ಮಾ.29- ಎ.2: ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವ

0

ರಾಮಕುಂಜ: ಕೊಯಿಲ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವ ಮಾ.29 ರಿಂದ ಎ.2ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎ.3ರಂದು ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.29ರಂದು ಪೂರ್ವಾಹ್ನ 9.30ಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ದೇವಸ್ಥಾನದ ಮೈದಾನದಿಂದ ಶಾಲಾ ಮಕ್ಕಳಿಂದ ಹಾಗೂ ಊರವರಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು ಮಾತೆಯರಿಂದ ಪುಷ್ಪಾರ್ಚನೆ ಸ್ವಾಗತ ನಡೆಯಲಿದೆ. ರಾತ್ರಿ 8ಕ್ಕೆ ಧ್ವಜಾರೋಹಣ, ಬಲಿ ಹೊರಟು ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಮಾ.30ರಂದು ರಾತ್ರಿ 7ರಿಂದ ಬಲಿ ಹೊರಟು ಉತ್ಸವ, ಆತೂರಿನಿಂದ ಗೋಕುಲನಗರ, ಕೆ.ಸಿ.ಫಾರ್ಮ್ ತನಕ ಪೇಟೆ ಸವಾರಿ, ಕಟ್ಟೆಪೂಜೆಗಳು ನಡೆಯಲಿದೆ.

ಮಾ.31-ದರ್ಶನಬಲಿ:
ಮಾ.31ರಂದು ಪೂರ್ವಾಹ್ನ 9.30ರಿಂದ ಉತ್ಸವ ಆರಂಭ, ಮಧ್ಯಾಹ್ನ 12ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಬಲಿ ಹೊರಟು ಉತ್ಸವ, ಆನೆಗುಂಡಿಯವರೆಗೆ ಪೇಟೆ ಸವಾರಿ, ಆನೆಗುಂಡಿಯಲ್ಲಿ ಕೆರೆ ಉತ್ಸವ, ಕಟ್ಟೆಪೂಜೆ, ಆನೆಗುಂಡಿ ಬೂಡಿನಿಂದ ದುಗಲಾಯಿ ದೈವದ ಭಂಡಾರ ತರುವುದು, ದೇವಸ್ಥಾನದಲ್ಲಿ ರಂಗಪೂಜೆ ನಡೆಯಲಿದೆ.

ಎ.1-ಮಹಾರಥೋತ್ಸವ:
ಎ.1ರಂದು ಪೂರ್ವಾಹ್ನ 9ರಿಂದ ಬಲಿಹೊರಟು ಉತ್ಸವ ನಡೆಯಲಿದೆ. ರಾತ್ರಿ 7ಕ್ಕೆ ಬಲಿ ಹೊರಟು ಉತ್ಸವ, ರಕ್ತೇಶ್ವರಿ ಮತ್ತು ಹುಲಿ ದೈವಗಳ ನುಡಿಕಟ್ಟುಗಳು, ರಾತ್ರಿ 9ರಿಂದ ಮಹಾರಥೋತ್ಸವ ಬಳಿಕ ಅಶ್ವತ್ಥ ಕಟ್ಟೆಪೂಜೆ ನಡೆಯಲಿದೆ. ಎ.2ರಂದು ಪೂರ್ವಾಹ್ನ 7.30ರಿಂದ ಬಾಗಿಲು ತೆರೆಯುವ ಮುಹೂರ್ತ, ಮಹಾಪೂಜೆ ನಡೆಯಲಿದೆ. ರಾತ್ರಿ 7ರಿಂದ ಬಲಿ ಹೊರಟು ಉತ್ಸವ, ವಸಂತ ಕಟ್ಟೆಯಲ್ಲಿ ಕಟ್ಟೆಪೂಜೆ, ಕೊಲ ಶಾಲೆಯಿಂದಾಗಿ ನೀಲಮೆ ಶ್ರೀ ಮಹಾವಿಷ್ಣು ದೇವಸ್ಥಾನ, ಕುರೋಳಿಕೆ ಮೂಲಕ ಕುಮಾರಧಾರದ ಸುದೆಂಗಳದವರೆಗೆ ಪೇಟೆ ಸವಾರಿ, ಕಟ್ಟೆಪೂಜೆಗಳು, ಗುಳಿಗ ಮತ್ತು ಪಂಜುರ್ಲಿ ದೈವಗಳ ನುಡಿಕಟ್ಟುಗಳು, ಅವಭೃತೋತ್ಸವ, ಧ್ವಜಾವರೋಹಣ, ಮಂತ್ರಾಕ್ಷತೆ ನಡೆಯಲಿದೆ.

ಎ.3-ನೇಮೋತ್ಸವ:
ಎ.3ರಂದು ಪೂರ್ವಾಹ್ನ 8ರಿಂದ ಸಂಪ್ರೋಕ್ಷಣೆ, 9.30ರಿಂದ ದುಗಲಾಯಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ:
ಮಾ.29ರಂದು ರಾತ್ರಿ 9.30ರಿಂದ 8ನೇ ವರ್ಷದ ಕಲಾಸೇವೆ ಪ್ರಯುಕ್ತ ಎಸ್‌ಆರ್‌ಕೆ ಲ್ಯಾಡರ್‍ಸ್ ಪುತ್ತೂರು ಇವರ ಪ್ರಾಯೋಜಕತ್ವದಲ್ಲಿ ಕಾಪು ರಂಗತರಂಗ ಕಲಾವಿದರಿಂದ ಸಮಾಜ ರತ್ನ ಲೀಲಾಧರ್ ಶೆಟ್ಟಿ ಸಾರಥ್ಯದಲ್ಲಿ ‘ಬುಡೆದಿ’ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.31ರಂದು ಸಂಜೆ 5 ರಿಂದ 8ರ ತನಕ ಯಕ್ಷನಂದನ ಗೋಕುಲನಗರ ಇವರಿಂದ ‘ಭೂ ಕೈಲಾಸ’ ತಾಳಮದ್ದಳೆ, ರಾತ್ರಿ 9ರಿಂದ ಶಿವಮೂರ್ತಿ ಮಿತ್ರವೃಂದ ದೇವಗಿರಿ ಕೊಲ ಇವರ ಪ್ರಾಯೋಜಕತ್ವದಲ್ಲಿ 12ನೇ ವರ್ಷದ ಕಲಾಸೇವೆಯ ಪ್ರಯುಕ್ತ ಶ್ರೀಲಲಿತೆ ಕಲಾವಿದರಿಂದ ‘ಗರುಡ ಪಂಚಮಿ’ ತುಳು ನಾಟಕ ನಡೆಯಲಿದೆ. ಎ.1ರಂದು ಸಂಜೆ 6 ರಿಂದ ದೇವಗಿರಿ ಬಾಲಗೋಕುಲದ(ಧಾರ್ಮಿಕ ಶಿಕ್ಷಣ) ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10ರಿಂದ ಅಂಬಿಕಾ ಅನ್ನಪೂರ್ಣೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ, ಬಜಪೆ ಇವರಿಂದ ‘ ಮಾಯದ ದೃಷ್ಟಿ’ ಯಕ್ಷಗಾನ ಬಯಲಾಟ ನಡೆಯಲಿದೆ. ಎ.2ರಂದು ಸಂಜೆ 7ರಿಂದ ಗ್ರಾಮದ ಮಹಿಳೆಯರಿಂದ ಬೈಲುವಾರ ಭಜನಾ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here