ಗೋಳಿತ್ತಡಿ: ಮನೆಯಿಂದ ಚಿನ್ನ, ನಗದು ಕಳವು ಪ್ರಕರಣ – ಇಬ್ಬರು ಆರೋಪಿಗಳ ಸೆರೆ

0

ರಾಮಕುಂಜ: ಎರಡು ವಾರದ ಹಿಂದೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ಮನೆಯೊಂದರಿಂದ ನಡೆದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸಾದತ್ ಆಲಿ ಪರಂಗಿಪೇಟೆ(30ವ.) ಹಾಗೂ ಹಮೀದ್ ವಳಚ್ಚಿಲ್(31)ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳಿದ್ದು ಸಾದತ್ ಆಲಿ ಹಾಗೂ ಹಮೀದ್ ಬಂಧನವಾಗುತ್ತಿದ್ದಂತೆ ಅವರು ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಈ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳು ಮಾ.11ರಂದು ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ನೆಬಿಸಾ ಎಂಬವರ ಮನೆಯ ಹಿಂಬಾಗಿಲ ಮುಂಭಾಗ ನಿರ್ಮಿಸಿದ್ದ ಕಬ್ಬಿಣದ ಶಟರ್ ಮುರಿದು ಹಿಂಬಾಗಿಲ ಲಾಕ್ ತೆಗೆದು ಮನೆಯೊಳಗಿನ ರೂಮಿನಲ್ಲಿದ್ದ 8 ಕಪಾಟುಗಳಲ್ಲಿ ನಗದು ಹಾಗೂ ಚಿನ್ನಕ್ಕೆ ಜಾಲಾಡಿದ್ದರು. ಈ ಪೈಕಿ ನೆಬಿಸಾ ಅವರ ರೂಮ್‌ನ ಕಪಾಟಿನಲ್ಲಿದ್ದ 1.೦8 ಲಕ್ಷ ನಗದು ಹಾಗೂ 13 ಪವನ್ ಚಿನ್ನಾಭರಣ ಕಳವು ಮಾಡಿದ್ದರು. ಇದರಲ್ಲಿ 24 ಗ್ರಾಂ.ತೂಕದ 2 ಚಿನ್ನದ ಬಳೆ, 20ಗ್ರಾಂ. ತೂಕದ ಚಿನ್ನದ ನಕ್ಲೇಸ್ ಸರ, 20ಗ್ರಾಂ. ತೂಕದ ಚಿನ್ನದ ಸರ, 12ಗ್ರಾಂ ತೂಕದ 6 ಚಿನ್ನದ ಉಂಗುರಗಳು, 28 ಗ್ರಾಂ.ತೂಕದ ಒಂದು ಚಿನ್ನದ ಬ್ರಾಸ್ಲೈಟ್ ಒಳಗೊಂಡಿತ್ತು. ಇದರ ಒಟ್ಟು ಮೌಲ್ಯ 5.20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ನೆಬಿಸಾ ಅವರ ಪುತ್ರ ಸಿದ್ದೀಕ್ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮನೆಗೆ ಬೀಗ ಹಾಕಿ ತೆರಳಿದ್ದರು:
ನೆಬಿಸಾ ಅವರು ಮಗಳು ನಸೀಮಾ, ಅಳಿಯ ನಾಸೀರ್ ಹಾಗೂ ಮಕ್ಕಳೊಂದಿಗೆ ಮಾ.7ರಂದು ಮನೆಗೆ ಬೀಗ ಹಾಕಿ ನಸಿಮಾ ಅವರ ಹೆರಿಗೆಗಾಗಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ತೆರಳಿದ್ದರು. ಮಾ.11ರಂದು ಮಧ್ಯಾಹ್ನ 3.30ರ ವೇಳೆಗೆ ನೆಬಿಸಾ ಅವರ ಸಂಬಂಧಿಕರಾಗಿದ್ದ ಫಾಯಿಸಾರವರು ಈ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ನೆಬಿಸಾ ಅವರ ಎದುರಿನ ಮನೆಯವರ ಸಿಸಿಟಿವಿಯಲ್ಲಿ ಮಾ.11ರ ಮುಂಜಾನೆ 2.30ರ ವೇಳೆಗೆ ಸಿಫ್ಟ್ ಕಾರೊಂದರಲ್ಲಿ ಬಂದವರು ಕಾರು ನಿಲ್ಲಿಸಿ ನೆಬಿಸಾ ಅವರ ಮನೆಗೆ ಹೋಗಿ ಅಲ್ಲಿಂದ ಸುಮಾರು ಹೊತ್ತಿನ ಬಳಿಕ ಬಂದು ಮತ್ತೆ ಕಾರಿನಲ್ಲಿ ತೆರಳಿರುವ ದೃಶ್ಯ ಸೆರೆಯಾಗಿತ್ತು.

ಬಂಧಿತರ ಸ್ಥಳ ಮಹಜರು:
ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಸಾದತ್ ಆಲಿ ಪರಂಗಿಪೇಟೆ ಹಾಗೂ ಹಮೀದ್ ವಳಚ್ಚಿಲ್ ಅವರನ್ನು ಮಾ.25ರಂದು ನೆಬಿಸಾ ಅವರ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಲಾಗಿದೆ. ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್., ಕಡಬ ಠಾಣಾ ಪಿಎಸ್‌ಐ ಅಕ್ಷಯ್ ಢವಗಿ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ನೆಬಿಸಾ ಅವರ ಮನೆಗೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.


ಕಟ್ಟಿಗೆ ತುಂಡರಿಸಲು ಬಂದಿದ್ದ ಹಮೀದ್ ವಳಚ್ಚಿಲ್ ಕಳ್ಳತನದ ಸೂತ್ರಧಾರ:
ನೆಬಿಸಾ ಅವರ ಮನೆಗೆ ಬೀಗ ಹಾಕಿರುವ ಬಗ್ಗೆ ಹಮೀದ್ ಇತರೇ ಆರೋಪಿಗಳಿಗೆ ಮಾಹಿತಿ ನೀಡಿದ್ದ ಎಂದು ಹೇಳಲಾಗಿದೆ. ವಳಚ್ಚಿಲ್ ನಿವಾಸಿಯಾಗಿರುವ ಹಮೀದ್‌ಗೆ ಕುಂತೂರಿನಿಂದ ಮದುವೆಯಾಗಿದ್ದು ಮದುವೆಯ ಬಳಿಕ ಪತ್ನಿ ಮನೆಯಲ್ಲಿಯೇ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಹಮೀದ್ ಸೇರಿ ಇಬ್ಬರು ನೆಬಿಸಾ ಅವರ ಮನೆಗೆ ಕಟ್ಟಿಗೆ ತುಂಡರಿಸಲು ಬಂದಿದ್ದರು. ಈ ವೇಳೆ ಹಮೀದ್ ನೆಬಿಸಾ ಅವರ ಮನೆಯವರ ಹಾಗೂ ಮನೆಯ ಪರಿಚಯ ಮಾಡಿಕೊಂಡಿದ್ದ. ಮನೆಯವರೆಲ್ಲರೂ ಬೀಗ ಹಾಕಿ ಹೋಗಿರುವುದನ್ನು ತಿಳಿದುಕೊಂಡಿದ್ದ ಹಮೀದ್ ಪರಂಗಿಪೇಟೆಯ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿ ಕಳ್ಳತನಕ್ಕೆ ಸೂತ್ರ ರೂಪಿಸಿದ್ದ. ಇತರೇ ಆರೋಪಿಗಳೊಂದಿಗೆ ಕಳ್ಳತನಕ್ಕೆ ಕಾರಿನಲ್ಲಿ ಬಂದಿದ್ದ ಹಮೀದ್ ಕಾರಿನಲ್ಲೇ ಉಳಿದುಕೊಂಡಿದ್ದ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಬಂಧಿತ ಇನ್ನೋರ್ವ ಆರೋಪಿ ಸಾದತ್ ಆಲಿ ವಿರುದ್ಧ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿವೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here