ಮೀನುಗಾರ ಮೊಗೇರರಿಗೆ ಪ.ಜಾತಿ ಪ್ರಮಾಣ ಪತ್ರಕ್ಕೆ ವಿರೋಧ- ಪ್ರತಿಭಟನೆಗೆ ದಲಿತ ಸಂಘಟನೆಗಳಿಂದ ಕರೆ

0

ಪುತ್ತೂರು: ಅಸ್ಪಶ್ಯರಲ್ಲದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವ ಪ್ರಯತ್ನ ನಡೆದಿದ್ದು, ಈ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾದರೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ದಲಿತ ಸಂಘಟನೆಯ ಮುಖಂಡ ಅಶೋಕ್ ಕೊಂಚಾಡಿಯವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಮೊಲ ಬೇಟೆಯಾಡುವ ಪ್ರವೃತ್ತಿಯ ನೈಜ ಮುಗೇರರಿಗೆ ಯಾವುದೇ ಅಡೆತಡೆ ಇಲ್ಲದೆ ಮೀಸಲಾತಿ ಸೌಲಭ್ಯ ದೊರೆಯುತ್ತಿದೆ. ಆದರೆ 1956ರಿಂದಲೂ ಮೀನುಗಾರ ಸಮುದಾಯದ ಮೊಗವೀರರು ಅಥವಾ ಮೊಗೇರರು ಈ ಸೌಲಭ್ಯವನ್ನು ಪಡೆಯುತ್ತಿದ್ದು, ದಲಿತ ಸಂಘಟನೆಗಳ ಹೋರಾಟದ ಬಳಿಕ 2010ರಿಂದ ಈ ರೀತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಹಿಡಿಯಲಾಗಿದೆ. ಆದರೆ, ಕಳೆದ ಸರಕಾರದ ಅವಧಿಯಲ್ಲಿ ರಚನೆಯಾದ ಜೆ.ಸಿ. ಪ್ರಕಾಶ್ ಅಧ್ಯಕ್ಷತೆಯ ಸಮಿತಿಯು ಸಲ್ಲಿಸಿರುವ ವರದಿಯ ಪ್ರಕಾರ ಮೊಗೇರ ಸಮುದಾಯದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಮರುಸ್ಥಾಪಿಸಲು ಮತ್ತು ಪ್ರಮಾಣ ಪತ್ರ ವಿತರಿಸಲು ಇದ್ದ ತೊಡಕು ಅಧ್ಯಯನ ಮಾಡಲಾಗಿದೆ ಎನ್ನಲಾಗಿದೆ. ಇದು ಮತ್ತೆ ಮೀನುಗಾರ ಮೊಗೇರರ ಬಾಹ್ಯ ಪ್ರಭಾವ ಮತ್ತು ರಾಜಕೀಯ ಒತ್ತಡ ಹೇರಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯಲು ನಡೆಸಿರುವ ಹುನ್ನಾರ ಎಂದವರು ಹೇಳಿದರು.
1956ರಿಂದ ಭಾರತ ಸರಕಾರವು ಸಂವಿಧಾನದ ಪ್ರಕರಾ ಪ.ಜಾತಿಯ ಪಟ್ಟಿಯಲ್ಲಿ ಕರ್ನಾಟಕದ ಮೊಗೇರ್ ಪರಿಶಿಷ್ಟ ಜಾತಿ ಎಂದೂ ಉತ್ತಕರ ಕನ್ನಡ ಜಿಲ್ಲೆಯ ಮೀನುಗಾರ ಪ್ರವೃತ್ತಿಯ ಮೊಗೇರರು ಹಿಂದುಳಿದ ಜಾತಿಯ ಪ್ರವರ್ಗ 1 ಎಂದೂ ತಿಳಿಸಲಾಗಿತ್ತು. ಪರಿಶಿಷ್ಟ ಜಾತಿಯವರಲ್ಲದ ಮೀನುಗಾರ ಮೊಗೇರರು (ದ.ಕ., ಉಡುಪಿ ಮತ್ತು ಕೊಳ್ಳೆಗಾಲ ಹೊರತುಪಡಿಸಿ) ಇದರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದನ್ನು ಮನಗಂಡು ಕ್ಷೇತ್ರೀಯ ನಿರ್ಬಂಧ ಹಾಕಲಾಗಿತ್ತು. ಈವರೆಗಿನ ಯಾವುದೇ ನ್ಯಾಯಾಂಗ ಪ್ರಾಧಿಕಾರವೂ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ವರೆಂದೂ ಹೇಳಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇತ್ತೀಚೆಗೆ ಅಧ್ಯಯನ ವರದಿ ಸಲ್ಲಿಸಿರುವ ಜೆ.ಸಿ. ಪ್ರಕಾಶ್‌ರವರು ತಿಳಿಸಿರುವಂತೆ ಯಾವ ಮೊಗೇರರ ಮೀಸಲಾತಿ ಸೌಲಭ್ಯ ಮರು ಸ್ಥಾಪಿಸಬೇಕು ಹಾಗೂ ಯಾರಿಗೆ ಪ.ಜಾತಿ ಪ್ರಮಾಣ ಪತ್ರ ವಿತರಿಸಲು ತೊಡಕಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ರೀತಿಯ ಗೊಂದಲಕಾರಿ ಹೇಳಿಕೆ ನೀಡುವ ಹಿಂದೆ ಮೀನುಗಾರ ಮೊಗೇರರ ಪ್ರಭಾವ ಅಡಗಿರುವುದು ಗೋಚರವಾಗುತ್ತಿದ್ದು ಯಾವುದೇ ಕಾರಣಕ್ಕೂ ಆ ವರದಿಯನ್ನು ಸ್ವೀಕರಿಸಬಾರದು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಹಾಗೂ ಸುಂದರ ಮೇರ ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಸುಂದರ ಮೇರ, ಮೊಗೇರ ಸಂಘ ಪುತ್ತೂರು ಅಧ್ಯಕ್ಷ ಸುಂದರ ಕೇಪುಳು, ಪ್ರಧಾನ ಕಾರ್ಯದರ್ಶಿ ಮುಕೇಶ್ ಕೆಮ್ಮಿಂಜೆ, ಖಜಾಂಚಿ ರಾಘವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here