ಬಿಳಿನೆಲೆ ಗ್ರಾಮದ ಚೇರು ಪ್ರದೇಶಕ್ಕೆ ಶಂಕಿತ ನಕ್ಸಲರು ಭೇಟಿ

0

ಕಡಬ: ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಮನೆಯೊಂದಕ್ಕೆ ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ಘಟನೆ ಬಿಳಿನೆಲೆ ಗ್ರಾಮದ ಚೇರು ಭಾಗದಲ್ಲಿ ಬೆಳಕಿಗೆ ಬಂದಿದೆ.

ನಕ್ಸಲ್ ನಿಗ್ರಹ ಪೋಲಿಸರಿಂದ ತನಿಖೆ ಆರಂಭ
ಕಡಬ ತಾಲೂಕು ಬಿಳಿನೆಲೆ ಗ್ರಾಮದ ಚೇರು ಪ್ರದೇಶದ ಮನೆಯೊಂದಕ್ಕೆ ಶಂಕಿತರು ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುವಾರ ಸಂಜೆ ಏಳು ಗಂಟೆ ವೇಳೆ ತಂಡ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಬತ್ತು ಗಂಟೆ ವೇಳೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದು ಅವರಲ್ಲಿ ಶಸಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿದ್ದ ವೇಳೆ ಮನೆಯವರ ಜತೆ ಮಾತನಾಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್‌ ನಿಗ್ರಹ ಪಡೆ, ಪೊಲೀಸರು ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಎಎನ್‌ಎಫ್‌ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ನಕ್ಸಲ್ ಎನ್ ಕೌಂಟರ್ ನಡೆದಿತ್ತು
2012ರಲ್ಲಿ ನಕ್ಸಲರು ಭೇಟಿ ನೀಡಿದ್ದ ಪರಿಸರದಲ್ಲಿ ಶೂಟೌಟ್‌ ನಡೆದ ಸಮೀಪದ ಪ್ರದೇಶವೇ ಈ ಬಿಳಿನೆಲೆ ಗ್ರಾಮದ ಚೇರು. 2012ರಲ್ಲಿ ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್‌, ನಡುತೋಟ, ಪಳ್ಳಿಗದ್ದೆ ಭಾಗಕ್ಕೆ ನಕ್ಸಲರು ಭೇಟಿ ನೀಡಿದ್ದರು. ಬಳಿಕ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಮತ್ತು ಎಎನ್‌ಎಫ್‌ ತಂಡದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಕೆಲವೇ ದಿನಗಳ ಅಂತರದಲ್ಲೇ ಬಿಸಿಲೆ ಸಮೀಪದ ಭಾಗಿಮಲೆ ಕಾಡಿನಲ್ಲಿ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ತಂಡದ ಓರ್ವ ಸದಸ್ಯ ಸಾವನ್ನಪ್ಪಿದ್ದ. ಇದೀಗ ಇದೇ ಪರಿಸರದಲ್ಲಿ ಮತ್ತೂಮ್ಮೆ ಶಂಕಿತರು ಭೇಟಿ ನೀಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಶಂಕಿತ ನಕ್ಸಲರು ಮಾ.16ರಂದು ದ.ಕ. ಕೊಡಗು ಗಡಿ ಭಾಗದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್‌ ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರೀದಿಸಿ ತೆರಳಿದ್ದರು. ಮಾ. 23ರಂದು ಶಂಕಿತರು ಕಡಬ ತಾಲೂಕಿನ ಐನೆಕಿದು ಗ್ರಾಮದ ಅರಣ್ಯದ ಅಂಚಿನ ಮನೆಗೆ ಭೇಟಿ ನೀಡಿ ಊಟ, ಸಾಮಗ್ರಿಗಳನ್ನು ಪಡೆದು ತೆರಳಿದ್ದರು.

LEAVE A REPLY

Please enter your comment!
Please enter your name here