ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ತಾಲೂಕಿನ ವಿವಿಧ ಗ್ರಾಮಗಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳಿಂದ ಹಸಿರು ಹೊರೆಕಾಣಿಕೆ ಸಂಗ್ರಹಿಸಲು ವಿನಂತಿಸಲಾಗುವುದು ಎಂದು ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಸಿದ್ದತಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪುತ್ತೂರು ಕಸಬಾ ಸೇರಿದಂತೆ ಸುತ್ತ ಮುತ್ತಲ ಸುಮಾರು 27 ಗ್ರಾಮಗಳನ್ನು ತೊಡಗಿಸಿಕೊಳ್ಳಲಾಗುವುದು. ಎಲ್ಲಾ ಗ್ರಾಮಗಳಲ್ಲಿರುವ ಪ್ರಮುಖರನ್ನು ಸಂಪರ್ಕಿಸಿಕೊಂಡು ಅವರ ಮೂಲಕ ಹೊರೆ ಕಾಣಿಕೆ ಸಂಗ್ರಹಣೆಗೆ ವಿನಂತಿಸಿಸಲಾಗುವುದು. ಆಯಾ ಗ್ರಾಮಗಳಲ್ಲಿರುವ ಪ್ರಮುಖರನ್ನು ದೇವಸ್ಥಾನದ ಹೊರೆಕಾಣಿಕೆ ಸಮಿತಿಯ ಮೂಲಕ ಸಂಪರ್ಕಿಸಲಾಗವುದು. ಪ್ರತಿ ಗ್ರಾಮಗಳಿಗೆ ದೇವಸ್ಥಾನದಿಂದ ಓರ್ವ ಸಂಚಾಲಕರನ್ನು ನೇಮಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾಣಿಸಲಾಯಿತು.
ಹೊರೆ ಕಾಣಿಕೆ ಸಂಗ್ರಹಣೆಯ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದ ಹೊರೆಕಾಣಿಕೆ ಸಮಿತಿ ಸಂಚಾಲಕ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಆರ್ಯಾಪು ಸೇರಿದಂತೆ ಎಲ್ಲಾ ಗ್ರಾಮಗಳಿಂದ ಸಂಗ್ರಹವಾಗುವ ಹಸಿರು ಹೊರೆ ಕಾಣಿಕೆಯು ಎ.20ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಜಮಾವಣೆಗೊಳ್ಳಲಿದೆ. ನಂತರ ಸಂಜೆ 3 ಗಂಟೆಗೆ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು ವಾಹನ ಮೆರವಣಿಗೆಯ ಹೊರೆಕಾಣಿಕೆಯು ಮುಖ್ಯ ರಸ್ತೆಯ ಮೂಲಕ ಸಾಗಿ ದೇವಸ್ಥಾನಕ್ಕೆ ಆಗಮಿಸಲಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕೂರೇಲು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ಸಂಚಾಲಕ ಸುಧಾಕರ ರಾವ್ ಆರ್ಯಾಪು, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಹೊರೆ ಕಾಣಿಕೆ ಸಮಿತಿ ಹರೀಶ್ ನಾಯಕ್ ವಾಗ್ಲೆ, ರೋಹಿತ್ ಕಾರ್ಪಾಡಿ ಸೇರಿದಂತೆ ಹೊರೆಕಾಣಿಕೆ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಹೊರೆಕಾಣಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹರೀಶ್ ನಾಯಕ್ ವಾಗ್ಲೆ 9481424284, ರೋಹಿತ್ ಕಾರ್ಪಾಡಿ 9535571460 ನಂಬರನ್ನು ಸಂಪರ್ಕಿಸುವಂತೆ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಸಮಿತಿ ಪ್ರಕಟಣೆ ತಿಳಿಸಿದೆ.