ಮಾಯಿದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ಚಿತ್ತಾ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0

ಪುತ್ತೂರು:ಮಾಯಿದೇ ದೇವುಸ್ ಅನುದಾನಿತ ಹಿ.ಪ್ರಾ ಶಾಲೆ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಹಿ.ಪ್ರಾ ಶಾಲೆ, ಮೇಘ ಕಲಾ ಆರ್ಟ್ಸ್&ಡ್ಯಾನ್ಸ್, ಮುರಳಿ ಬ್ರದರ‍್ಸ್ ಡ್ಯಾನ್ಸ್ ಕ್ರೂ ಇವುಗಳ ಜಂಟಿ ಆಶ್ರಯದಲ್ಲಿ ಮಾಯಿದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಲಿರುವ ಚಿತ್ತಾ ಮಕ್ಕಳ ಬೇಸಿಗೆ ಶಿಬಿರವು ಎ.2ರಂದು ಉದ್ಘಾಟನೆಗೊಂಡಿತು.


ಬೇಸಿಗೆ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಸುಪ್ತವಾಗಿರುವ ಪ್ರತಿಭೆಗಳ ಬೆಳವಣಿಗೆಗೆ ಸೂಕ್ತ ವೇದಿಕೆಯಾಗಿದೆ. ಪೋಷಕರಿಗೆ ಮಕ್ಕಳ ಮೇಲೆ ಆಸೆ, ಭರವಸೆಗಳಿದ್ದು ಅದಕ್ಕೆ ಪೂರಕವಾದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ವಿವಿಧ ಪ್ರತಿಭೆಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಬಿರ, ತರಬೇತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ವಚ್ಚಂದ ಮನಸ್ಸು, ಉತ್ತಮ ಚಿಂತನೆ, ಹೃದಯ ವೈಶಾಲ್ಯತೆಗಳನ್ನು ನಿಮ್ಮದಾಗಬೇಕು. ವಿನಯಶೀಲತೆ, ಮೌಲ್ಯ, ಸಂಸ್ಕಾರ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಮಾತನಾಡಿ, ಮಕ್ಕಳಿಗಾಗಿ ರೂಪುಗೊಳ್ಳುವ ಬೇಸಿಗೆ ಶಿಬಿರಗಳು ಶಿಕ್ಷಣ-ಅಂಕಗಳು- ಗ್ರೇಡ್ ಪದ್ಧತಿಯಿಂದ ಹೊರತಾಗಿರುವುದರಿಂದ, ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ವರ್ಷವಿಡೀ ಪರೀಕ್ಷೆಗಳ ಜಂಜಾಟದಿಂದ ನೊಂದ ಮನಸ್ಸಿಗೆ ಶಿಬಿರಗಳು ಸಹಾಯವಾಗಲಿದ್ದು ಶಿಬಿರಗಳಲ್ಲಿ ಭಾಗವಹಿಸುವುದರಿಂದ, ದೈಹಿಕ ಕ್ಷಮತೆ, ಅರೋಗ್ಯ ವೃದ್ಧಿಸುತ್ತದೆ. ಇಲ್ಲಿ ಕಲಿಸಲಾಗುವ ಹೊಸ ಬಗೆಯ ಅಟಗಳು, ಕಲೆ, ಪೇಂಟಿಗ್, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಸುಪ್ತವಾಗಿರುವ ಕ್ರಿಯಾಶೀಲತೆಯನ್ನು ಅರಿತುಕೊಳ್ಳಲು, ಅವರಲ್ಲಿರುವ ಸಭಾ ಕಂಪನವನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.


ಉಪ್ಪಿನಂಗಡಿ ರಾಮನಗರ ಜನಾರ್ಪಣ ಸೇವಾ ಸಂಸ್ಥೆಯ ಸಂಸ್ಥಾಪಕ ಜಯರಾಜ್ ಅಮೀನ್ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಅದಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ರಜೆಯ ಸಮಯದಲ್ಲಿ ಶಿಬಿರಗಳಲ್ಲಿ ತೊಡಗಿಸಿಕೊಳ್ಳವುದರಿಂದ ಮಕ್ಕಳ ಮನಸ್ಸಿನಲ್ಲಿ ಮೂಡುವ ಕೆಟ್ಟ ವಿಚಾರ ತೊಲಗಿಸಲು ಸಹಕಾರಿಯಾಗಲಿದೆ ಎಂದರು.


ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರು, ಪುತ್ತೂರು ಎಂ.ವಿ ಗ್ರೂಪ್ ಆಫ್ ಸೋಸಿಯಲ್ ಸರ್ವೀಸಸ್‌ನ ಮುಖ್ಯಸ್ಥ ಪಿ.ವಿ ಸುಬ್ರಮಣಿ ಮಾತನಾಡಿ, ಇಂದು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆದರೆ ಮಾತ್ರ ಮುಂದುವರಿಯಲು ಸಾಧ್ಯ. ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು.


ಮೇಘಾ ಕಲಾ ಆರ್ಟ್ಸ್‌ನ ಮುಖ್ಯಸ್ಥೆ ಶಾರದ ದಾಮೋದರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಬೇಸಿಗೆ ಶಿಬಿರದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ತಿಳಿಸಲಾಗುವುದು. ಈ ಶಿಬಿರದಲ್ಲಿ ಪ್ರಮುಖವಾಗಿ ಮಕ್ಕಳಲ್ಲಿರುವ ವೇದಿಕೆಯ ಮೇಲೆರುವ ಭಯವನ್ನು ಹೋಗಲಾಡಿಸಲು ಪೂರಕವಾದ ತರಬೇತಿ ನೀಡಲಾಗುವುದು ಯಕ್ಷಗಾನ, ಯೋಗ ಮೊದಲಾದ ಆರ್ಟ್ ಮತ್ತು ಕ್ರಾಫ್ಟ್ ತರಬೇತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುವುದು. ಶಿಬಿರವು ಪ್ರತಿದಿನ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯ ತನಕ ನಡೆಯಲಿದೆ ಎಂದರು.


ಮಾಯಿದೇ ದೇವುಸ್ ಅನುದಾನಿತ ಶಾಲಾ ಮುಖ್ಯಗುರು ಜಾನೆಟ್ ಡಿ’ಸೋಜ, ಸಂತ ವಿಕ್ಟರಣ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಹ್ಯಾರಿ ಡಿ’ಸೋಜ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ವಿಕ್ಟರಣ ಬಾಲಿಕ ಪ್ರೌಢ ಶಾಲಾ ಶಿಕ್ಣಕಿ ಕುಮುದಾಕ್ಷಿ ಸ್ವಾಗತಿಸಿದರು. ಮುರಳಿ ಬ್ರದರ್ಸ್ ಡ್ಯಾನ್ಸ್ ಕ್ರೂ ನ ಕಿರಣ್ ಮುರಳಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಹರ್ಷಿತ್ ಸ್ಮರಣಿಕೆ ನೀಡಿ ಗೌರವಿಸಿದರು.ಮಾಯಿದೆ ದೇವುಸ್ ಶಾಲಾ ಸಹ ಶಿಕ್ಷಕರಾದ ಫ್ಲಾವಿಯ ಅಲ್ಬುಕರ್ಕ್ ವಂದಿಸಿ, ಸುಬ್ಬರಾಜ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here