ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು 787 ಮಂದಿ-340 ಅಂಗವಿಕಲರು ಮನೆಯಲ್ಲೇ ಮತ ಚಲಾಯಿಸಲಿದ್ದಾರೆ – ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ

0

ಎ.14 ರಿಂದ 16ರ ತನಕ ಮೂರು ದಿನದ ಮತದಾನ ಪ್ರಕ್ರಿಯೆ

ಪುತ್ತೂರು: ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನಕ್ಕೆ ಅರ್ಹ ವ್ಯಕ್ತಿಗಳಾದ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಯೆ ಎ.14 ರಿಂದ 16ರ ತನಕ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಈ ಹಿಂದೆ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅರ್ಜಿ ನಮೂನೆ ನೀಡಿದ್ದೆವು. ಈ ಅರ್ಜಿಯ ಮೂಲಕ ಅವರು ಮನೆಯಲ್ಲೇ ಅಥವಾ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ತಮ್ಮ ಅಭಿಪ್ರಾಯ ಮಂಡಿಸಿದಂತೆ ಮನೆಯಲ್ಲೇ ಮತದಾನ ಮಾಡುವ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತ ಚಲಾಯಿಸುವ ಮನವಿ ಮಾಡಿದ್ದಾರೆ. ಈ ಮತದಾನ ಪ್ರಕ್ರಿಯೆಯು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ನಡೆಯಲಿದೆ. ಅವರ ಕೆಳಗೆ ತಂಡವೊಂದು ರಚನೆ ಮಾಡಲಾಗಿದೆ. ಆ ತಂಡ ಎಲ್ಲಾ ಅರ್ಹ ಮತದಾರರಿಗೆ ಕರೆ ಮಾಡಿ ಮತದಾನ ಪ್ರಕ್ರಿಯೆಗೆ ಮನೆಗೆ ಬರುವ ದಿನಾಂಕವನ್ನು ತಿಳಿಸುತ್ತಾರೆ. ಈ ಕುರಿತು ರಾಜಕೀಯ ಪಕ್ಷಗಳಿಗೂ ಎಷ್ಟು ಮಂದಿ ಮತದಾನ ಮಾಡುತ್ತಾರೆ ಮತ್ತು ಅವರ ಮತಪಟ್ಟಿಗಳ ಕುರಿತು ಮಾಹಿತಿ ನೀಡಲಾಗಿದೆ. ಮನೆ ಮನೆ ಮತದಾನದಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿ ನೇಮಕವಾಗಿರುವ ಪಿ.ಆರ್.ಒ, ಕ್ಯಾಮರ ಮ್ಯಾನ್, ಪೊಲೀಸರು, ಮೈಕ್ರೋ ಅಬ್ಸರರ್ ಅವರು ಭಾಗವಹಿಸಲಿದ್ದಾರೆ. ಅವರಿಗೆ ಯಾವ ರೀತಿ ಮತದಾನ ಪ್ರಕ್ರಿಯೆ ನಡೆಸಬೇಕೆಂದು ವಿವೇಕಾನಂದ ಶಾಲೆಯಲ್ಲಿ ತರಬೇತಿ ನಡೆಯುತ್ತಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ ಎಂದು ಹೇಳಿದರು.


20 ಸೆಕ್ಟರ್, 20 ರೂಟ್ಸ್:
ಎ.14ರಂದು ಬೆಳಿಗ್ಗೆ ಸೆಕ್ಟರ್ ಅಧಿಕಾರಿಗಳು ವಿವಿಧ ನಿಗದಿ ಮಾಡಿದ ರೂಟ್‌ಗಳಲ್ಲಿ ತೆರಳಲಿದ್ದಾರೆ. ಯಾವ ಬೂತ್‌ಗೆ ಪ್ರಥಮ ಯಾವ ಬೂತ್‌ಗೆ ಕೊನೆಗೆ ಹೋಗಬೇಕೆಂದು ಪಟ್ಟಿ ಮಾಡಿದಂತೆ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಒಟ್ಟು 20 ಸೆಕ್ಟರ್ ಅಧಿಕಾರಿಗಳು, 20 ರೂಟ್ಸ್‌ಗಳಿಗೆ ತೆರಳಲಿದ್ದಾರೆ. ಒಳಮೊಗ್ರು, ಕುರಿಯ, ಅರಿಯಡ್ಕ ಭಾಗದಲ್ಲಿ 85 ವರ್ಷ ಮೇಲ್ಪಟ್ಟವರು 85 ಮಂದಿ ಇದ್ದಾರೆ. ರೂಟ್ ನಂಬರ್ 1 ರಲ್ಲಿ 85 ವರ್ಷ ಮೇಲ್ಪಟ್ಟ ಅತೀ ಕಡಿಮೆ 35 ಮಂದಿ ಮತದಾರರಿದ್ದಾರೆ. 100 ವರ್ಷಕ್ಕಿಂತ ಮೇಲ್ಪಟ್ಟವರು 16 ಮಂದಿ ಇದ್ದಾರೆ. ಅದರಲ್ಲಿ ಅತಿ ಹಿರಿಯರಾದ 109 ವರ್ಷದವರೂ ಮತದಾನ ಮಾಡಲಿದ್ದಾರೆ. ಕೆಲವು ಕಡೆ ಹಿರಿಯರು ಮೃತಪಟ್ಟಿದ್ದರೆ ಅಲ್ಲಿ ಮಹಾಜರು ಮಾಡಲಾಗುತ್ತದೆ ಎಂದು ಎ.ಸಿ ಜುಬಿನ್ ಮೊಹಪಾತ್ರ ಅವರು ಹೇಳಿದರು.


34 ಮಂದಿ ಅಗತ್ಯ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಪಿವಿಸಿ ಸೆಂಟರ್‌ನಲ್ಲಿ ಮತದಾನ
ಚುನಾವಣೆಗೆ ಸಂಬಂಧಿಸಿ ಪುತ್ತೂರಿನಿಂದ ಅಗತ್ಯ ಸೇವೆಯ ಕರ್ತವ್ಯದಲ್ಲಿರುವ 34 ಮಂದಿ ಸಿಬ್ಬಂದಿಗಳಿಗೆ ಊರಿಗೆ ಹೋಗಿ ಮತದಾನ ಮಾಡಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ವಿಶೇಷ ಪೋಸ್ಟಲ್ ಓಟರ್ ಸೆಂಟರ್ ಪ್ರಕ್ರಿಯೆ ಮಾಡಲಾಗುವುದು. ಸಂಚಾರ, ಆರೋಗ್ಯ ಸಹಿತ ಒಟ್ಟು 16 ವಿಭಾಗದಲ್ಲಿ 34 ಮಂದಿಯನ್ನು ಅಗತ್ಯ ಸೇವೆಯ ಕರ್ತವ್ಯದಲ್ಲಿ ಆಯ್ಕೆ ಮಾಡಲಾಗಿದ್ದು, ಅವರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರಿಗೆ ಜಿಲ್ಲಾ ಚುನಾವಧಿಕಾರಿಗಳ ಕೊಠಡಿ ಸಂಖ್ಯೆ 303ಯಲ್ಲಿ ಪೊಸ್ಟಲ್ ಓಟರ್ ಸೆಂಟರ್‌ನಲ್ಲಿ ಎ.19 ರಿಂದ 21ರ ಒಳಗೆ ಹೋಗಿ ಮತದಾನ ಮಾಡಬೇಕು ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದರು.


ಎ.15ಕ್ಕೆ ಪೋಸ್ಟಲ್ ಮತದಾನ:
ಚುನಾವಣಾ ಕರ್ತವ್ಯದಲ್ಲಿರುವವರಿಗೆ ಪುತ್ತೂರಿನಲ್ಲಿ ಮತದಾನ ಹಕ್ಕು ಇದ್ದರೆ ಅವರಿಗೆ ಫಾರ್ಮ್ 12 ಮೂಲಕ ಯಾವುದೇ ಮತಗಟ್ಟೆಗೆ ಹೋಗಿ ಅಲ್ಲಿ ಪ್ರಮಾಣ ಪತ್ರ ತೋರಿಸಿ ಮತದಾನ ಮಾಡಬಹುದು. ಬೇರೆ ಜಿಲ್ಲೆಯಿಂದ ಬಂದವರಿಗೆ ಫಾರ್ಮ್ 12 ಎ ಪೋಸ್ಟಲ್ ಮತದಾನ ಪಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆ ಎ.15ರ ಒಳಗೆ ಮುಗಿಸಬೇಕಾಗಿದೆ. ಹಾಗಾಗಿ ಎ.13ರ ಒಳಗೆ ಚುನಾವಣಾ ಕರ್ತವ್ಯದಲ್ಲಿರುವವರು ಎಲ್ಲಾ ಫಾರ್ಮ್ 12 ಮತ್ತು 12 ಎ ಅನ್ನು ತಹಶೀಲ್ದಾರ್ ಕಚೇರಿಗೆ ನೀಡಬೇಕು. ಆಗ ನಾವು ಅದನ್ನು ಪರಿಶೀಲಿಸಿ ಎ.14ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕಾಗಿದೆ. ಈಗಾಗಲೇ ಅಂದಾಜು ಪ್ರಕಾರ 1,06,418 ಪುರುಷರು, 1,10,257 ಮಹಿಳಾ ಮತದಾರರು ಇದ್ದಾರೆ. ಇದರ ಸರಿಯಾದ ಮಾಹಿತಿ ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.


9 ಬೂತ್‌ಗಳು ಸ್ಪೆಷಲ್:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲೆಲ್ಲಿ ಕಡಿಮೆ ಮತದಾನ ನಡೆದ ಇಎಲ್‌ಸಿ ಮೂಲಕ ಮತದಾನ ಜಾಗೃತಿ ನಡೆಸಲಾಗುತ್ತಿದೆ. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಇದರ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಾಲೂಕು ಆಡಳಿತ ಸೌಧದಲ್ಲೂ ಒಂದು ಸೆಲ್ಫಿ ಕಾರ್ನರ್ ಮಾಡಲಾಗಿದೆ. 9 ಬೂತ್‌ಗಳಲ್ಲಿ ಸ್ಪೆಷಲ್ ಬೂತ್ ಮಾಡಲಾಗಿದೆ. 5 ಸಖಿ ಬೂತ್, 4 ಮಾದರಿ ಬೂತ್ ಮಾಡಲಾಗಿದೆ. ಮೂರು ಕಡೆ ನೆಟ್‌ವರ್ಕ್ ಸಮಸ್ಯೆ ಇದೆ. 86 ಮತ್ತು 87 ಮತಗಟ್ಟೆ ಮತ್ತು 107 ನೆಟ್‌ವರ್ಕ್ ಸಮಸ್ಯೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದರು.


ಧಾರ್ಮಿಕ ಆಚರಣೆಯಲ್ಲಿ ರಾಜಕೀಯ ಚಟುವಟಿಕೆಗೆ ಅವಕಾಶವಿಲ್ಲ:
ಈಶ್ವರಮಂಗಲ ಚೆಕ್ ಪೋಸ್ಟ್‌ನಲ್ಲಿ 1.3ಲಕ್ಷ ಜಪ್ತಿಯಾಗಿತ್ತು. ಆದರೆ ಸರಿಯಾದ ದಾಖಲೆ ನೀಡಿದ ಬಳಿಕ ಅದನ್ನು ಬಿಡುಗಡೆ ಮಾಡಲಾಗಿದೆ. ಬೇರೆ ಇತರ ಎರಡು ಪ್ರಕರಣ ದಾಖಲಾಗಿದೆ. ಕೆಲವರಿಗೆ ಶೋಕಾಸ್ ನೋಟೀಸ್ ಕೂಡಾ ಜಾರಿ ಮಾಡಿದ್ದೇವೆ. ಚುನಾವಣಾಗೆ ಸಂಬಂಧಿಸಿ ಬ್ಯಾನರ್ ಪ್ರದರ್ಶನದಲ್ಲಿ ಮಾ.20ಕ್ಕೆ ಪ್ರಥಮ ಎಫ್‌ಐಆರ್ ದಾಖಲಾಗಿದೆ. ಖಾಸಗಿ ಧಾರ್ಮಿಕ, ಜಾತ್ರೆಯಲ್ಲಿ ರಾಜಕೀಯ ಮುಖಂಡರು ಭಕ್ತರಾಗಿ ಹೋಗಬಹುದು. ಆದರೆ ಜಾತ್ರೆ, ಅಚರಣೆಗೆ ಅನುಮತಿ ಪಡೆಯಬೇಕು. ರಾಜಕೀಯ ಸಭೆಗೆ ಮತ್ತು ಧಾರ್ಮಿಕ ಆಚರಣೆಗೆ ಪ್ರತ್ಯೇಕ ಆನುಮತಿ ಪಡೆಯಬೇಕು. ಧಾರ್ಮಿಕ ಆಚರಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಅನುಮತಿ ಪತ್ರದಲ್ಲಿ ದಾಖಲು ಮಾಡಲಾಗಿದೆ. ವೇದಿಕೆಯಲ್ಲಿ ಹೋಗಿ ಕೂತು ಬರುವುದು ಓಕೆ. ಆದರೆ ಅಲ್ಲಿ ರಾಜಕೀಯ ಭಾಷಣ ಮಾಡುವುದು, ಮತ ಕೇಳುವುದು ಆಗಬಾರದು. ಈ ವಿಚಾರದಲ್ಲಿ ಒಂದು ಕಡೆ ಸ್ಥಳ ತನಿಖೆ ಮಾಡಿ ಶೋಕಾಸ್ ನೋಟೀಸ್ ಕೂಡಾ ಜಾರಿ ಮಾಡಲಾಗಿದೆ. ಆದರೆ ಅಲ್ಲಿ ರಾಜಕೀಯ ವಿಚಾರ ಕಂಡು ಬಂದಿರಲಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ತಿಳಿಸಿದರು. ತಹಸೀಲ್ದಾರ್ ಕುಂಞಿ ಅಹಮ್ಮದ್, ಚುನಾವಣಾ ನೋಡೆಲ್ ಅಧಿಕಾರಿಯಾಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ, ಹಿರಿಯ ನೋಡೆಲ್ ಅಧಿಕಾರಿ ಶಿವಶಂಕರ್ ದಾನೆಗೊಂಡ, ಉಪತಹಶೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here