ಉಪ್ಪಿನಂಗಡಿ: ವಲಯ ಅರಣ್ಯ ವ್ಯಾಪ್ತಿಗೆ ಬರುವ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕಾಡಿನಂಚಿನಲ್ಲಿ ಶುಕ್ರವಾರ ತಡರಾತ್ರಿ ಮತ್ತೆ ಕಾಣಿಸಿಕೊಂಡ ಕಾಡಾನೆಯೊಂದು ಕೃಷಿ ಹಾನಿಗೊಳಿಸಿದ್ದು, ಪರಿಸರದ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಬಂದಾರು ಗ್ರಾಮದ ನೆಲ್ಲಿಗೆರೆಯ ಮೋನಪ್ಪ ಗೌಡರ ಗದ್ದೆಯಲ್ಲಿದ್ದ ಭತ್ತದ ಪೈರನ್ನು ನಾಶ ಮಾಡಿದ ಆನೆಯು ಕುಂಟಾಲಪಲ್ಕೆ ಎಂಬಲ್ಲಿನ ದೇವಣ್ಣ ಎಂಬವರ ತೋಟದಲ್ಲೂ ಹಾನಿ ಮಾಡಿದೆ. ಅಲ್ಲದೇ, ಜೋರಾಗಿ ಘೀಳಿಡುವ ಮೂಲಕ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಕಳೆದ 15 ದಿನಗಳ ಹಿಂದೆ ಬೆದ್ರೋಡಿ ಬಳಿ ನೇತ್ರಾವತಿ ನದಿಯಲ್ಲಿ ನೀರು ಚಿಮುಕಿಸಿಕೊಳ್ಳುತ್ತಿದ್ದ ಕಾಡಾನೆಯನ್ನು ಅರಣ್ಯಾಧಿಕಾರಿಗಳ ತಂಡ ಕಾಡಿನತ್ತ ಓಡಿಸಿತ್ತು. ಕಳೆದ ಮಾರ್ಚ್ 23ರಂದು ಮತ್ತು ಮಾ.25ರಂದು ಬಂದಾರು ಪರಿಸರದಲ್ಲಿ ಈ ಕಾಡಾನೆಯೊಂದು ಕಾಣಿಸಿಕೊಂಡು, ಕೃಷಿ ನಾಶಗೈದಿತ್ತು. ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿಗಳ ತಂಡ ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಓಡಿಸಿತ್ತು. ಆದರೆ ಇದೀಗ ಅದು ಬಂದಾರು ಪರಿಸರಕ್ಕೆ ವಾಪಸಾಗಿದೆ.
ಮೂರು ಆನೆಗಳ ಹಿಂಡು ಜೊತೆಯಾಗಿತ್ತು. ಆದರೆ ಅದರಲ್ಲಿ ಒಂದು ಆನೆ ಬೇರ್ಪಟ್ಟಿದ್ದು, ಅದು ಈ ಭಾಗದಲ್ಲಿ ಓಡಾಡುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.