ಮತದಾನ ಜಾಗೃತಿಗೆ ತಾಲೂಕು ಆಡಳಿತ ಸೌಧದಲ್ಲಿ ಸೆಲ್ಫಿ ಕಾರ್ನರ್

0

ಪುತ್ತೂರು: ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಿ ಸೆಲ್ಫಿ ಪಾಯಿಂಟ್ ಗುರುತಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ತಂಡ ನಿರ್ಧರಿಸಿದ್ದು, ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ಸೆಲ್ಫಿಕಾರ್ನರ್ ಮಾಡಲಾಗಿದೆ.


ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ನಾನಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಚುನಾವಣಾ ಪರ್ವ ದೇಶದ ಗರ್ವ ಎಂಬ ಸಂದೇಶದೊಂದಿಗೆ ಮತದಾನ ಜಾಗೃತಿಗಾಗಿ ಹಾಗೂ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ನಿಟ್ಟಿನಲ್ಲಿ ನಾನಾ ಕಾರ್ಟೂನ್ ಬಳಸಿ ಸಂದೇಶಗಳುಳ್ಳ ಪ್ರಚಾರ ಫಲಕ ಅಳವಡಿಸಲಾಗಿದೆ. ಸೆಲ್ಫಿ ಹುಚ್ಚು ಹಚ್ಚಿಕೊಂಡಿರುವ ಯುವ ಮತದಾರರನ್ನು ಸೆಳೆಯಲು ಪುತ್ತೂರು ವಿಧಾನಸಭಾ ಕ್ಷೇತ್ರದ ಸ್ವೀಪ್ ತಂಡ ಹೊಸದಾಗಿ ಸೆಲ್ಪಿ ಪಾಯಿಂಟ್ ಅಳವಡಿಸುವ ಮೂಲಕ ಮತದಾನ ಜಾಗೃತಿ ಮಾಡುತ್ತಿದೆ.

ಆಕರ್ಷಕ ಸೆಲ್ಫಿ ಪಾಯಿಂಟ್‌ನಲ್ಲಿ ಒಂದು ಚೌಕಟ್ಟು ನಿರ್ಮಾಣ ಮಾಡಲಾಗಿದ್ದು, ಚೌಕಟ್ಟಿನ ಮಧ್ಯೆ ಯುವ ಸಮೂಹ ನಿಂತು ಸೆಲ್ಫಿ ಕ್ಲಿಕ್ಕಿಸಬಹುದಾಗಿದೆ. ಚೌಕಟ್ಟಿನ ಮಧ್ಯ ಭಾಗ ಹೊರತುಪಡಿಸಿ ಸುತ್ತಲೂ ಮತದಾನ ಜಾಗೃತಿಯ ’ಚುನಾವಣಾ ಪರ್ವ ದೇಶದ ಗರ್ವ’ ಮತ್ತು ಮತದಾನ ದಿನಾಂಕ 26-04-2024 ಎನ್ನುವ ಮತದಾನ ಜಾಗೃತಿಯ ಘೋಷಣೆ ಬರೆಸಲಾಗಿದೆ. ಯುವಕರು ಸೆಲ್ಫಿ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಫೇಸ್‌ಬುಕ್, ವಾಟ್ಸಪ್, ಟ್ವಿಟರ್‌ನಲ್ಲಿ ತಮ್ಮ ಫೋಟೊ ಹರಿಬಿಡಬಹುದು. ಸಾಮಾಜಿಕ ಜಾಲತಾಣಗಳ ಮೂಲಕ ಸೆಲ್ಫಿ ಫೋಟೊದೊಂದಿಗೆ ಮತದಾನ ಜಾಗೃತಿ ಮೂಡಿಸಲು ನೆರವಾಗಲಿದೆ. ಒಬ್ಬರಿಂದ ಮತ್ತೊಬ್ಬರು ಸೆಲ್ಪಿ ತೆಗೆಸಿ ಪ್ರಚಾರ ಕೈಗೊಳ್ಳುತ್ತಾರೆ. ಸಾಮಾಜಿಕ ಜಾಲತಾಣ ಪ್ರಭಾವಿ ಮಾಧ್ಯಮ ಆಗಿರುವುದರಿಂದ ಒಂದೇ ದಿನದಲ್ಲಿ ಸಾವಿರಾರು ಜನರನ್ನು ತಲುಪಲಿದೆ. ಯುವ ಮತದಾರರ ಫೋಟೊ ಇರುವುದರಿಂದ ಅವರ ಫೋಟೊ ಜತೆಗೆ ಮತದಾನ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಮೂಲ ತಿಳಿಸಿವೆ.


ಜಾಗೃತಿ ಸಂದೇಶ:
ಚುನಾವಣೆಗೆ ಸಂಬಂಧಿಸಿ ಜಾಗೃತಿ ಸಂದೇಶದಲ್ಲಿ ಕಾರ್ಟೂನ್ ಚಿತ್ರ ಬರೆದು ಅದರಲ್ಲಿ ಮತದಾರರು ಮತಗಟ್ಟೆಗೆ ಸರಥಿ ಸಾಲಿನಲ್ಲಿ ಹೋಗುವುದು ಮತ್ತು ಒಂದಿಬ್ಬರು ನೋಟಿನ ರಾಶಿಯ ಮೇಲೆ ಹಾರುವ ಚಿತ್ರವನ್ನು ಬರೆಯಲಾಗಿದೆ. ಜನ ಮರುಳೋ ಜಾತ್ರೆ ಮರುಳೋ ಎನ್ನುವ ಹಾಗೆ ಆಮಿಷಕ್ಕೆ ಒಳಗಾಗದೆ ನೈತಿಕವಾಗಿ ಮತದಾನವನ್ನು ಮಾಡಿ ಎಂದು ಸಂದೇಶ ನೀಡಲಾಗಿದೆ. ತಾಲೂಕು ಆಡಳಿತ ಸೌಧದ ಎದುರು ಕಂಬದ ಸುತ್ತ ಜಾಗೃತಿ ಸಂದೇಶ ಅಳವಡಿಲಾಗಿದೆ.

ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಸೆಲ್ಫಿ ಪಾಯಿಂಟ್ ಅನ್ನು ನಮ್ಮ ಸ್ವೀಫ್ ಸಮಿತಿ ನಿರ್ಮಾಣ ಮಾಡಿದೆ. ಇದರ ಜೊತೆಗೆ ನಮ್ಮೆಲ್ಲ ಸಿಬ್ಬಂದಿಗಳು ಚುನಾವಣಾ ಜಾಗೃತಿಯ ಸಂದೇಶವುಳ್ಳ ವಿಡಿಯೋ ರಚಿಸಲಾಗಿದೆ. ಒಟ್ಟಿನಲ್ಲಿ ಮತದಾನವನ್ನು ಎಲ್ಲರು ಮಾಡಬೇಕು.
ಜುಬಿನ್ ಮೊಹಪಾತ್ರ, ಸಹಾಯಕ ಚುನಾವಣಾಧಿಕಾರಿ

LEAVE A REPLY

Please enter your comment!
Please enter your name here