ಉಪ್ಪಿನಂಗಡಿ ವಿಜಯ- ವಿಕ್ರಮ ಜೋಡುಕರೆ ಕಂಬಳ-ತುಳುವಿಗೆ ಅಧಿಕೃತ ಸ್ಥಾನಮಾನ ಕೊಡಿಸಿಯೇ ಸಿದ್ಧ: ಅಶೋಕ್ ಕುಮಾರ್ ರೈ

0


ಉಪ್ಪಿನಂಗಡಿ: ತುಳು ಭಾಷೆಗೆ ಅಧಿಕೃತವಾಗಿ ರಾಜ್ಯ ಭಾಷೆಯ ಸ್ಥಾನಮಾನ ಸಿಗಬೇಕೆಂಬ ಉದ್ದೇಶದಿಂದ ವಿಧಾನ ಸಭೆಯಲ್ಲಿ ನಾನು ತುಳುವಿನಲ್ಲಿ ಮಾತನಾಡಿದ್ದೇನೆ. ಒಂದು ಕೆಲಸಕ್ಕೆ ಕೈ ಹಾಕಿದ್ದೇನೆ ಅಂದರೆ ಅದನ್ನು ಪೂರ್ಣಗೊಳಿಸದೇ ಬಿಡುವವನು ನಾನಲ್ಲ. ತುಳು ಭಾಷೆಯ ವಿಚಾರದಲ್ಲಿಯೂ ಕೂಡಾ ಐದು ಜನರ ತಂಡವನ್ನು ನೇಮಿಸಿ ಹೆಚ್ಚುವರಿ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿಕೊಂಡ ಮೂರು ರಾಜ್ಯಗಳಿಗೆ ಮಾಹಿತಿ ಕಲೆ ಹಾಕಲು ಕಳುಹಿಸಿದ್ದು, ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಭಾಷೆಯನ್ನಾಗಿ ತೆಗೆದುಕೊಂಡು ಅದಕ್ಕೆ ಅಧಿಕೃತ ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ದೈವ- ದೇವರ ಆಶೀರ್ವಾದವಿದ್ದರೆ, ಇನ್ನೊಂದೆರಡು ವರ್ಷದ ಅವಧಿಯಲ್ಲಿ ತುಳು ಭಾಷೆ ಕೂಡಾ ರಾಜ್ಯದ ಅಧಿಕೃತ ಸ್ಥಾನಮಾನ ಪಡೆಯಲಿದೆ ಎಂದು ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರೂ ಆದ ಅಶೋಕ್ ಕುಮಾರ್ ರೈಯವರು ವಿಶ್ವಾಸ ವ್ಯಕ್ತಪಡಿಸಿದರು.


ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ವತಿಯಿಂದ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುತ್ತಿರುವ ವಿಜಯ- ವಿಕ್ರಮ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆದಿದ್ದು, ಇದರ ಯಶಸ್ವಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ರೈತಾಪಿ ವರ್ಗವೇ ಕಾರಣ. ಅಲ್ಲಿ ಕಂಬಳ ಆಯೋಜನೆಗೊಂಡ ಬಳಿಕ ಕಂಬಳದೊಂದಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಜೋಡಣೆ ಮಾಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ.

ಆದ್ದರಿಂದ ಉಪ್ಪಿನಂಗಡಿ ಕಂಬಳದಲ್ಲಿ ಈ ಬಾರಿ ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣಗಳ ಮೇಳ, ಸಾಂಸ್ಕೃತಿಕ ವೈಭವ, ನೇತ್ರಾವತಿ ಹಿನ್ನೀರಿನಲ್ಲಿ ಬೋಟಿಂಗ್ ರೈಡ್ ಅನ್ನು ಆಯೋಜಿಸಲಾಗಿದೆ. ಕಂಬಳಕ್ಕೆ ಬರುವ ಪ್ರತಿಯೋರ್ವರು ಒಂದು ಸಸಿಯನ್ನು ಕೊಂಡೋಗಿ ನೆಟ್ಟರೆ, ನಮ್ಮ ಊರು ಹಸಿರೀಕರಣದಿಂದ ಕೂಡಿರಲು ಸಾಧ್ಯ ಎಂದ ಅವರು, ಉಪ್ಪಿನಂಗಡಿ ಕಂಬಳವು ಬೆಳ್ಳಿಹಬ್ಬವನ್ನು ಮುಗಿಸಿ ನಿಲ್ಲುವ ಹಂತಕ್ಕೆ ಬಂದಾಗ ಕಂಬಳದ ಬಗ್ಗೆ ಅಷ್ಟೇನೂ ಆಸಕ್ತಿ ಹೊಂದಿರದ ನಾನು ಅದರ ಸಾರಥ್ಯವನ್ನು ವಹಿಸಿದೆ. ಮತ್ತೆ ಪೇಟಾದವರಿಂದ ಕಂಬಳಕ್ಕೆ ತೊಂದರೆಗಳು ಆದಾಗ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಸ್ವಂತ ಖರ್ಚಿನಲ್ಲಿ ಕಾನೂನು ಹೋರಾಟ ಮಾಡಿರುವುದು ಉಪ್ಪಿನಂಗಡಿಯ ವಿಜಯ- ವಿಕ್ರಮ ಕಂಬಳ ಸಮಿತಿ ಮಾತ್ರ. ಸುಪ್ರೀಂ ಕೋರ್ಟ್ನಲ್ಲಿ ನಿರಂತರ ಏಳು ತಿಂಗಳಿನಷ್ಟು ಕಾಲ ವಾದ-ವಿವಾದ ನಡೆದಾಗ ಕಂಬಳದ ಬಗ್ಗೆ ಉಪ್ಪಿನಂಗಡಿ ಕಂಬಳ ಸಮಿತಿಯಿಂದ ಸರಿಯಾದ ಮಾಹಿತಿ ಒದಗಿಸುವ ಕೆಲಸವಾಗಿದ್ದರಿಂದ ಐದು ಜನ ನ್ಯಾಯಾಧೀಶರುಳ್ಳ ಸುಪ್ರೀಂಕೋರ್ಟ್ ಬೇಂಚ್‌ನಿಂದ ಕಂಬಳದ ಪರವಾಗಿ ಆದೇಶ ಬರಲು ಸಾಧ್ಯವಾಗಿದೆ. ಆದ್ದರಿಂದ ತುಳು ಭಾಷೆಯೊಂದಿಗೆ ತುಳುನಾಡ ಸಂಸ್ಕೃತಿ, ಜನಪದ ಕ್ರೀಡೆಗಳನ್ನು ವಿಶ್ವದಗಲಕ್ಕೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.


ಡಿಸಿಸಿ ಬ್ಯಾಂಕ್ ನಿರ್ದೇಶಕ, ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು ಮಾತನಾಡಿ, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ಆಯೋಜಿಸಿದ ಕೀರ್ತಿ ಅಶೋಕ್ ಕುಮಾರ್ ರೈಯವರಿಗೆ ಈಗಾಗಲೇ ಸಂದಿದೆ. ಇದರೊಂದಿಗೆ ಉಪ್ಪಿನಂಗಡಿ ಕಂಬಳದಲ್ಲಿಯೂ ಈ ಬಾರಿ ವಿವಿಧ ಕಾರ್ಯಕ್ರಮಗಳನ್ನು ಜೋಡಣೆ ಮಾಡುವ ಮೂಲಕ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಂಬಳದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜೋಡಣೆ ಮಾಡಲಾಗಿದೆ ಎಂಬ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದರು.


ಕಂಬಳ ಅಕಾಡಮಿ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ತುಳು ಭಾಷೆ, ಸಂಸ್ಕೃತಿ ಬೆಳೆಯಬೇಕು. ಅದಕ್ಕೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಾಗ ಮತ್ತು ಸಭಾಭವನ ಬೇಕೆಂಬ ಉದ್ದೇಶದಿಂದ ಅಶೋಕ್ ಕುಮಾರ್ ರೈಯವರು ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದ್ದು, ಅದು ಯಶಸ್ವಿಯಾಗಿ ನಡೆದಿದೆ. ಈಗ ದುಬೈ, ಮುಂಬೈಯಲ್ಲಿ ಕಂಬಳ ನಡೆಸಿ ಎಂಬ ಬೇಡಿಕೆಯೂ ಬರುತ್ತಿದೆ. ಇದೆಲ್ಲಾ ಒಳ್ಳೆಯದೇ ಅದರೆ ಅದಕ್ಕಿಂತ ಮುಖ್ಯವಾಗಿ ಕಂಬಳದಲ್ಲಿ ಸಮಯದ ಪರಿಪಾಲನೆಯತ್ತ ಕೋಣಗಳ ಮಾಲಕರು, ಕಂಬಳ ಸಮಿತಿಯವರು ಗಮನ ಕೊಡುವ ಅಗತ್ಯ ಇದೆ ಎಂದರು.



ಹಾಸನ ಪುಡಾ ಅಧ್ಯಕ್ಷ ಪ್ರಕಾಶ್ ಗೌಡ, ಚಲನಚಿತ್ರ ನಟ ಯಶ್ ಶೆಟ್ಟಿ, ಮಾಡೆಲಿಂಗ್ ಕ್ಷೇತ್ರದ ಆರತಿ ಪಡುಬಿದ್ರೆ, ಪುತ್ತೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮುಹಮ್ಮದ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಬೆಂಗಳೂರು ತುಳು ಕೂಟದ ಅಧ್ಯಕ್ಷ ಸುಂದರರಾಜ್ ರೈ, ಕಂಬಳದ ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಣಿ ಸಾಗು ಉಮೇಶ್ ಶೆಟ್ಟಿ (ಕಂಬಳ ಕ್ಷೇತ್ರ) ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಂದಾವರ ಉಮೇಶ್ ಶೆಣೈ ಹಿರಿಯ ಕಂಬಳ ಆಯೋಜಕರು, ಗಣೇಶ್ ಶೆಟ್ಟಿ ಗೋಳ್ತಮಜಲು (ದಿ. ಪಂಡಿತ್ ಉಗ್ಗಪ್ಪ ಶೆಟ್ಟಿ ಹಿರಿಯ ಕಂಬಳ ಕೋಣಗಳ ಯಜಮಾನರು), ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ (ಕೃಷಿ ಕ್ಷೇತ್ರ) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಪ್ಪು ಯಾನೆ ಜೋನ್ ಸಿರಿಲ್ ಡಿಸೋಜ ಸರಪಾಡಿ (ಅನುಭವಿ ಕಂಬಳ ಕರೆ ನಿರ್ಮಾಪಕರು), ವಿಷ್ಣು ರೈ ನಾಕೂರು (ಪ್ರಾಮಾಣಿಕ ಕೆಲಸಕ್ಕೆ ಅಭಿನಂದನೆ) ಇವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹಗ್ಡೆಹಿತ್ಲು, ಪ್ರಮುಖರಾದ ರೋಶನ್ ರೈ ಬನ್ನೂರು, ಸಾಜ ಶಿವರಾಂ ಆಳ್ವ, ಇರುವೈಲು ಪಾಣಿಲ ಸತೀಶ್ಚಂದ್ರ ಪೂಜಾರಿ, ಪ್ರಜ್ವಲ್ ರೈ ಪಾತಾಜೆ, ಪಂಜಿಗುಡ್ಡೆ ಈಶ್ವರ ಭಟ್, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ದಾಸಪ್ಪ ಗೌಡ ಕೋಡಿಯಡ್ಕ, ಕೃಷ್ಣಪ್ರಸಾದ್ ಆಳ್ವ, ನಳಿನಿ ಪಿ. ಶೆಟ್ಟಿ, ಅನಿಲ್ ಶೆಟ್ಟಿ, ಶಕೀಲಾ ಶೆಟ್ಟಿ, ನಳಿನಿ ಪಿ. ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಬಾರ್ಕೂರು ಶಾಂತರಾಮ ಶೆಟ್ಟಿ, ಮಹಾಲಿಂಗ ಕಜೆಕ್ಕಾರು, ಭಾರತಿ ಕಜೆಕ್ಕಾರು, ಜಾನ್ ಕೆನ್ಯೂಟ್, ಪ್ರಸನ್ನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



ಕಂಬಳ ಸಮಿತಿಯ ಉಪಾಧ್ಯಕ್ಷರಾದ ನಟೇಶ್ ಪೂಜಾರಿ, ವಿದ್ಯಾಧರ ಜೈನ್ ಪದ್ಮವಿದ್ಯಾ, ವಿಠಲ ಶೆಟ್ಟಿ ಕೊಲ್ಯೊಟ್ಟು, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಾರಿಸೇನ ಜೈನ್ ಕೋಡಿಯಾಡಿಗುತ್ತು, ರಾಜೀವ ಶೆಟ್ಟಿ ಕೇದಗೆ, ಶಿವಪ್ರಸಾದ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ಗೌರವ ಸಲಹೆಗಾರ ಯು. ರಾಮ, ಕಾರ್ಯದರ್ಶಿಗಳಾದ ಶಿವರಾಮ ಶೆಟ್ಟಿ ಗೋಳ್ತಮಜಲು, ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಕುಮಾರನಾಥ ಪಲ್ಲತ್ತಾರು ಕೋಡಿಂಬಾಡಿ, ಸತೀಶ್ ಶೆಟ್ಟಿ ಹೆನ್ನಾಳ, ಜಯಾನಂದ ಪಿಲಿಗುಂಡ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪೂಜಾರಿ ಪರಕ್ಕಜೆ, ಉಮೇಶ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದು, ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಸಮಿತಿಯ ನಿಹಾಲ್ ಶೆಟ್ಟಿ ಡ್ಯಾಶ್ ಮಾರ್ಕೆಟಿಂಗ್ ವಂದಿಸಿದರು. ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ನೇಗಿಲು ಕಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಹಲಗೆ ಮತ್ತು ಕನೆಹಲಗೆಯ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಒಟ್ಟು 121 ಜೊತೆ ಕೋಣಗಳು ಭಾಗವಹಿಸಿದವು.

ನೇತ್ರಾವತಿ ಕಿನಾರೆಯಲ್ಲಿ ಜನಜಂಗುಳಿ
ಈ ಬಾರಿ ಉಪ್ಪಿನಂಗಡಿಯ ಕಂಬಳವನ್ನು`ಉಬಾರ್ ಕಂಬಳೋತ್ಸವ’ವಾಗಿ ಆಯೋಜನೆ ಮಾಡಲಾಗಿದ್ದು, ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣಗಳ ಮೇಳ, ಸಾಂಸ್ಕೃತಿಕ ವೈಭವ, ಬೋಟಿಂಗ್, ಮಕ್ಕಳಿಗೆ ಮನೋರಂಜನಾ ಆಟಗಳನ್ನು ಆಯೋಜನೆ ಮಾಡಲಾಗಿದ್ದು, ಆದ್ದರಿಂದ ಈ ಬಾರಿಯ ಕಂಬಳಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಜನಜಂಗುಳಿಯೇ ನೆರೆದಿತ್ತು. ಒಂದು ಕಡೆ ಸಭಾ ಕಾರ್ಯಕ್ರಮ ನಡೆದರೆ, ಇನ್ನೊಂದು ಕಡೆ ಕಂಬಳ ವೀಕ್ಷಣೆ, ಮತ್ತೊಂದು ಕಡೆ ಸಸ್ಯ ಮೇಳ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಜನರ ಸಂಖ್ಯೆ ಹೆಚ್ಚಾಗಿತ್ತು. ರಾತ್ರಿಯೂ ನೇತ್ರಾವತಿ ನದಿಯಲ್ಲಿ ಬೋಟಿಂಗ್ ರೈಡ್ ಮಾಡಿ ಜನರು ಖುಷಿಪಟ್ಟರು. ಒಟ್ಟಿನಲ್ಲಿ ಈ ಬಾರಿಯ ಉಪ್ಪಿನಂಗಡಿಯ ವಿಜಯ – ವಿಕ್ರಮ ಜೋಡುಕರೆ ಕಂಬಳವು ಸರ್ವಧರ್ಮೀಯರ ಜಾತ್ರೆಯಂತೆ ಕಂಡು ಬಂತು.

LEAVE A REPLY

Please enter your comment!
Please enter your name here