ಪುತ್ತೂರು: ರೋಟರಿ ಜಿಲ್ಲೆ 3181 ರ ರೋಟರಿ ಪಬ್ಲಿಕ್ ಇಮೇಜ್ ಮತ್ತು ರಸ್ತೆ ಸುರಕ್ಷತೆ ವಿಭಾಗದಿಂದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ವಾಹನ ರ್‍ಯಾಲಿ ಮಾ. 31ಮತ್ತು ಏ. 1 ರಂದು ನಡೆಯಿತು.
ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ ,ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 21 ಕಡೆಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಅಲ್ಲಲ್ಲಿ ಪ್ರದರ್ಶಿಸಲಾಯಿತು. ಜೊತೆಗೆ 997 ಕಿ.ಮೀ. ರಸ್ತೆ ಸಂಚಾರ ಮಾಡಿ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ಅನುಮತಿ ಪಡೆದ ರೋಟರಿ ಆನ್ ವೀಲ್ಸ್ ವಾಹನ ರ್‍ಯಾಲಿಗೆ ವಿವೇಕಾನಂದ ಇಂಜೀನಿಯರಿಂಗ್ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ಬಳಿಕ ಅಲ್ಲಿ ನಡೆದ ಮೊದಲ ಬೀದಿ ನಾಟಕ ಅತ್ಯುತ್ತಮವಾಗಿ ಮೂಡಿ ಬಂತು. ನಂತರ ಪುತ್ತೂರು, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಉಜಿರೆ, ಮೂಡುಬಿದ್ರೆ, ಕಿನ್ನಿಗೋಳಿ, ಸರತ್ಕಲ್, ಮಂಗಳೂರು, ಬಂಟ್ವಾಳ ಹಾಗೂ ಉಪ್ಪಿನಂಗಡಿಯಲ್ಲಿ ಮೊದಲ ದಿನದ ಪ್ರದರ್ಶನ ನಡೆದರೆ ಎರಡನೇ ದಿನ ಮಡಿಕೇರಿ, ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಮೈಸೂರು, ಚಾಮರಾಜನಗರ, ಯಳಂದೂರು ಹೀಗೆ ಹಲವುಕಡೆ ಪ್ರದರ್ಶನ ನಡೆಸಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ಮಾತ್ರವಲ್ಲದೆ ಅಧಿಕಾರಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಚಾಮರಾಜ ನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್,ಕೊಡಗು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ವರ್ಣಿತ್ ನೇಗಿ ಸೇರಿದಂತೆ ವಿವಿಧ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಬೀದಿ ನಾಟಕದಲ್ಲಿ ಭಾಗವಹಿಸಿ ಮತದಾನದ ಜಾಗೃತಿಯ ಬಗ್ಗೆ ರೋಟರಿಯ ಕಾಳಜಿಯನ್ನು ಪ್ರಶಂಸಿಸಿದರು.
ಮತದಾನ ಜಾಗೃತಿ ಮತ್ತು ರಸ್ತೆ ಸುರಕ್ಷತಾ ಜಾಗೃತಿಯ ಕರಪತ್ರವನ್ನು ಅಲ್ಲಲ್ಲಿ ವಿತರಿಸಲಾಯಿತು.ಮತ್ತು ಸಾರ್ವಜನಿಕರಿಗೆ ಅಯಾ ಜಿಲ್ಲೆಗಳ ರೋಟರಿ ಕ್ಲಬ್ ಗಳ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಲಾಯಿತು.ರಂಗಕರ್ಮಿ ಮೌನೇಶ್ ವಿಶ್ವಕರ್ಮ ಅವರ ತಂಡ ನಿರಂತರವಾಗಿ ಎರಡುದಿನ ಬೀದಿ ನಾಟಕದ ಪ್ರದರ್ಶನ ನೀಡಿ ಮತದಾರರನ್ನು ಎಚ್ಚರಿಸಿದ್ದು ಎಲ್ಲರ ಗಮನ ಸೆಳೆಯಿತು.
ರೋಟರಿ ಜಿಲ್ಲಾ ಗವರ್ನರ್ ಎಚ್. ಎಲ್. ಕೇಶವ್, ಪೂರ್ವ ಗವರ್ನರ್‌ಗಳಾದ ಪ್ರಕಾಶ್ ಕಾರಂತ್, ರಂಗನಾಥ್ ಭಟ್, ನಾಗಾರ್ಜುನ್, ಸುರೇಶ್ ಚಂಗಪ್ಪ, ಗುರು ಮತ್ತು ಜಿಲ್ಲಾ ತರಬೇತುದಾರ ಶೇಖರ್ ಶೆಟ್ಟಿ ವಿವಿಧ ರೋಟರಿ ಕ್ಲಬ್‌ಗಳ ಅಸಿಸ್ಟೆಂಟ್ ಗವರ್ನರ್‌ಗಳು, ಸದಸ್ಯರುಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಚೈರ್‌ಮ್ಯಾನ್ ಕೆ. ವಿಶ್ವಾಸ್ ಶೆಣೈ ನೇತೃತ್ವದಲ್ಲಿ ನಡೆದ ಈ ರ್‍ಯಾಲಿಗೆ ಜಿಲ್ಲಾ ರಸ್ತೆ ಸುರಕ್ಷತಾ ಚೈರ್‌ಮ್ಯಾನ್ ಹರ್ಷ ಕುಮಾರ್ ರೈ ಮಾಡಾವು ಅವರು ಸಹಕಾರ ನೀಡಿ ರೋಟರಿ ಜಿಲ್ಲೆಯಲ್ಲಿಯೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಒಂದು ವಿನೂತನ ಜನ ಜಾಗೃತಿ ಕಾರ್ಯಕ್ರಮಕ್ಕೆ ಮುನ್ನುಡಿಯಾಯಿತು.
ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಅರ್ಥಪೂರ್ಣ ಕ್ರಿಯಾಶೀಲ ಕಾರ್‍ಯಕ್ರಮ ರೋಟರಿ ಸಂಸ್ಥೆಯ ಮೂಲಕ ನಡೆಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ
ರೋಟರಿ ಆನ್ ವೀಲ್ಸ್ ವಾಹನ ರ್‍ಯಾಲಿ ಅತ್ಯಂತ ಯಶಸ್ವಿಯಾಗಿ ರೋಟರಿಯ ಘನತೆ ಇನ್ನಷ್ಟು ಹೆಚ್ಚಿದೆ