ಉಪ್ಪಿನಂಗಡಿ: ಇಲ್ಲಿನ ವೇದಶಂಕರನಗರದಲ್ಲಿರುವ ಶ್ರೀ ರಾಮ ಶಾಲೆಯ ಸಿರಿಪಿಂಗಾರ ಸಾಹಿತ್ಯ ಸಂಘದ ವಾರ್ಷಿಕ ಸಮಾರಂಭ ಎ.8ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ ನಾಯಕ್ ಪುತ್ತೂರು ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿ ಅವರಿಂದ ಸಾಹಿತ್ಯ ಚಟುವಟಿಕೆಯನ್ನು ನಡೆಸುವಂತೆ ಪ್ರೇರಣೆ ನೀಡುತ್ತಿರುವ ಶಾಲೆಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹೆಚ್ಚು ಸಂಭ್ರಮಿಸುವ ತಮ್ಮ ತಮ್ಮ ಪ್ರವಾಸಿ ಕಥನವನ್ನು ಬರೆಯುವುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕ ಯು.ಜಿ.ರಾಧ ಮಾತನಾಡಿ, ಶಿಕ್ಷಕರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲೆಯ ಬೋಧಕೇತರ ಸಿಬ್ಬಂದಿ ಗಿರಿಜಕ್ಕ ರವರು ಸ್ವಚ್ಛ ಭಾರತದ ಬಗ್ಗೆ ಮಾತನಾಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಶ್ರೀ ರಾಮ ಶಾಲೆಯು ಪ್ರತಿಭಾ ಪ್ರಕಾಶಕ್ಕೆ ಮುಕ್ತ ಅವಕಾಶ ಕಲ್ಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಸದಸ್ಯರಾದ ಜಯಂತ ಪೊರೋಳಿ, ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್ ಪಿ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ರಘುರಾಮ ಭಟ್ ಸಿ. ಇವರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿವಾನಿ ವಂದಿಸಿದರು. ವಿದ್ಯಾರ್ಥಿಗಳಾದ ಭವಿಷ್ಯ, ಪ್ರಣವ ನರಸಿಂಹ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.