ಧರ್ಮ ಸಂಸ್ಕೃತಿಯ ಬಗ್ಗೆ ನಂಬಿಕೆ, ವಿಶ್ವಾಸ ಬೇಕು – ಶ್ರೀಗುರುದೇವಾನಂದ ಸ್ವಾಮೀಜಿ
ಪುತ್ತೂರು: ಬದುಕಿನಲ್ಲಿ ಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಬದುಕು ವ್ಯರ್ಥ. ಧರ್ಮದ ಆವರಣದಲ್ಲಿ ಬದುಕು ನಡೆಸಬೇಕು. ಧರ್ಮ ಸಂಸ್ಕೃತಿಯ ಬಗ್ಗೆ ನಮಗೆ ನಂಬಿಕೆ, ವಿಶ್ವಾಸ ಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ನೆಟ್ಟಣಿಗೆ ಮುಡ್ನೂರು ಗ್ರಾಮದ ಅರಿಪ್ಪಳದಲ್ಲಿ ನವೀಕೃತ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಪುನಃ ಪ್ರತಿಷ್ಠಾ ಕಲಶೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. ನಮ್ಮಿಂದಲೇ ಧರ್ಮ ಸ್ಥಾಪನೆಯಾಗಬೇಕು. ಧರ್ಮಕ್ಕೆ ಯಾವಾಗಲೂ ಜಯ ಸಿಕ್ಕಿಯೇ ಸಿಗುತ್ತದೆ. ನಮ್ಮ ಸಂಸ್ಕೃತಿಯನ್ನು ತಿಳಿಸುವ ಕೆಲಸ ನಮ್ಮಿಂದಾಗಬೇಕು. ಇಲ್ಲಿನ ಅರಿಪಳ್ಳ ಹೆಸರು ತೆರಿಪಳ್ಳ ಆಗಬೇಕು ಎಂದರು. ಇಂದು ಗೋಧೋಲಿ ಸಮಯದಲ್ಲಿ ನಾವು ಸೇರಿದ್ದೇವೆ. ವಿಷ್ಣುಮೂರ್ತಿ ದೇವರು ನರಸಿಂಹಾವತಾರ ತಾಳಿದ ಸಮಯ ಇದು. ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠೆ ಆದ ಬಳಿಕ ಇಲ್ಲಿ ವಿಷ್ಣುಮೂರ್ತಿ ದೈವದ ಪ್ರತಿಷ್ಠೆ ಆಗಿದೆ. ಈ ಊರಿಗೆ ಒಳ್ಳೆಯದಾಗಲಿ ಎಂದರು.
ಬದುಕು ಬಂಗಾರದ ವ್ಯಾಪಾರವಾಗಲಿ ಸಂತೆ ಆಗುವುದು ಬೇಡ-ಡಾ|ಶ್ರೀಶ ಕುಮಾರ್:
ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ|ಶ್ರೀಶ ಕುಮಾರ್‌ರವರು ದೈವಾರಾಧನೆ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿ ದೈವ ಎಂಬ ಶಬ್ದಕ್ಕೆ ಬೆಳಗುವುದು ಎಂದರ್ಥ. ತುಳುನಾಡಿನಲ್ಲಿ ಮಾತ್ರ ವಿಶೇಷ ವ್ಯವಸ್ಥೆಯಲ್ಲಿ ದೈವಾರಾಧನೆ ಕಂಡು ಬರುತ್ತಿದೆ. ದೈವಾರಾಧನೆ ಇವತ್ತು ಹೈಟೆಕ್ ಆಗಿದೆ. ದೈವಾರಾಧನೆಯ ಅರ್ಥಗಳು ಬದಲಾವಣೆ ಆಗುತ್ತಿದೆ ಎಂದರು. ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ಸಂಬಂಧಿಸಿ 52 ಗಾವುದ ವ್ಯಾಪ್ತಿಯಲ್ಲಿ ದೈವಾರಾಧನೆಯ ಪರಿಕಲ್ಪನೆ ಇತ್ತು. ನೀಲೇಶ್ವರದಿಂದ ಗೋಕರ್ಣದವರೆಗೆ ತುಳುನಾಡಿನ ವ್ಯಾಪ್ತಿ ಇತ್ತು ಎಂದು ಗ್ರಂಥಗಳಿಂದ ತಿಳಿದುಬಂದಿದೆ. ಪಶ್ಚಿಮ ಘಟ್ಟ ಇಳಿದು ಬಂದ ದೈವಗಳಿಗೆ ತುಳುನಾಡಿನಲ್ಲಿ ಆರಾಧನೆಯ ಶಕ್ತಿ ಬಂತು. ಮರದ ಅಡಿಯಲ್ಲಿ ಕಲ್ಲಿನಲ್ಲಿ ಪ್ರಾರಂಭವಾದ ದೈವಾರಾಧನೆ ಇಂದು ಕಟ್ಟೆ, ಸ್ಥಾನ, ಮಾಡ, ಗರಡಿಗಳವರೆಗೆ ಮುಂದುವರೆದಿದೆ ಎಂದರು. ದೈವ ದೇವರ ಮೇಲೆ ಭಕ್ತಿ ಬೇಕು ಆದರೆ ಭಯ ಬೇಡ. ಇಂದು ಆರಾಧನೆಗಳು ಬೇರೆ ಬೇರೆ ಹೆಸರಿನ ಮೂಲಕ ಅರ್ಥ ಕಳೆದುಕೊಳ್ಳುತ್ತಿದೆ. ಯುವ ಜನಾಂಗ ದೈವಾರಾಧನೆಯ ಮೂಲಕ ಅಮಲು ಪದಾರ್ಥಗಳ ಚಟಕ್ಕೆ ಬಲಿಯಾಗುವುದು ಬೇಡ. ವಜ್ರದ ರೀತಿಯ ಪಾಪಗಳು ನಮಗೆ ಅಂಟಿಕೊಳ್ಳುವುದು ಬೇಡ. ನಮ್ಮ ಬದುಕು ಬಂಗಾರದ ವ್ಯಾಪಾರವಾಗಬೇಕೇ ಹೊರತು ಸಂತೆ ಆಗುವುದು ಬೇಡ ಎಂದರು.
ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ-ರಾಜೇಂದ್ರ ಪ್ರಸಾದ್ ರೈ ಮೇನಾಲ:
ಶ್ರೀವಿಷ್ಣುಮೂರ್ತಿ ಸೇವಾ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ರೈ ಮೇನಾಲರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಪ್ರತಿಯೊಂದಕ್ಕೂ ಇತಿಹಾಸವಿದೆ. ಪ್ರತೀ ಶಿಲೆಗಳ ಹಿಂದೆ ಒಂದೊಂದು ಕಥೆ ಇದ್ದ ಹಾಗೆ ಇಲ್ಲಿನ ಸಾನಿಧ್ಯಕ್ಕೂ ಇತಿಹಾಸವಿದೆ. 2012ರಲ್ಲಿ ಶ್ರೀವಿಷ್ಣುಮೂರ್ತಿ ದೈವಸ್ಥಾನದ ಜೀಣೋದ್ಧಾರ ಕಾರ್ಯಗಳನ್ನು ಆರಂಭಗೊಳಿಸಿದೆವು. ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿ ಒಂದು ಮುಷ್ಠಿ ಪಣವು ಸಂಗ್ರಹ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದೇವೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತದೆ ಎಂಬ ಮಾತಿನಂತೆ ಧಾರ್ಮಿಕ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡ ನಮ್ಮ ಮೂಲಕವೇ ದೈವ ಈ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮ ಮಾಡಿಸಿದೆ ಎಂದರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕೆಲಸಗಳು ಆಗಿದೆ. 12 ವರ್ಷ ಬಾಲಾಲಯದಲ್ಲಿ ಇದ್ದ ದೈವ ಯಾವುದೇ ತೊಡಕಿಲ್ಲದೆ, ನಿರ್ವಿಘ್ನವಾಗಿ ಬಾಲಾಲಯದಿಂದ ಮೂಲಾಲಯದಲ್ಲಿ ಸೇರಿಕೊಂಡಿದೆ. ಭವಿಷ್ಯದಲ್ಲಿ ನಮಗೆಲ್ಲರಿಗೂ ಕೈಮುಗಿಯಲು ಒಂದು ಕ್ಷೇತ್ರ ಸಿದ್ಧವಾಗಿ ನಿಂತಿದೆ ಎಂದು ಹೇಳಿದ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಛಲಬಿಡದ ತ್ರಿವಿಕ್ರಮನ ರೀತಿಯಲ್ಲಿ ಕೆಲಸ ಮಾಡಿದ್ದಾರೆ-ಶ್ರೀಕೃಷ್ಣ ಭಟ್ ಮುಂಡ್ಯ:
ಶ್ರೀವಿಷ್ಣುಮೂರ್ತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ ಮಾತನಾಡಿ ಛಲ ಬಿಡದ ತ್ರಿವಿಕ್ರಮನ ಹಾಗೆ ಜೀಣೋದ್ಧಾರದ ಕೆಲಸಗಳನ್ನು ಮಾಡಿದ್ದಾರೆ. ದೈವ ದೇವರ ವರ ಪ್ರಸಾದ ಎಂದು ಸ್ವೀಕರಿಸಿ ಕೆಲಸ ಪೂರ್ತಿಗೊಳಿಸಿದ್ದಾರೆ. ದೈವಸ್ಥಾನದಲ್ಲಿ ನಿತ್ಯನೈಮಿತ್ತ್ಯಾದಿಗಳು ಸರಿಯಾಗಿ ನಡೆಯಬೇಕು ಆಗ ಸಾನಿಧ್ಯವೂ ವೃದ್ಧಿಯಾಗುತ್ತದೆ ಎಂದರು.
ದೈವದ ಸನ್ನಿಧಿಯಲ್ಲಿ ಸೇವೆ ಮಾಡುವ ಅವಕಾಶ-ನವೀನ್ ಕುಮಾರ್ ಕುಕ್ಕುಡೇಲು:
ಶ್ರೀವಿಷ್ಣುಮೂರ್ತಿ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಕುಕ್ಕುಡೇಲು ಮಾತನಾಡಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷನಾಗಿ ಶ್ರೀವಿಷ್ಣುಮೂರ್ತಿಯ ಸನ್ನಿಧಿಯಲ್ಲಿ ಸೇವೆ ಮಾಡುವ ಅವಕಾಶ ನನಗೆ ದೊರಕಿದೆ. ಇದು ನನ್ನ ಪುಣ್ಯ. ನನಗೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದರು.
ಶ್ರೀವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಲಪುಷ್ಪ ತಾಂಬೂಲ ನೀಡಿ ಒಡಿಯೂರು ಸ್ವಾಮೀಜಿಯವರನ್ನು ಗೌರವಿಸಲಾಯಿತು. ಒಡಿಯೂರು ಗ್ರಾಮವಿಕಾಸ ಚಾರಿಟೇಬಲ್ ಟ್ರಸ್ಟ್ ಹಾಗೂ ಗುರುದೇವ ಸೇವಾ ಬಳಗದವರು ಸ್ವಾಮೀಜಿಯವರನ್ನು ಫಲಪುಷ್ಪ ತಾಂಬೂಲ ನೀಡಿ ಗೌರವಿಸಿದರು.ವಿಸ್ಮಿತಾ ಕೋರಿಗದ್ದೆ ಪ್ರಾರ್ಥಿಸಿ ಶ್ರೀವಿಷ್ಣುಮೂರ್ತಿ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಮೀನಾಕ್ಷಿ ಭಾಸ್ಕರ ಪುಳಿಮಾರಡ್ಕ ವಂದಿಸಿದರು. ಬಾಲಕೃಷ್ಣ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಹಾಗೂ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ಬಳಿಕ ತೇಜಸ್ವಿನಿ ನವೀನ್ ಕುಕ್ಕುಡೇಲು ನಿರ್ದೇಶನದಲ್ಲಿ “ಸಮರ್ಥ” ಸಾಂಸ್ಕೃತಿಕ ಕಲಾತಂಡದಿಂದ ನೃತ್ಯವೈವಿಧ್ಯ ಕಾರ್ಯಕ್ರಮ ನಡೆಯಿತು.
ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮಿಸಿದ ಮಹನೀಯರಿಗೆ ಗೌರವಾರ್ಪಣೆ
ದೈವಸ್ಥಾನದ ಜೀಣೋದ್ಧಾರ ಹಾಗೂ ಇತರ ಕೆಲಸ ಕಾರ್ಯಗಳಲ್ಲಿ ಶ್ರಮಿಸಿದ ಮಹನೀಯರನ್ನು ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಗೌರವಿಸಲಾಯಿತು. ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಅರ್ಚಕ ರವೀಂದ್ರ ಮಾಣಿಲತ್ತಾಯ, ಶ್ರೀವಿಷ್ಣುಮೂರ್ತಿ ದೈವಸ್ಥಾನದ ಬಾಲಾಲಯದ ಅರ್ಚಕರಾಗಿದ್ದ ಶ್ರೀಪತಿ ಭಟ್, ದೈವಸ್ಥಾನದ ವಾಸ್ತುಶಿಲ್ಪ ಸಲಹೆಗಾರ ಹಾಗೂ ಕಾಷ್ಠಶಿಲ್ಪ ರಚನೆಗಾರ ಪಯ್ಯನ್ನೂರು ರಾಘವ ಆಚಾರ್ಯ, ಜೀಣೋದ್ಧಾರ ಸಮಯದಲ್ಲಿ ಅನ್ನದಾನ ಮಾಡಿ ಸಹಕರಿಸಿದ ಮಾಲಾಕ್ಷಿ ಅರಿಪ್ಪಳರವರನ್ನು ಸ್ವಾಮೀಜಿಯಯವರು ಶಲ್ಯ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.
ದೈವಸ್ಥಾನದ ಪುನರ್‌ನಿರ್ಮಾಣ ಕಾರ್ಯದ ನೇತೃತ್ವ ವಹಿಸಿದ್ದ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ರೈ ಮೇನಾಲ, ಗೌರವಾಧ್ಯಕ್ಷ ಶ್ರೀಕೃಷ್ಣ ಭಟ್ ಮುಂಡ್ಯ, ಅಧ್ಯಕ್ಷ ಧರ್ಮೇಂದ್ರ ಕೆ., ಶ್ರೀವಿಷ್ಣುಮೂರ್ತಿ ಪುನಃ ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಕುಕ್ಕುಡೇಲು ಹಾಗೂ ಕಾರ್ಯದರ್ಶಿ ಮೀನಾಕ್ಷಿ ಭಾಸ್ಕರ ಪುಳಿಮಾರಡ್ಕರವರನ್ನು ಶಲ್ಯ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.