ಪಾಂಡಿ ಪರಿವಾರ ಬಂಟ ಕುಟುಂಬಸ್ಥರ ದೈವಗಳ ಧರ್ಮನೇಮೋತ್ಸವ ಸಂಪನ್ನ

0

ಪುತ್ತೂರು: ಪ್ರತಿಷ್ಠಿತ ಪರಿವಾರ ಬಂಟ ಮನೆತನದ ತರವಾಡು ಮನೆಯಾದ ಕಾಸರಗೋಡು ಜಿಲ್ಲೆಯ ಅಡೂರು ಪಾಂಡಿಯಲ್ಲಿ ದೈವಗಳ ಧರ್ಮನೇಮೋತ್ಸವವು ಏ. 4ರಂದು ಸಂಪನ್ನಗೊಂಡಿತು.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ರವೀಶ ತಂತ್ರಿವರ್ಯರ ಶುಭಾಶೀರ್ವಾದಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಏ.2ರಂದು ಬೆಳಿಗ್ಗೆ ಗಣಹೋಮ ನಡೆದು ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆ, ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಸುಧಾಕರ ಕೋಟೆಕುಂಜತ್ತಾಯರಿಂದ ಸೀತಾಕಲ್ಯಾಣ ಸತ್ಸಂಗ ಜರಗಿತು. ಅಪರಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಆಶೀರ್ವಚನ ನಡೆಯಿತು. ಸಂಜೆ ಅತ್ತನಾಡಿ, ಚೀನಾಪ್ಪಾಡಿ ಮತ್ತು ಬಯಲು ಮೂಡುಮನೆಯಿಂದ ದೈವಗಳ ಭಂಡಾರ ಆಗಮನ ನಡೆಯಿತು. ರಾತ್ರಿ ತೊಡಂಞಳ್‌, ಅನ್ನದಾನ ನಡೆಯಿತು. ಬಳಿಕ ಪುತ್ತೂರು ಜಗದೀಶ್‌ ಆಚಾರ್ಯ ತಂಡದವರಿಂದ ʻಭಕ್ತಿಗಾನ ರಸಮಂಜರಿʼ, ಪಾಂಡಿ ನಂದನಂ ಬಾಲಗೋಕುಲ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ರಾತ್ರಿ ಪೊಟ್ಟನ್‌ ದೈವದ ಕೋಲ ಜರಗಿತು.

ಏ.3ರಂದು ಬೆಳಿಗ್ಗೆ ರಕ್ತೇಶ್ವರಿ, ವಿಷ್ಣುಮೂರ್ತಿ, ಚಾಮುಂಡಿ ಮತ್ತು ಗುಳಿಗ ದೈವಗಳ ಕೋಲ ಜರಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಂಡಾರ ನಿರ್ಗಮನವಾಗಿ ಧರ್ಮದೈವ ಪಿಲವಡ್ಕತ್ತಾಯ ದೈವದ ಭಂಡಾರ ತೆಗೆಯಲಾಯಿತು. ಇದೇ ವೇಳೆ ನಂದನಂ ಬಾಲಗೋಕುಲ ತಂಡದವರಿಂದ ಕುಣಿತ ಭಜನೆ ನಡೆಯಿತು. ರಾತ್ರಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಶಿವಗುಳಿಗ ಶಿವ ತುಳು ಯಕ್ಷಗಾನ ಪ್ರದರ್ಶನಗೊಂಡಿತು.


ಏ.4ರಂದು ಬೆಳಿಗ್ಗೆ ಧರ್ಮದೈವ ಶ್ರೀ ಪಿಲವಡ್ಕತ್ತಾಯ, ಬಂಟ ದೈವದ ನೇಮೋತ್ಸವ ಜರಗಿತು. ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.


ಐದು ವರ್ಷಗಳಿಗೊಮ್ಮೆ ನಡೆಯುವ ನೇಮೋತ್ಸವದ ವೇಳೆ ಕುಟುಂಬಸ್ಥರಲ್ಲಿ ಸಂಭ್ರಮ ಮನೆಮಾಡಿತ್ತು. ಅಲಂಕಾರ, ಊಟೋಪಚಾರ ವ್ಯವಸ್ಥೆಯಲ್ಲಿ ಅಚ್ಚುಕಟ್ಟಿನ ಜೋಡಣೆ ಮಾಡಲಾಗಿತ್ತು. ವಿಶೇಷವಾಗಿ ಸಿಡಿಮದ್ದು ಪ್ರದರ್ಶನ ಸಂಭ್ರಮಕ್ಕೆ ಮೆರುಗು ನೀಡಿತ್ತು. ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಪಾಂಡಿ ಕುಟುಂಬಸ್ಥರು, ಬಂಧುಗಳು, ಊರ ಪರವೂರ ಭಕ್ತಾಭಿಮಾನಿಗಳು ಸೇರಿದಂತೆ ಸುಮಾರು 15 ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ವಿತರಿಸಲಾಯಿತು.

ಉತ್ಸವ ಸಮಿತಿಯ ಅಧ್ಯಕ್ಷ ಯಶವಂತ ನಾಐಕ್‌ ಬೆಳ್ಳರ್‌ಕಜೆ, ಆಡಳಿತ ಸಮಿತಿ ಅಧ್ಯಕ್ಷ ಅಶೋಕ್‌ ನಾಐಕ್‌ ತಲೆಮನೆ,‌ ಸ್ವಾಗತ ಸಮಿತಿ ಗೌರವಾಧ್ಯಕ್ಷ ಗಣೇಶ್‌ ನಾಐಕ್‌ ಅಡೂರು,  ಉತ್ಸವ ಸಮಿತಿ ಉಪಾಧ್ಯಕ್ಷ ರತನ್‌ ಕುಮಾರ್‌ ಪಾಲೆಕೊಚ್ಚಿ,  ಕಾರ್ಯದರ್ಶಿ ಸುನಿಲ್‌ ಕುಮಾರ್‌, ಖಜಾಂಜಿ ಪದ್ಮನಾಭ ನಾಐಕ್‌ ಚಲಂತ್ಕಲ್, ಸುರೇಶ್‌ ನಾಐಕ್‌ ಕೂಡ್ಲು, ಚಂದ್ರಶೇಖರ ಕೆಳಗಿನಜಾಲು, ಪ್ರದೀಪ್‌ ಬೆಳ್ಳೂರು, ಅಶೋಕ್‌ ನಾಐಕ್‌ ಕೋರುವೈಲ್‌ ಸೇರಿದಂತೆ ಸಮಿತಿಗಳ ಪದಾಧಿಕಾರಿಗಳು, ಕುಟುಂಬಸ್ಥರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಸತ್ಕರಿಸಿದರು. 

ನೇರ ಪ್ರಸಾರ
ಮೂರು ದಿನಗಳ ಕಾರ್ಯಕ್ರಮಗಳು ʻಸುದ್ದಿ ಲೈವ್‌ʼ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.

LEAVE A REPLY

Please enter your comment!
Please enter your name here