ಉಪ್ಪಿನಂಗಡಿ: ಮುಂಬರುವ ಮಾರ್ಚ್ 31 ರಿಂದ ಎಪ್ರಿಲ್ 4 ವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠಕ್ಕೆ ಅಂಬಾ ಭವಾನಿ ದೇವಿಯ ಬೆಳ್ಳಿಯ ಪ್ರತಿಮೆಯನ್ನು ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ನೇತೃತ್ವದಲ್ಲಿ ಮಾ.29ರಂದು ಸಮರ್ಪಿಸಲಾಯಿತು.
ರಾಘವೇಂದ್ರ ಮಠದಲ್ಲಿ ಅಂಬಾ ಭವಾನಿಗೂ ನಿತ್ಯ ಪೂಜೆ ಸಲ್ಲಿಸಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ತೋರಿ ಬಂದಂತೆ ಮಠದಲ್ಲಿ ಪೂಜಿಸಲ್ಪಡುವ ಅಂಬಾ ಭವಾನಿಯ ಬೆಳ್ಳಿಯ ಪ್ರತಿಮೆಯನ್ನು ನಿರ್ಮಿಸಿಕೊಡಲು ಕಾಳಿಕಾಂಬಾ ಭಜನಾ ಮಂಡಳಿಯು ಸಂಕಲ್ಪಿಸಿದ್ದು, ಅದರಂತೆ ಭಕ್ತ ಸಮೂಹದ ಸಹಕಾರ ಪಡೆದು ನಿರ್ಮಿಸಲಾದ ಪ್ರತಿಮೆಯನ್ನು ಶುಕ್ರವಾರದಂದು ವಿಶೇಷ ಪ್ರಾರ್ಥನೆಯೊಂದಿಗೆ ಶ್ರೀ ಮಠಕ್ಕೆ ಸಮರ್ಪಿಸಲಾಯಿತು. ಈ ವೇಳೆ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪ್ರಧಾನ ಕಾರ್ಯದರ್ಶಿ ಮಾಧವ ಆಚಾರ್ಯ, ಮಠದ ಅಧ್ಯಕ್ಷ ಕೆ. ಉದಯ ಕುಮಾರ್, ಕಾರ್ಯದರ್ಶಿ ಗೋಪಾಲ ಹೆಗ್ಡೆ, ಪ್ರಮುಖರಾದ ಹರೀಶ್ ಉಪಾಧ್ಯಾಯ, ವಿಷ್ಣುಮೂರ್ತಿ ಕುದ್ದಣ್ಣಾಯ, ಶಿವಕುಮಾರ್ ಬಾರಿತ್ತಾಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಕೀರ್ತನ್ ಕುಮಾರ್, ಸುಂದರ ಆದರ್ಶನಗರ, ರಾಧಾಕೃಷ್ಣ ಭಟ್ ಬೊಳ್ಳಾವು, ಜಯಪ್ರಕಾಶ್ ಶೆಟ್ಟಿ, ಜಗದೀಶ್ ಶೆಟ್ಟಿ, ಪ್ರಶಾಂತ್ ನೆಕ್ಕಿಲಾಡಿ ಮತ್ತಿತರರು ಭಾಗವಹಿಸಿದ್ದರು.