ಪುತ್ತೂರು:ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿಯೂ, ತಮ್ಮ ಮೇಲೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದ್ದು ಅರೆಸ್ಟ್ ಮಾಡಲು ಕೋರ್ಟ್‌ನಿಂದ ವಾರಂಟ್ ಆಗಿದೆ ಎಂದು ಪುತ್ತೂರಿನ ಜನಪ್ರಿಯ ವೈದ್ಯರೋರ್ವರಿಗೆ ಕರೆ ಮಾಡಿದ ಅಪರಿಚಿತ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಮತ್ತು ಆತನ ಮಾತನ್ನು ನಿಜವೆಂದು ನಂಬಿ ಆತ ತಿಳಿಸಿದ ಖಾತೆಗೆ ೧೬.೫ ಲಕ್ಷ ರೂ.ಗಳನ್ನು ಕಳುಹಿಸಿ ವೈದ್ಯರು ಮೋಸ ಹೋಗಿರುವ ಘಟನೆ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಳುವಾರು ನಿವಾಸಿಯಾಗಿರುವ ಡಾ. ಚಿದಂಬರ ಅಡಿಗ (೬೯ ವ.) ಎಂಬವರು ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿ,ಱನನ್ನ ದೂರವಾಣಿಗೆ ಮಾ.೨೮ರಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು.ಕರೆ ಸ್ವೀಕರಿಸಿ ಮಾತನಾಡಿದಾಗ, ಕರೆ ಮಾಡಿದ ವ್ಯಕ್ತಿಯು ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿ, ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್‌ನಿಂದ ವಾರಂಟ್ ಆಗಿದೆ.ನೀವು ದೆಹಲಿಯ ಸಿಬಿಐ ಕೋರ್ಟ್‌ಗೆ ಹಾಜರಾಗಬೇಕು.ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್‌ನ ಕೇಸ್ ನಡೆಸುತ್ತೇವೆ.ನೀವು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬ್ರಕ್ಕೆ ವರ್ಗಾವಣೆ ಮಾಡಬೇಕು.ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ.ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿ, ತನ್ನ ವಿರುದ್ದ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ನನ್ನ ಮೊಬೈಲ್ ಫೋನ್‌ನ ವಾಟ್ಸ್ ಆಪ್‌ಗೆ ಕಳುಹಿಸಿರುವುದಾಗಿದೆ.ನಾನು ಸದ್ರಿ ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು ತನ್ನ ಬ್ಯಾಂಕ್ ಖಾತೆಯಿಂದ, ಆರ್‌ಟಿಜಿಎಸ್ ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ.೧೬,೫೦,೦೦೦ ಹಣವನ್ನು ವರ್ಗಾವಣೆ ಮಾಡಿದ್ದೆ.ಸ್ವಲ್ಪ ಹೊತ್ತಿನ ಬಳಿಕ ಸದ್ರಿ ಅದೇ ವ್ಯಕ್ತಿಯು ಮತ್ತೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ, ಅನುಮಾನ ಬಂದು ದೂರವಾಣಿ ಕರೆ ಕಡಿತಗೊಳಿಸಿದ್ದೆ.ಬಳಿಕ ಈ ಕುರಿತು ಗೆಳೆಯರೊಂದಿಗೆ ಈ ಬಗ್ಗೆ ತಿಳಿಸಿದಾಗ ಸದರಿ ಆನ್‌ಲೈನ್ ಮೋಸದ ಕೃತ್ಯದ ಬಗ್ಗೆ ತಿಳಿದುಬಂದಿರುತ್ತದೆಎಂಬುದಾಗಿ ವೈದ್ಯರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ(ಅ.ಕ್ರ.ನಂ ೩೨-೨೦೨೪)ಕಲಂ:೪೦೬,೪೧೯, ೪೨೦ ಐಪಿಸಿ ಮತ್ತು ೬೬(ಸಿ),೬೬(ಡಿ)ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.