ಸಂಜೀವಿನಿ ಒಕ್ಕೂಟದವರಿಗೆ ಕಚೇರಿ ಕೀ ನೀಡದೆ ನಿರ್ಭಂಧ -ಕಚೇರಿ ಹೊರಾಂಗಣದಲ್ಲಿ ಕಡತ ನಿರ್ವಹಣೆ ಮಾಡಿದ ಸದಸ್ಯರು – ಕರ್ತವ್ಯಕ್ಕೆ ಅಡಚಣೆ : ಪಿಡಿಒ ವಿರುದ್ದ ಒಕ್ಕೂಟ ಸದಸ್ಯರಿಂದ ಗಂಭೀರ ಆರೋಪ

0

ಪುತ್ತೂರು: ಕಸ ವಿಲೇವಾರಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸಂಜೀವಿನಿ ಒಕ್ಕೂಟದ ಸದಸ್ಯೆಯರು ಕೆಲಸ ನಿರ್ವಹಿಸುತ್ತಿದ್ದ ಕಚೇರಿಯ ಬೀಗದ ಕೀ ನೀಡದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಿ ಸಂಜೀವಿನ ಒಕ್ಕೂಟದ ಸದಸ್ಯೆಯರು ಕಚೇರಿ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಕಬಕ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಎ.11ರಂದು ನಡೆದಿದೆ.

ಕಬಕ ಗ್ರಾಮ ಪಂಚಾಯತ್ ಅಧೀನದಲ್ಲಿರುವ ಸಂಜೀವಿನ ಒಕ್ಕೂಟವು ಸುಮಾರು ಐದು ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಎರಡು ವರುಷಗಳಿಗೊಮ್ಮೆ ಆಡಳಿತ ಮಂಡಳಿಯ ಬದಲಾವಣೆ ನಡೆಯುತ್ತಿತ್ತು. ಆರಂಭದಲ್ಲಿ ಗ್ರಾಮ ಪಂಚಾಯತ್ ಕಚೇರಿಯ ಪಕ್ಕದಲ್ಲಿದ್ದ ಕಟ್ಟಡದಲ್ಲಿ ಒಕ್ಕೂಟದ ಕಚೇರಿ ಆರಂಭಿಸಲಾಗಿತ್ತು. ಆ ಬಳಿಕ ಆ ಕಟ್ಟಡವನ್ನು ನೆಲಸಮ ಗೊಳಿಸಿದ ಬಳಿಕ ಗ್ರಾಮ ಪಂಚಾಯತ್ ಕಚೇರಿ ಒಳಗಡೆಯೇ ಅವರ ಕಚೇರಿಯನ್ನು ತೆರೆಯಲಾಗಿತ್ತು. ಆ ಬಳಿಕದ ದಿನಗಳಲ್ಲಿ ಪಕ್ಕದಲ್ಲಿರುವ ಗ್ರಾಮ ಪಂಚಾಯತ್ ನ ಸಭಾಭವನಕ್ಕೆ ಅವರ ಕಚೇರಿಯನ್ನು ವರ್ಗಾಯಿಸಿ ಅಲ್ಲಿ ಸಭೆ ನಡೆಸಲು ಹಾಗೂ ಕಚೇರಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರತೀ ದಿನ ಕೆಲಸ ಮುಗಿದ ಬಳಿಕ ಸದಸ್ಯೆಯರು ಕಚೇರಿ ಬೀಗದ ಕೀಯನ್ನು ಗ್ರಾಮ ಪಂಚಾಯತ್ ನಲ್ಲಿ ಕೊಟ್ಟು ಹೋಗುತ್ತಿದ್ದರು. ಆದರೆ ಎ.12ರಂದು ಬೆಳಗ್ಗೆ ಸಭೆ ನಡೆಸುವ ಸಲುವಾಗಿ ಹಾಗೂ ಕಚೇರಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಸದಸ್ಯೆಯರು ಆಗಮಿಸಿ ಕೀ ಕೇಳಿದಾಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕೀ ನೀಡಲು ನಿರಾಕರಿಸಿ, ನಿಮಗೆ ಬೇಕಾದಲ್ಲಿ ಲೆಟರ್ ನೀಡಿ ಆ ಬಳಿಕ ನೀಡುವುದಾಗಿ ಹೇಳಿ ತೆರಳಿರುವುದಾಗಿ ಸದಸ್ಯೆಯರು ಆರೋಪಿಸಿದ್ದಾರೆ.

ಕಚೇರಿ ಮುಂಭಾಗದಲ್ಲಿ ಸದಸ್ಯೆಯರಿಂದ ಧರಣಿ:
ಕೆಲಸ ಕಾರ್ಯಗಳ ನಿರ್ವಹಣೆಯ ಬಗ್ಗೆ ಸಭೆ ನಡೆಸುವ ನಿಟ್ಟಿನಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯೆಯರು ಕಚೇರಿ ಬಳಿ ಬಂದು, ಗ್ರಾ.ಪಂ. ಸಭಾ ಭವನದ ಬೀಗದ ಕೀಯನ್ನು ಕೇಳಿದಾಗ ಪಿಡಿಒರವರು ನೀಡದೆ ತೆರಳಿದ್ದರೆನ್ನಲಾಗಿದೆ‌. ಇದರಿಂದ ಆಕ್ರೋಶಗೊಂಡ ಸದಸ್ಯೆಯರು ಸಭಾಭವನದ ಮುಂಭಾಗದಲ್ಲಿ ಕೆಲಸ ನಿರ್ವಹಿಸುತ್ತಾ ಪ್ರತಿಭಟನೆ ನಡೆಸಿದರು.

ಕರೆ ಸ್ವೀಕರಿಸದ ಅಭಿವೃದ್ಧಿ ಅಧಿಕಾರಿ

ಘಟನೆ ಸಂಬಂಧಿಸಿದಂತೆ ಮಾಹಿತಿಗಾಗಿ ಅಭಿವೃದ್ಧಿ ಅಧಿಕಾರಿ ಆಶಾ ರವರನ್ನು ಸುದ್ದಿ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

LEAVE A REPLY

Please enter your comment!
Please enter your name here