8 ತಿಂಗಳಲ್ಲಿ ಪ್ರತೀ ಕುಟುಂಬಕ್ಕೆ 30 ಸಾವಿರ ಬಂದಿದೆ: ಹೇಮನಾಥ ಶೆಟ್ಟಿ
ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಕುಟುಂಬಕ್ಕೆ ತಲಾ 30 ಸಾವಿರ ಹಣ ವಿವಿಧ ರೂಪದಲ್ಲಿ ದೊರಕಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.ಅವರು ಕೆಯ್ಯೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಎಂದಿಗೂ ಜನತೆಗೆ ದ್ರೋಹ ಮಾಡಿಲ್ಲ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಎಂದಿಗೂ ಬಡವರ ಹಾಗೂ ನೊಂದವರ ಪರವಾಗಿಯೇ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಗ್ಯಾರಂಟಿ ಫಲಾನುಭವಿಗಳು ಕಾಂಗ್ರೆಸ್ ಗೆ ವೋಟು ಹಾಕುತ್ತಾರೆ ಎಂಬ ಪೂರ್ಣ ನಂಬಿಕೆ ನಮ್ಮಲ್ಲಿದೆ ಎಂದು ಅವರು ಹೇಳಿದರು.
ಬಿಜೆಪಿಯವರು ಹೇಳುವುದೆಲ್ಲವೂ ಸುಳ್ಳು: ಅಶೋಕ್ ರೈ
ಪ್ರತೀ ಭಾರಿ ಚುನಾವಣೆ ಬಂದಾಗ ಹಿಂದುತ್ವದ ಮಂತ್ರ ಜಪಿಸುವ ಬಿಜೆಪಿ ಚುನಾವಣೆ ಬಳಿಕ ತನ್ನ ದಾರಿ ತನ್ನದೆಂದು ಸಾಗುತ್ತದೆ, ಬಿಜೆಪಿಯವರ ಹಿಂದುತ್ವ ನಕಲಿ ಹಿಂದುತ್ವವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಯಾವುದೇ ಅಭಿವೃದ್ದಿ ಅಜೆಂಡಾ ಇಲ್ಲದ ಬಿಜೆಪಿಗರು ಮೋದಿಗಾಗಿ ವೋಟು ಕೊಡಿ ಎಂದು ಹೇಳುತ್ತಾರೆ . ಮೋದಿಗಾಗಿ ವೋಟು ಕೊಟ್ಟು ಈ ಹಿಂದೆ ಗೆದ್ದವರು ಇಲ್ಲಿ ಏನು ಮಾಡಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಬಡವರು ನೆಮ್ಮದಿಯಾಗಿ ಬದುಕಬೇಕಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು ಇಲ್ಲವಾದರೆ ಬಹಳ ಕಷ್ಟವಿದೆ ಎಂದು ಶಾಸಕರು ಹೇಳಿದರು. ನಮ್ಮ ಒಂದು ವೋಟು ನಮ್ಮ ಬದುಕನ್ನೇ ಬದಲಿಸಬಹುದು.ಬಡವರ ಪರ ಮತ್ತು ಅಭಿವೃದ್ದಿ ಪರ ಇರುವ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕೆಯ್ಯೂರು ವಲಯಾಧ್ಯಕ್ಷ ಎ ಕೆ ಜಯರಾಮ ರೈ, ಉಸ್ತುವಾರಿಗಳಾದ ಕೃಷ್ಣಪ್ರಸಾದ್ ಅಳ್ವ, ಮಹೇಶ್ ರೈ ಅಂಕೊತ್ತಿಮಾರ್, ಮುರಳೀಧರ್ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.