ನೆಲ್ಯಾಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆ ಎ.11ರಂದು ನೆಲ್ಯಾಡಿ ಡಿಯೋನ್ ಸ್ಕ್ವೇರ್ ಮುಂಭಾಗ ನಡೆಯಿತು.
ಪಕ್ಷದ ಲೋಕಸಭಾ ಅಭ್ಯರ್ಥಿ ಆರ್.ಪದ್ಮರಾಜ್ ಪೂಜಾರಿ ಅವರು ಮಾತನಾಡಿ, ದ.ಕ.ಜಿಲ್ಲೆಯನ್ನು 40 ವರ್ಷ ಕಾಂಗ್ರೆಸ್ ಸಂಸದರು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಜಿಲ್ಲೆಗೆ ವಿಮಾನ ನಿಲ್ದಾಣ, ಬಂದರು, ಭೂಸಾರಿಗೆ, ಎಂಆರ್‌ಪಿಎಲ್, ಎಂಸಿಎಫ್ ಸೇರಿದಂತೆ ವಿವಿಧ ಸವಲತ್ತು ಬಂದಿದೆ. ಆದರೆ ಜಾತಿ,ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿ 1991ರ ಬಳಿಕ ಬಿಜೆಪಿ ಸಂಸದರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ 33 ವರ್ಷಗಳಿಂದ ದ.ಕ.ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರು ಜಿಲ್ಲೆಗೆ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಉದ್ಯೋಗ ಸೃಷ್ಟಿಯೂ ಮಾಡಿಲ್ಲ ಎಂದು ಅವರು, ಇನ್ನು ಲೋಕಸಭಾ ಚುನಾವಣೆಗೆ 15 ದಿನ ಬಾಕಿ ಇದೆ. ಕಾರ್ಯಕರ್ತರು 15 ದಿನ ನಿದ್ದೆ ಬಿಟ್ಟು ಗೆಲುವಿಗಾಗಿ ಶ್ರಮ ವಹಿಸಬೇಕು. ಮುಂದಿನ 5ವರ್ಷ ನಿದ್ದೆ ಬಿಟ್ಟು ಜನಸೇವೆ ಮಾಡುತ್ತೆನೆ ಎಂದರು. ಬಿಜೆಪಿ ಆರ್ಥಿಕವಾಗಿ ಹಿಂದುಳಿದ ಯುವಕರನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದಿಸುತ್ತಿದೆ. ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆತಿರುವುದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸಿಕ್ಕಿರುವ ಅವಕಾಶವಾಗಿದೆ. ದ.ಕ.ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಿ 2 ಲಕ್ಷ ಉದ್ಯೋಗ ಸೃಷ್ಟಿಸಲು ಅವಕಾಶವಿದೆ. ಗೆದ್ದು ಬಂದಲ್ಲಿ ಈ ಕೆಲಸ ಮಾಡುವುದಾಗಿ ಹೇಳಿದರು.
ಮಾಜಿ ಸಚಿವ ರಮಾನಾಥ ರೈಯವರು ಮಾತನಾಡಿ, ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್ ಪಕ್ಷದ ಸಾಧನೆ. ಕಾಂಗ್ರೆಸ್ ಎಂಪಿಗಳು ಜಿಲ್ಲೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಕೊಡುಗೆ ನೀಡಿದ್ದಾರೆ. ನಂತರದ ಬಿಜೆಪಿ ಎಂಪಿಗಳು ಹೇಳಿಕೊಳ್ಳುವಂತಹ ಸಾಧನೆ ಏನೂ ಇಲ್ಲ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಗೆದ್ದರೆ ಅಭಿವೃದ್ಧಿ ಕೆಲಸಗಳು ಮತ್ತೆ ಆರಂಭಗೊಳ್ಳಲಿವೆ. ಬಡವರ ಪರವಾಗಿ ಸದಾ ಆಲೋಚಿಸುವ ಪದ್ಮರಾಜ್ ಆರ್. ಪೂಜಾರಿ ಅವರು ಹೊಸ ಶಕೆಗೆ ಮುನ್ನುಡಿ ಬರೆಯಲಿದ್ದಾರೆ ಎಂದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಉಳುವವನೇ ಭೂಮಿಯೊಡೆಯ ಯೋಜನೆಯಿಂದ ಮೊನ್ನೆ ನೀಡಿದ ಗ್ಯಾರೆಂಟಿ ಯೋಜನೆವರೆಗೆ ಕಾಂಗ್ರೆಸ್ ಕೊಡುಗೆ ಅನನ್ಯ. ಎಲ್ಲರೂ ಇದರ ಫಲಾನುಭವಿಗಳೇ. ಇದನ್ನು ಜನರಿಗೆ ನೆನಪಿಸಿ, ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕಿದೆ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಅವರು ಮಾತನಾಡಿ, ಜನರ ಬಳಿಗೆ ಹೋಗಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಕೇಳಿದರೆ, ಬಿಜೆಪಿಗರು ನಿರ್ಲಕ್ಷ್ಯ ಮಾಡುತ್ತಾರೆ. ಆದ್ದರಿಂದ ಮಹಿಳೆಯರ ಬಳಿ ಕೇಳಿ, ಅವರು ತಮಗೆ ಸಿಕ್ಕ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಿಳಿಸುತ್ತಾರೆ. ಕೇಂದ್ರದ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳ ಕಾರ್ಡ್ ಅನ್ನು ಮನೆ ಮನೆಗೆ ತಲುಪಿಸಿ ಎಂದು ಅವರು, ಕಲ್ಲಡ್ಕದವರು ಮನುಷ್ಯರು, ನೆಲ್ಯಾಡಿಯವರು ಮನುಷ್ಯರಲ್ವೇ. ಅಲ್ಲಿ ಫ್ಲೈ ಓವರ್ ಕೆಲಸ ಆಗ್ತಾ ಇದೆ. ನೆಲ್ಯಾಡಿಯಲ್ಲಿ ಯಾಕೆ ಕೆಲಸ ಕುಂಟುತ್ತಿದೆ. ಪದ್ಮರಾಜ್ ಆರ್. ಪೂಜಾರಿ ಅವರು ಸಂಸತ್ ಸದಸ್ಯರಾದರೆ ಇಂತಹ ತಾರತಮ್ಯ ನಿಲ್ಲುತ್ತದೆ ಎಂದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಕಾಂಗ್ರೆಸ್ ಮುಖಂಡರಾದ ಡಾ.ರಘು, ಜಯಪ್ರಕಾಶ್, ಕಿರಣ್ ಬುಡ್ಲೆಗುತ್ತು, ಜಿ.ಕೃಷ್ಣಪ್ಪ, ಉಷಾ ಅಂಚನ್, ವಿಜಯ್ ಕುಮಾರ್ ಸೊರಕೆ, ಪಿ.ಪಿ.ವರ್ಗೀಸ್, ಕೆ.ಪಿ. ತೋಮಸ್, ಬಾಲಕೃಷ್ಣ ಬಳ್ಳೇರಿ, ಗಂಗಾಧರ ಶೆಟ್ಟಿ ಹೊಸಮನೆ, ಎ.ಸಿ.ಜಯರಾಜ್, ಕೆ.ಕೆ.ಅಬೂಬಕ್ಕರ್, ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಪೂವಪ್ಪ ಕರ್ಕೇರ, ಗಿರೀಶ್ ಬದನೆ, ಲೋಕೇಶ್ ದೇವಾಡಿಗ, ವಿಜಯಕುಮಾರ್ ಕೆರ್ಮಾಯಿ, ಅಭಿಲಾಷ್ ಪಿ.ಕೆ., ಜೋಸ್ ಮಾತಾ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾಶಶಿ ಸೇರಿದಂತೆ ಗ್ರಾ.ಪಂ.ಸದಸ್ಯರು, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ವಂದಿಸಿದರು. ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ನಿರೂಪಿಸಿದರು.
ನೆಲ್ಯಾಡಿ ಜನರ ಸಮಸ್ಯೆಗೆ ಸ್ಪಂದನೆ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹು ಸಮಯದಿಂದ ನಡೆಯುತ್ತಿದೆ. ಇದಕ್ಕೆ ಮುಕ್ತಾಯವಿಲ್ಲವೇ ಎಂದು ಪ್ರಶ್ನಿಸಿರುವ ಆರ್.ಪದ್ಮರಾಜ್ ಪೂಜಾರಿ ಅವರು ನೆಲ್ಯಾಡಿಯಲ್ಲಿ ಮೇಲ್ಸೇತುವೆ ಸೇರಿದಂತೆ ಇಲ್ಲಿನ ಸಮಸ್ಯೆಗಳಿಗೆ ಸ್ಪಂದನೆ ನೀಡುವುದಾಗಿ ಹೇಳಿದರು. ಸಂಸತ್ ಸದಸ್ಯನಾಗಿ ಆಯ್ಕೆಯಾದ ಮೇಲೆ ತಿಂಗಳಿಗೊಂದು ದಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಎಲ್ಲರ ಸಹಕಾರ ಪಡೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಅಡಿಕೆ, ರಬ್ಬರ್ ಬೆಳೆ ಕುಸಿತಕ್ಕೆ ಕೇಂದ್ರ ಸರಕಾರದ ನೀತಿಗಳೇ ಕಾರಣವಾಗಿದೆ. ದೇಶದಲ್ಲಿ ಸಾಕಷ್ಟು ಅಡಿಕೆ ಬೆಳೆಯುತ್ತಿದ್ದರೂ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವ ಅಗತ್ಯವಿತ್ತೇ ಎಂದು ಪದ್ಮರಾಜ್ ಪ್ರಶ್ನಿಸಿದರು.