ಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ದರ್ಬೆ ಬೈಪಾಸ್ ಅಶ್ವಿನಿ ಹೋಟೆಲ್‌ನ ಬಳಿ ಎ.1ರಂದು ಉದ್ಘಾಟನೆಗೊಂಡಿತು. ಬಳಿಕ ಕಾರ್ಯಕರ್ತರ ಸಭೆ ಮಂಜಲ್ಪಡ್ಪು ಉದಯಗಿರಿ ಸಭಾಭವನದಲ್ಲಿ ನಡೆಯಿತು.
ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್.,ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರು ಚುನಾವಣಾ ಕಚೇರಿ ಉದ್ಘಾಟಿಸಿದರು. ಬಳಿಕ ಉದಯಗಿರಿ ಸಭಾಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್.ಅವರು, ವಿಧಾನಸಭೆ ಚುನಾವಣೆ ಸಂದರ್ಭ ನೀಡಿದ ಭರವಸೆಗಳಾದ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು, ಕ್ರಿಕೆಟ್ ಸ್ಟೇಡಿಯಂ ಮೊದಲಾದ ಯೋಜನೆಗಳನ್ನು ಈಡೇರಿಸಲು ಶಾಸಕ ಅಶೋಕ್ ಕುಮಾರ್ ರೈ ಅವರು ಹೋರಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಈ ಯೋಜನೆಗಳ ಈಡೇರಿಕೆಗೆ ಶ್ರಮಿಸುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿಯ ಕನಸಿಗೆ ನಾನು ಕೈಜೋಡಿಸುತ್ತೇನೆ ಎಂದರು. ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗಳ ಬಗ್ಗೆಯೂ ಅರಿವಿದೆ. ಕಾಂಗ್ರೆಸ್ ಲೋಕಸಭಾ ಸದಸ್ಯರು ಅಧಿಕಾರದಲ್ಲಿದ್ದಾಗ ಈ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ. ನಂತರ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಡಕು ಉಂಟು ಮಾಡಿ, ಜಾತಿ-ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಅಽಕಾರಕ್ಕೆ ಬಂದ ಬಳಿಕ ಯಾವೊಂದು ಹೊಸ ಯೋಜನೆಗಳನ್ನು ಜಿಲ್ಲೆಗೆ ತಂದಿಲ್ಲ. ಆದ್ದರಿಂದ ಜಿಲ್ಲೆಯ ಸಾಮರಸ್ಯವನ್ನು ಮತ್ತೊಮ್ಮೆ ಹುಟ್ಟುಹಾಕಬೇಕಾಗಿದೆ. ಹೊಸ ಯೋಜನೆಗಳನ್ನು ಜಿಲ್ಲೆಗೆ ತರಬೇಕಾಗಿದೆ. ನಗು ಮುಖದಿಂದ ಮತ ಕೇಳಲು ಹೋಗಿ. ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ. ಖಂಡಿತವಾಗಿಯೂ ಕಾಂಗ್ರೆಸ್ ಗೆಲುವು ಪಡೆಯುತ್ತದೆ ಎಂದು ಹೇಳಿದರು.
ಪದ್ಮರಾಜ್ ಗೆದ್ದರೆ ಸಂಸತ್ತಿನಲ್ಲಿ ಧೈರ್ಯದಿಂದ ಮಾತನಾಡಬಹುದು: ಅಶೋಕ್ ರೈ:
ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.ಅವರು ಉತ್ತಮ ವಿದ್ಯೆ ಕಲಿತವರು, ಧೈರ್ಯ ಇರುವವರು. ಕೇಂದ್ರದ ಯೋಜನೆಗಳನ್ನು ಜಿಲ್ಲೆಗೆ ತರುವ ಶಕ್ತಿ ಇರುವ ಯುವಕ. ಪುತ್ತೂರಿನಲ್ಲಿ ನನ್ನನ್ನು ಗೆಲ್ಲಿಸಿದ ಬಳಿಕ ಜನರು ಧೈರ್ಯವಾಗಿ ಇಲಾಖೆಗಳಿಗೆ ಹೋಗುವಂತಾಗಿದೆ. ಅದೇ ರೀತಿ ಪದ್ಮರಾಜ್ ಅವರನ್ನು ಗೆಲ್ಲಿಸಿದರೆ ಅವರು ದೇಶದ ಶಕ್ತಿ ಕೇಂದ್ರದಲ್ಲಿ ಧೈರ್ಯದಿಂದ ಮಾತನಾಡಬಹುದು ಎಂದರು. ದ.ಕ.ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 75 ರಿಂದ 1 ಲಕ್ಷ ಮತದ ಅಂತರದಿಂದ ಗೆಲ್ಲಲ್ಲಿದ್ದಾರೆ. ಇದಕ್ಕಾಗಿ ಈ ಬಾರಿ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಅವರನ್ನು ಕಾರ್ಯಕರ್ತರು ಗೆಲ್ಲಿಸಿಕೊಡಬೇಕು ಎಂದು ಹೇಳಿದರು. ಈ ತನಕ ಧರ್ಮ ಆಧಾರಿತ ಚುನಾವಣೆಯನ್ನೇ ಮಾಡಿಕೊಂಡು ಬಂದವರಿಗೆ ನಾವು ಅಭಿವೃದ್ಧಿಯ ಮೂಲಕ ಉತ್ತರ ನೀಡಬೇಕು. ಪ್ರತಿ ಮನೆಗೂ ತೆರಳಿ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ. ಯಾರಿಗೂ ಸುಳ್ಳು ಭರವಸೆ ನೀಡಬೇಡಿ ಎಂದು ಹೇಳಿದ ಅಶೋಕ್ ಕುಮಾರ್ ರೈಯವರು, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಮತಗಳ ಲೀಡ್ ತಂದು ಕೊಡುತ್ತೇವೆ ಎಂದು ಅಭ್ಯರ್ಥಿ ಪದ್ಮರಾಜ್ ಅವರಿಗೆ ಭರವಸೆ ನೀಡಿದರು.
ಹಂತ ಹಂತವಾಗಿ ಉತ್ತರ: 50ಸಾವಿರ ರೂ. ಅನುದಾನ ತಂದರೆ ಮೂರು ಪ್ರೆಸ್‌ಮೀಟ್ ಮಾಡುವವರು, ನಮ್ಮ ಅನುದಾನದ ಬಗ್ಗೆ ಮಾತನಾಡುತ್ತಾರೆ. ಜಲಸಿರಿ ಯೋಜನೆ ಬಗ್ಗೆ ಮಾತನಾಡುತ್ತಾರೆ. ಸಚಿವರನ್ನು ಕರೆಸಿ 5ಸಾವಿರ ಜನರನ್ನು ಸೇರಿಸಿ ಜಲಸಿರಿ ಯೋಜನೆಯನ್ನು ಉದ್ಘಾಟಿಸುತ್ತೇನೆ. ಇವರ ಎಲ್ಲಾ ಪ್ರಶ್ನೆಗಳಿಗೂ ಹಂತ ಹಂತವಾಗಿ ಉತ್ತರ ನೀಡುತ್ತೇನೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಪದ್ಮರಾಜ್ ಗೆಲುವು ನಿಶ್ಚಿತ: ರಮಾನಾಥ ರೈ:
ಮಾಜಿ ಸಚಿವ ಬಿ. ರಮಾನಾಥ ರೈಯವರು ಮಾತನಾಡಿ, ಜಿಲ್ಲೆಯ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದ ಕಾಂಗ್ರೆಸ್ ನಾಯಕರು ಜೊತೆಯಾಗಿದ್ದರು. ಆದ್ದರಿಂದ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗರಿಗೆ ಇಲ್ಲ. ಪದ್ಮರಾಜ್ ಅವರ ಗೆಲುವು ನಿಶ್ಚಿತ. ಮುಂದಿನ ಕೆಲ ದಿನ ನಿದ್ದೆ ಕಡಿಮೆ ಮಾಡಿ ಪ್ರಚಾರ ಹೆಚ್ಚು ಮಾಡಿ ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಿ. ಮುಂದಿನ ಐದು ವರ್ಷ ಪದ್ಮರಾಜ್ ಅವರು ನಿದ್ದೆಗೆಟ್ಟು ನಮ್ಮ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದರು.
ಪದ್ಮರಾಜ್ ಅವರನ್ನು ಗೆಲ್ಲಿಸಿಕೊಡಿ: ಹರೀಶ್‌ಕುಮಾರ್:
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಗ್ಯಾರಂಟಿ ಯೋಜನೆ ಕಸದ ಬುಟ್ಟಿಗೆ ಎಂದು ಹೇಳುತ್ತಿದ್ದವರು ಇಂದು ನಮ್ಮದೊಂದು ಗ್ಯಾರಂಟಿ ಇದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯ ಸಾಽಸುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದನ್ನು ಮನೆಮನೆಗೂ ತಲುಪಿಸಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಹಿಂದೂ ಧಾರ್ಮಿಕ ಮುಖಂಡ ಪದ್ಮರಾಜ್: ಕಾವು ಹೇಮನಾಥ್ ಶೆಟ್ಟಿ:
ಕಾವು ಹೇಮನಾಥ್ ಶೆಟ್ಟಿ ಅವರು ಮಾತನಾಡಿ, ಪದ್ಮರಾಜ್ ಅವರು ಸಜ್ಜನಿಕೆಯ ವ್ಯಕ್ತಿ. ಹಿಂದೂ ಧಾರ್ಮಿಕ ಮುಖಂಡರೂ ಹೌದು. ಅವರನ್ನು ನಾವು ಗೆಲ್ಲಿಸಿಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಪಡೆದ ಮತ 37,558. ಅಂದರೆ ಪುತ್ತೂರಿನಲ್ಲಿ ಸುಮಾರು ಒಂದು ಕಾಲು ಲಕ್ಷದಷ್ಟು ಮತದಾರರು ಬಿಜೆಪಿಗೆ ವಿರೋಧವಿದ್ದಾರೆ. ರಾಷ್ಟ್ರಪ್ರೇಮಿ ಹಾಗೂ ರಾಷ್ಟ್ರದ್ರೋಹಿಗಳ ನಡುವಿನ ಚುನಾವಣೆ ಎಂದು ಬಿಜೆಪಿಯವರು ಹೇಳುತ್ತಾ ಬರುತ್ತಿದ್ದಾರೆ. ಕಾಂಗ್ರೆಸ್ ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನೋಡಿದರೆ ಕಾಂಗ್ರೆಸ್ ರಾಷ್ಟ್ರಪ್ರೇಮಿ ಪಕ್ಷ ಎನ್ನುವುದು ಸಾಬೀತಾಗುತ್ತದೆ ಎಂದರು.
ನಿಜವಾದ ದೇಶ ಪ್ರೇಮಿಗಳು ನಾವು-ಎಂ ಎಸ್ ಮಹಮ್ಮದ್:
ಕಾಂಗ್ರೆಸ್ ಮುಖಂಡ ಎಂ. ಎಸ್. ಮಹಮ್ಮದ್ ರವರು ಮಾತನಾಡಿ, ಬಿಜೆಪಿ ಅಭ್ಯರ್ಥಿ ಹೇಳುತ್ತಾರೆ ಈ ಚುನಾವಣೆ ದೇಶದ್ರೋಹಿಗಳ ಹಾಗೂ ದೇಶಪ್ರೇಮಿಗಳ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ನಾವು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಽಜಿಯವರ ಅನುಯಾಯಿಗಳಾಗಿದ್ದು ನೀವು ಮಹಾತ್ಮ ಗಾಂಽಜಿ ಯವರನ್ನು ಗುಂಡಿಟ್ಟು ಕೊಂದ ನಾಥುರಾಮ್ ಗೋಡ್ಸೆ ಯನ್ನು ವೈಭವೀಕರಿಸುವವರಾಗಿದ್ದು ನಿಜವಾದ ದೇಶಪ್ರೇಮಿ ನಾವಾಗಿದ್ದೇವೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ಸಿನ ಎಲ್ಲಾ ನಾಯಕರು ಒಗ್ಗಟ್ಟಾಗಿ ಯಾವ ರೀತಿಯಲ್ಲಿ ಅಶೋಕ್ ಕುಮಾರ್ ರೈ ಯವರನ್ನು ಗೆಲ್ಲಿಸಿ ಕೊಟ್ಟಿದ್ದೇವೆ ಅದೇ ರೀತಿ ಈ ಲೋಕಸಭಾ ಚುನಾವಣೆಯಲ್ಲಿ ಕೂಡ ಶಕ್ತಿ ಮೀರಿ ದುಡಿದು ಪದ್ಮರಾಜರವರನ್ನು ಗೆಲ್ಲಿಸಿ ಕೊಡುತ್ತೇವೆ ಎಂದು ಎಂ.ಎಸ್. ಮಹಮ್ಮದ್ ಹೇಳಿದರು.
ವಿಧಾನಪರಿಷತ್ ನೈಋತ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್, ಉಮಾನಾಥ ಶೆಟ್ಟಿ, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಶ್ರೀಪ್ರಸಾದ್ ಪಾಣಾಜೆ, ರಮಾನಾಥ್ ವಿಟ್ಲ, ನವೀನ್ ರೈ ಚೆಲ್ಯಡ್ಕ, -ರೂಕ್ ಪೆರ್ನೆ, ಶ್ರೀನಿವಾಸ್ ವಿಟ್ಲ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಭದ್ರ ಕೋಟೆ ಎಂಬ ಭ್ರಮೆ ಬೇಡ
ದ.ಕ. ಬಿಜೆಪಿಯ ಭದ್ರಕೋಟೆ ಎನ್ನುವ ಆಲೋಚನೆ ತಲೆಯಲ್ಲಿದ್ದರೆ ತೆಗೆದು ಹಾಕಿ. ಇಲ್ಲಿ ಈ ಭಾರಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ಈ ಭಯದಲ್ಲಿ ಬಿಜೆಪಿ ಈಗಾಗಲೇ ಅಪಪ್ರಚಾರಕ್ಕೆ ಮುಂದಾಗಿದೆ. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಹಿಂದು ಧರ್ಮದ ಜ್ಞಾನ, ಬೌದ್ಧ ಧರ್ಮದ ಕರುಣೆ, ಕ್ರೈಸ್ತ ಧರ್ಮದ ಪ್ರೀತಿ, ಮಹಮ್ಮದ್ ಪೈಗಂಬರರ ಸಹೋದರತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ದೇಶ ನಿರ್ಮಿಸೋಣ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲರೂ ಕಂಕಣ ಬದ್ಧರಾಗೋಣ.
-ಪದ್ಮರಾಜ್ ಆರ್.