ನೀರು ಕೊಡಿ ನೀರು…ಬಿಜಲ, ಉರುವ ಕಾಲನಿಯಲ್ಲಿ ನೀರಿಗೆ ಹಾಹಕಾರ-ಕಾಲನಿ ನಿವಾಸಿಗಳಿಂದ ಒಳಮೊಗ್ರು ಗ್ರಾಪಂಗೆ ಮನವಿ, ಪ್ರತಿಭಟನೆಯ ಎಚ್ಚರಿಕೆ

0

ಪುತ್ತೂರು: ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಎಲ್ಲೆಡೆ ನೀರಿಗೆ ಹಾಹಕಾರ ಶುರುವಾಗಿದೆ. ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜಲ ಮತ್ತು ಉರುವ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದ್ದು ಈ ಕಾಲನಿಯ ನಿವಾಸಿಗಳು ಎ.1 ರಂದು ಗ್ರಾಪಂ ಕಛೇರಿಗೆ ಆಗಮಿಸಿ ಮನವಿ ಸಲ್ಲಿಕೆ ಮಾಡುವ ಮೂಲಕ ತಕ್ಷಣವೇ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮನವಿ ಸ್ವೀಕರಿಸಿದ ಕಾರ್ಯದರ್ಶಿ ಜಯಂತಿಯವರು ಎ.5 ರೊಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು ಅಲ್ಲಿಯ ತನಕ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಿದರು.

ಮುಗಿಯದ ಸಮಸ್ಯೆ
ಗ್ರಾಪಂ ವ್ಯಾಪ್ತಿಯ ಬಿಜಲ ಮತ್ತು ಉರುವ ಕಾಲನಿಯಲ್ಲಿ ಸುಮಾರು 25 ಕ್ಕೂ ಅಧಿಕ ಮನೆಗಳಿದ್ದು ಕಳೆದ 1 ತಿಂಗಳಿನಿಂದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಈ ಬಗ್ಗೆ ಗ್ರಾಪಂಗೆ ಮನವಿ ಮಾಡಿದ್ದರೂ ಗ್ರಾಪಂ ಯಾವುದೇ ರೀತಿಯ ಸ್ಪಂದನೆಯನ್ನು ಮಾಡಿರುವುದಿಲ್ಲ ಎಂದು ಆರೋಪ ಮಾಡಿರುವ ಕಾಲನಿ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ನಮ್ಮ ಕಾಲನಿಗೆ ನೀರಿನ ಸಮಸ್ಯೆ ಇದೆ ಎಂದು ಹೇಳಿದರು. ಕಳೆದ ಎರಡು ವರ್ಷಗಳ ಹಿಂದೆಯೂ ಕುಡಿಯುವ ನೀರಿಗಾಗಿ ನಾವು ಪ್ರತಿಭಟನೆ ನಡೆಸಿದ್ದೇವೆ. ನಮ್ಮ ಕಾಲನಿಗೆ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ ಮಾಡಿಕೊಡಬೇಕು ಎಂದು ಕಾಲನಿ ನಿವಾಸಿಗಳು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಬಿಜಲ ಮತ್ತು ಉರುವ ಕಾಲನಿ ನಿವಾಸಿಗಳಾದ ಬಾಲಕೃಷ್ಣ ಪೂಜಾರಿ, ಚಿನ್ನಪ್ಪ, ಬಾಲಕೃಷ್ಣ ಬಿಜಲ, ಚೆನ್ನ ಬಿಜಲ, ಮಂಜುನಾಥ, ಪ್ರಸಾದ್, ಹೊನ್ನಪ್ಪ, ಕೆ.ಕೊರಗಪ್ಪ ಪೂಜಾರಿ, ಗುಲಾಬಿ, ಅಕ್ಕು, ಚಂದ್ರಶೇಖರ, ಅಣ್ಣು, ತಿರುಮಲೇಶ್ವರ, ಸುಂದರ,ಗಿರಿಜ, ಪ್ರಮೀಳ, ಮಂಜುಳಾ, ಸುಮತಿ, ಕಮಲ, ಲೋಕೇಶ್ ಕೆ.ಜಿ, ಯಶೋಧರ, ಮನೋಜ್, ರವಿ, ರಾಜೇಶ, ಭವಾನಿ, ಸಂದೀಪ್, ಸಂದೇಶ್, ಪವಿತ್ರ, ಲೋಲಾಕ್ಷ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಎ.5ರೊಳಗೆ ಪರಿಹಾರದ ಭರವಸೆ
ಕುಡಿಯುವ ನೀರಿಲ್ಲದೆ ಬಹಳಷ್ಟು ತೊಂದರೆಯಾಗಿದ್ದು ತಕ್ಷಣವೇ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ ಕಾಲನಿ ನಿವಾಸಿಗಳು ಈ ಬಗ್ಗೆ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಕಾರ್ಯದರ್ಶಿ ಜಯಂತಿಯವರು ತಕ್ಷಣದಿಂದಲೇ ಕಾಲನಿಯ ಮನೆಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವುದು ಎ.5 ರೊಳಗೆ ನೀರಿಗೆ ಶಾಶ್ವತ ಪರಿಹಾರ ಮಾಡುವುದು ತಪ್ಪಿದ್ದಲ್ಲಿ ಮತ್ತೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು ಕಾಲನಿ ನಿವಾಸಿಗಳ ಸಮಸ್ಯೆಯನ್ನು ಆಲಿಸಿ, ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡುವ ಬಗ್ಗೆ ಭರವಸೆ ನೀಡಿದರು. ಟ್ಯಾಂಕರ್‌ನ ಚಾಲಕರಿಗೆ ಫೋನ್ ಮಾಡಿ ನೀರು ಸರಬರಾಜು ಮಾಡುವ ಬಗ್ಗೆ ಮಾತನಾಡಿದರು. ಸದಸ್ಯ ವಿನೋದ್ ಶೆಟ್ಟಿ ಮುಡಾಲರವರು ಕೂಡ ಕಾಲನಿ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಮಾಡುವ ಬಗ್ಗೆ ಭರವಸೆ ನೀಡಿದರು.

‘ ಬಿಜಲ ಪರಿಸರದಲ್ಲಿರುವ ಕೊಳವೆ ಬಾವಿಯಲ್ಲಿ ನೀರು ಬತ್ತಿದ ಕಾರಣ ಸಮಸ್ಯೆ ತಲೆದೋರಿದೆ. ಈ ಭಾಗದಲ್ಲಿ ಈ ಹಿಂದೆ ಕೊರೆದ ಕೊಳವೆ ಬಾವಿ ಕೊರೆದರೂ ನೀರು ಸಿಕ್ಕಿಲ್ಲ. ಆದ್ದರಿಂದ ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ. ಕುಡಿಯುವ ನೀರು ಕೊಡಲೇ ಬೇಕು, ಕೂಡಲೇ ಹೊಸ ಕೊಳವೆ ಬಾವಿ ಕೊರೆದು ಕುಡಿಯುವ ನೀರು ಕೊಡುವ ವ್ಯವಸ್ಥೆಯನ್ನು ಮಾಡುತ್ತೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

‘ ಕಾಲನಿಯ ಜನರಿಗೆ ತಕ್ಷಣದಿಂದಲೇ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ. ಈ ಬಗ್ಗೆ ಟ್ಯಾಂಕರ್ ಚಾಲಕರಲ್ಲಿ ಮಾತನಾಡಿದ್ದೇನೆ. ಅವರ ಬೇಡಿಕೆಯಂತೆ ಎ.5 ರೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಅಷ್ಟರ ತನಕ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುತ್ತೇವೆ.’
ಅಶ್ರಫ್ ಉಜಿರೋಡಿ, ಉಪಾಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here