ಉಪ್ಪಿನಂಗಡಿ: ಭಕ್ತಿಗೆ ಒಲಿದು ಭಕ್ತರ ಅದೆಷ್ಟೋ ಇಷ್ಟಾರ್ಥಗಳನ್ನು ಕೊರಗಜ್ಜ ದೈವ ಈಡೇರಿಸಿದ ಉದಾಹರಣೆಗಳ ಮಧ್ಯೆಯೇ ಹಿರೇಬಂಡಾಡಿ ಗ್ರಾಮದ ಬೊಳಾಮೆಯ ಕೆರೆಕೋಡಿ ಎಂಬಲ್ಲಿರುವ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜ ದೈವ ನೀಡಿದ ಅಭಯದಂತೆ ಏಳು ದಿನಗಳೊಳಗೆ ಕದ್ದ ಹೋಗಿದ್ದ ಅಂಕದ ಕೋಳಿಯೊಂದು ಮತ್ತೆ ಪತ್ತೆಯಾದ ಪವಾಡ ನಡೆದಿದೆ.
ಇಲ್ಲಿನ ವಾಸಪ್ಪ ಪೂಜಾರಿ ಎಂಬವರ ಜಾಗದಲ್ಲಿ ಅವರ ತಂದೆಯವರ ಕಾಲದಿಂದ ನಂಬಿಕೊಂಡು ಬಂದಿರುವ ಕೊರಗಜ್ಜನ ಸಾನಿಧ್ಯವಿದ್ದು, ಭಕ್ತರೆಲ್ಲಾ ಸೇರಿ ಇದನ್ನು ಆರಾಧಿಸಿಕೊಂಡು ಬರುತ್ತಿದ್ದರು. ಈ ಗ್ರಾಮದವರೇ ಆದ ವ್ಯಕ್ತಿಯೋರ್ವರು ಕಳೆದ ನಾಲ್ಕು ತಿಂಗಳ ಹಿಂದೆ ಇಲ್ಲಿನ ಕೊರಗಜ್ಜನ ಸಾನಿಧ್ಯದ ಬಳಿ ಬೆಲೆಬಾಳುವ ಅಂಕದ ಕೋಳಿಯೊಂದನ್ನು ಕಟ್ಟಿ ಹಾಕಿದ್ದರು. ಆದರೆ ಅದನ್ನು ಯಾರೋ ಕಳ್ಳರು ಕದ್ದು ಕೊಂಡು ಹೋಗಿದ್ದರು. ಕೆಲವು ದಿನಗಳ ಹಿಂದೆ ಕೆರೆಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ಕೋಲ ಸೇವೆ ನಡೆದಿದ್ದು, ಆಗ ಅವರು ಪ್ರಾರ್ಥಿಸಿ, ಅಂಕದ ಕೋಳಿಯು ಕದ್ದು ಹೋಗಿರುವ ಬಗ್ಗೆ ದೈವದ ಎದುರು ಹೇಳಿಕೊಂಡಿದ್ದರು. ಆಗ ದೈವವು ಏಳು ದಿನಗಳೊಳಗೆ ಕದ್ದು ಹೋಗಿರುವ ಕೋಳಿ ನಿಮ್ಮ ಕೈಸೇರುವಂತೆ ಮಾಡುತ್ತೇನೆ ಎಂದಿತ್ತು. ಅಜ್ಜ ಕೊಟ್ಟ ನುಡಿಯಂತೆ ಏಳನೇ ದಿನದಂದು ಕದ್ದು ಹೋಗಿದ್ದ ಅವರ ಕೋಳಿಯು ಕೊರಗಜ್ಜನ ಸಾನಿಧ್ಯದ ಸ್ವಲ್ಪ ದೂರದಲ್ಲಿ ಕಟ್ಟಿಹಾಕಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊರಗಜ್ಜನ ಈ ಪವಾಡ ಭಕ್ತ ಜನರಲ್ಲಿ ವಿಸ್ಮಯ ಮೂಡಿಸಿದೆ.