ಪುತ್ತೂರು:ಗೃಹರಕ್ಷಕದಳ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತಾರು ಪುತ್ತೂರು ಗ್ರಹರಕ್ಷಕದಳ ಕಛೇರಿಗೆ ಮಾ.31ರಂದು ಭೇಟಿ ನೀಡಿ ಚುನಾವಣಾ ಸಿದ್ಧತೆ ಸಭೆ ನಡೆಸಿದರು.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವಾದ ಭಾರತ ದೇಶ ಮಗದೊಂದು ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಮೂಲ ಧ್ಯೇಯವೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವಂತಹಾ ವ್ಯವಸ್ಥೆ ಆಗಿರುತ್ತದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯ ಮತವೂ ಅತ್ಯಮೂಲ್ಯವಾಗಿರುತ್ತದೆ. ಮತದಾನ ಎನ್ನುವುದು ನಮ್ಮ ಹಕ್ಕು ಮಾತ್ರವಲ್ಲದೇ, ನಮ್ಮ ಶಕ್ತಿ ಕೂಡಾ ಆಗಿರುತ್ತದೆ. ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾಪೂರ್ವಕವಾಗಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಲ್ಲಿ ನಿಂತಿದ್ದೇವೆ. ನನ್ನದೊಂದು ಮತದಿಂದ ಜಗತ್ತು ಅಡಿ ಮೇಲಾಗದು ಎಂಬ ತಾತ್ಸರದ ಧೋರಣೆ ಬಹಳ ಅಪಾಯಕಾರಿ. ಇಂತಹ ಉಡಾಫೆಯ ವರ್ತನೆ ಮತ್ತು ನನ್ನದೊಂದು ಮತದಿಂದ ಏನಾಗಬಹುದು ಎಂಬ ನಿರ್ಲಕ್ಷದಿಂದಾಗಿ ನಾವು ಬಹಳ ಕಷ್ಟನಷ್ಟ ಅನುಭವಿಸಿರುವುದು ಚರಿತ್ರೆಗಳಿಂದ ಹಲವು ಬಾರಿ ಸಾಬೀತಾಗಿದೆ. ಪ್ರತಿಯೊಂದು ಮತವೂ ಅತ್ಯಮೂಲ್ಯ ಮತ್ತು ಮತದಾನ ಎನ್ನುವುದು ಬಹಳ ಪವಿತ್ರವಾದ ಕರ್ತವ್ಯ ಎಂದು ಪ್ರತಿಯೊಬ್ಬ ಮತದಾರನೂ ತಿಳಿದುಕೊಂಡಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬಹುದು ಎಂದರು.ಈ ಸಂದರ್ಭದಲ್ಲಿ ಗೃಹರಕ್ಷಕರು ಮತದಾನ ಜಾಗೃತಿ ಜಾಥಾ ನಡೆಸಿದರು. ಈ ಸಂಧರ್ಬದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ,ಜಗನ್ನಾಥ್,ಉಳ್ಳಾಲ ಘಟಕಾಧಿಕಾರಿ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.