ, ಪುರುಷ ಎಂಬ ಯಾವುದೇ ಭೇದಭಾವ ಇಲ್ಲದೆ ಈ ಪದ್ಧತಿ ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ದೀನತೆ ಹಾಗೂ ಪರಸ್ಪರ ಪ್ರೀತಿಯ ಸಂಸ್ಕಾರ ಸಂದೇಶವನ್ನು ಸಾರುತ್ತದೆ.
- ಶುಭ ಶುಕ್ರವಾರ(Good Friday )
- ಶುಭ ಶುಕ್ರವಾರ ಕ್ರೈಸ್ತರಿಗೆ ಪವಿತ್ರವಾದ ದಿನ ಯೇಸುವಿನ ಮರಣವನ್ನು ಸಂಕೇತಿಸುವ ದಿನ ಈ ದಿನವನ್ನು ಕಪ್ಪು ಶುಕ್ರವಾರ (Black friday )ಎಂದು ಕರೆಯಲಾಗುತ್ತದೆ. ಯೇಸುವಿನ ಶಿಲುಬೆ ಯಾತನೆ ಮತ್ತು ಮರಣವನ್ನು ಸ್ಮರಿಸುವ ದಿನವಾಗಿದೆ. ಅಂದು ಯಾವುದೇ ಸಂಭ್ರಮದ ಆಚರಣೆಗಳಿರುವುದಿಲ್ಲ, ಆರಾಧನೆ ,ಪ್ರಾರ್ಥನೆ, ಉಪವಾಸ, ದಾನ ಧರ್ಮಕ್ಕೆ ಒತ್ತು ನೀಡಲಾಗುತ್ತದೆ.
- ಈ ಶುಭ ಶುಕ್ರವಾರ ಬೈಬಲಿನ ಉಲ್ಲೇಖ ಇಂತಿದೆ ಯೇಸುಕ್ರಿಸ್ತನ ತನ್ನನ್ನು ತಾನು ತ್ಯಾಗ ಮಾಡಿ ಸಮರ್ಪಣೆ ಮಾಡಿಕೊಂಡ ದಿನವೇ ಶುಭ ಶುಕ್ರವಾರ . ಭೂಮಿಯ ಮೇಲಿನ ಮನುಷ್ಯರೆಲ್ಲರೂ ಪಾಪದಿಂದ ವಿಮೋಚನೆ ಹೊಂದಲು ಯೇಸು ಕ್ರಿಸ್ತ ಶುಕ್ರವಾರದಂದು ಮರಣವನ್ನು ಸಮರ್ಪಿಸಿದರು.
- ಗೊಲ್ಗಥ ಎಂಬ ಸ್ಥಳದಲ್ಲಿ ನಿರಪರಾಧಿ ಯೇಸುವನ್ನು ಶಿಲುಬೆಗೇರಿಸಿದರು. ಯೇಸು ಮಧ್ಯಾನ ಮೂರು ಗಂಟೆಗೆ ಆತ್ಮವನ್ನು ತ್ಯಜಿಸಿದರು.ಯೇಸು ಪ್ರಾಣಾರ್ಪಣೆ ಮಾಡಿದ ಈ ನಡು ಮಧ್ಯಾನ ಭೂಮಿಯೆಲ್ಲ ಕಂಪಿಸಿತು ಸೂರ್ಯ ಕಾಂತಿ ಹೀನನಾಗಿ ಎಲ್ಲೆಡೆ ಕತ್ತಲೆ ಆವರಿಸಿತ್ತು. ಭೂಕಂಪನ ನೆಲವನ್ನು ಬೆಚ್ಚಿ ಬೀಳಿಸಿತು ಮಹಾದೇವಲಯ ಇಬ್ಬಾಗವಾಗಿ ಸೀಳಿ ಹೋಯಿತು. ಯೇಸುವನ್ನು ಶಿಲುಬೆಗೇರಿಸಿದರೂ ಆತ ‘ಪಿತಾನೇ ಕ್ಷಮಿಸು ತಾವು ಏನು ಮಾಡುತ್ತಿರುವರು ಎಂದು ಅವರು ಅರಿಯರು ಎಂದು ಶಿಲುಬೆಯಿಂದಲೇ ಹೇಳಿದ ಮಾತು ಜಗತ್ತಿಗೆ ಕ್ಷಮೆಯ ಹೊಸ ಉಪದೇಶವನ್ನು ಮನುಕುಲಕ್ಕೆ ನೀಡಿದರು.
- ‘ಪಿತನೇ ನನ್ನ ಆತ್ಮವನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ ಎಂದು ಗಟ್ಟಿಯಾಗಿ ಕೂಗಿ ಏಸು ತಮ್ಮ ಪ್ರಾಣವನ್ನು ಬಿಟ್ಟರು’ ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರರನ್ನು ಪ್ರೀತಿಸಿ ಕ್ಷಮಿಸಿ ಬಾಳಲು ಯೇಸು ಕೊನೆಯ ಸಂದೇಶವನ್ನು ಸಾರಿದರು. ಪಾಪದ ಜೀವನ ಇಡೀ ಜನಾಂಗವನೇ ನಾಶ ಹೊಂದುವರ ಬದಲಾಗಿ ಮಾನವ ಕುಲದ ರಕ್ಷಣೆಗಾಗಿ ದೇವಪುತ್ರ ಏಸುಕ್ರಿಸ್ತ ತನ್ನ ಪ್ರಾಣ ತ್ಯಾಗ ಮಾಡಿದ ಪವಿತ್ರ ದಿನವೇ ಶುಭ ಶುಕ್ರವಾರ. ಯೇಸು ಸ್ವಾಮಿಯ ಯಾತನೆ, ಪಾಡು, ಮರಣವನ್ನು ವಿಶ್ವವೇ ಸ್ಮರಿಸಿ ಧ್ಯಾನಿಸುವ ಈ ಶುಭದಿನವನ್ನು ಗುಡ್ ಫ್ರೈಡೆ ಎಂದು ಕರೆಯಲಾಗುತ್ತದೆ.
ಈಸ್ಟರ್
40 ದಿನಗಳ ಉಪವಾಸದ ಕೊನೆಗೆ ಪವಿತ್ರ ವಾರಗಳ ಆಚರಣೆಯ ನಂತರ ಬರುವ ದಿನವೇ ಈಸ್ಟರ್ ಹಬ್ಬ. ಕ್ರಿಶ್ಚಿಯನ್ ಸಮುದಾಯಕ್ಕೆ ಅತ್ಯಂತ ಶುಭದಿನ ಈ ದಿನ ಯೇಸು ಕ್ರಿಸ್ತನ ಪುನರುತ್ಥಾನವನ್ನು ಸೂಚಿಸುತ್ತದೆ. ಬೈಬಲಿನ ಪ್ರಕಾರ ಯೇಸುವನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಪುನರುತ್ಥಾನವಾದರು. ಅಂದರೆ ಶುಕ್ರವಾರ ಶಿಲುಬೆಗೇರಿಸಿ ಭಾನುವಾರ ಪುನರುತ್ಥಾನರಾದರು ಎಂಬ ನಂಬಿಕೆ. ಆದ್ದರಿಂದ ಶನಿವಾರ ರಾತ್ರಿಯಿಂದಲೇ ಚರ್ಚುಗಳಲ್ಲಿ ಪ್ರಾರ್ಥನೆ ಹಾಗೂ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಯೇಸುಕ್ರಿಸ್ತ ನಮಗಾಗಿ ಪುನಃ ಜೀವಂತವಾಗಿ ಬಂದಿದ್ದಾರೆ ಎಂಬ ನಂಬಿಕೆ. ಇದು ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬವಾಗಿದೆ ಯೇಸುವಿನ ಪುನರುತ್ಥಾನ ಬೆಳಕನ್ನು ಪಸರಿಸುತ್ತದೆ.ಹಾಗಾಗಿ ಈ ಸಂಕೇತವಾಗಿ ಶನಿವಾರ ರಾತ್ರಿ ನೀರು ಹಾಗೂ ಬೆಂಕಿ ಮೇಲೆ ವಿಶೇಷ ಪೂಜಾ ವಿಧಿ ವಿಧಾನಗಳು ಆಚರಿಸಲ್ಪಡುತ್ತದೆ ಚರ್ಚುಗಳಲ್ಲಿ ಹೊಸದಾಗಿ ನಿರ್ಮಿಸಿದ ಅಗ್ನಿಕುಂಡದ ಜ್ವಾಲೆಯಿಂದ ದೊಡ್ಡ ಮೊಂಬತ್ತಿಯನ್ನು ಉರಿಸುತ್ತಾರೆ ಅದರಿಂದ ಭಕ್ತರು ತಮ್ಮಲ್ಲಿರುವ ಕ್ಯಾಂಡಲ್ಗಳನ್ನು ಉರಿಸಿ ಪ್ರಾರ್ಥನಾ ವಿಧಿ ವಿಧಾನಗಳನ್ನು ಸಲ್ಲಿಸುತ್ತಾರೆ ಹಾಗೂ ನೀರಿನ ಮೇಲೆ ವಿಶೇಷ ಆಶೀರ್ವಾದವನ್ನು, ಪ್ರಾರ್ಥನೆಯನ್ನು ಪಾದ್ರಿಗಳು ಬೇಡುತ್ತಾರೆ ಹಾಗೂ ಆ ನೀರನ್ನು ತೀರ್ಥದ ರೂಪದಲ್ಲಿ ಭಕ್ತರು ಮನೆಗೆ ಕೊಂಡೊಯ್ಯುತ್ತಾರೆ. ನಾನೇ ಬೆಳಕು ಎಂದು ಸಾರಿದ ಯೇಸುವಿನ ಸಂದೇಶದ ಬೆಳಕನ್ನು ಎಲ್ಲೆಡೆ ಪಸರಿಸಲಾಗುತ್ತದೆ.
ಈಸ್ಟರ್ ಹಬ್ಬದ ತಯಾರಿಯಾಗಿ ಈ ರೀತಿಯಾಗಿ ಎಲ್ಲ ವಿಧಿ ವಿಧಾನ ಆಚರಣೆಗಳನ್ನು ಮಾಡಲಾಗುತ್ತದೆ. ಯೇಸು ಸ್ವಾಮಿ ದಯೆ, ಕ್ಷಮೆ, ಕರುಣೆ, ಪ್ರೀತಿ, ದಾನ, ಧರ್ಮ, ಮಾತ್ರವಲ್ಲ ತಮ್ಮನ್ನು ತಾವು ತ್ಯಾಗ ಮಾಡಿ ಜಗತ್ತಿಗೆ ಪ್ರೀತಿ ಕ್ಷಮೆ ಹೊಸ ಸಂದೇಶವನ್ನು ಸಾರಿದ್ದಾರೆ. ಈಸ್ಟರ್ ಹಬ್ಬ ಎಲ್ಲರಿಗೂ ಈ ಸಂದೇಶದ ಮೂಲಕ ಸೌಹಾರ್ದ ಪ್ರೀತಿಯಿಂದ ಬಾಳಲು ದಾರಿ ತೋರಲಿ.