‘ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಿಸಿ’ – ವಿಶೇಷ ವೆಚ್ಚ ವೀಕ್ಷಕ ಮುರಳೀಕುಮಾರ್ ಸೂಚನೆ

0

ಮಂಗಳೂರು: ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಮಾದರಿ ನೀತಿ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಹಾಗೂ ಪ್ರತಿಯೊಂದು ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸಬೇಕು ಎಂದು ಲೋಕಸಭಾ ಚುನಾವಣೆಗೆ ರಾಜ್ಯಕ್ಕೆ ನಿಯೋಜನೆಗೊಂಡ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳೀ ಕುಮಾರ್ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಬಗ್ಗೆ ವಿಶೇಷ ನಿಗಾವಹಿಸುವಂತೆ ಹಾಗೂ ಅವರ ಶ್ಯಾಡೋ ರಿಜಿಸ್ಟರ್ ಅನ್ನು ಸೂಕ್ತವಾಗಿ ನಿರ್ವಹಿಸುವಂತೆ ಮತ್ತು ಅದನ್ನು ಕಾಲಕಾಲಕ್ಕೆ ಪರಿಶೀಲಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು, ಜಿಲ್ಲಾ ಚುನಾವಣಾ ಖರ್ಚುವೆಚ್ಚಗಳ ನಿರ್ವಹಣಾ ನೋಡಲ್ ಅಧಿಕಾರಿಗೆ ಸೂಚಿಸಿದರು. ಚುನಾವಣಾ ಅವಧಿಯಲ್ಲಿ ಅನುಮಾನಾಸ್ಪದ ವ್ಯವಹಾರಗಳ ಬಗ್ಗೆ ಎಚ್ಚರ ವಹಿಸಬೇಕು, ಪ್ರತಿ ನಿತ್ಯ ಕ್ರಮಬದ್ದ ವ್ಯವಹಾರಗಳ ಬಗ್ಗೆ ಬ್ಯಾಂಕುಗಳಿಂದ ಖಾತ್ರಿ ಪಡಿಸಿಕೊಳ್ಳಬೇಕೆಂದರು.
ಏರ್‌ಪೋರ್ಟ್ ಹಾಗೂ ಬಂದರು ತಪಾಸಣೆಯಲ್ಲಿ ಹದ್ದಿನ ಕಣ್ಣಿಡಬೇಕು, ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಬೇಕು,ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವಾಗಿ 95ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಅವರು ಮಾಡುವ ಖರ್ಚುವೆಚ್ಚಗಳ ಬಗ್ಗೆ ಎಚ್ಚರ ವಹಿಸಬೇಕು. ಮಾದರಿ ನೀತಿ ಸಂಹಿತೆ ಅನುಸಾರ ಕ್ರಮವಹಿಸಿ ಚುನಾವಣಾ ಕಾರ್ಯಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು. ಗಡಿಪಾರು ಮಾಡಿರುವ ರೌಡಿ ಶೀಟರ್‌ಗಳ ಮೇಲೆ ನಿಗಾವಹಿಸುವಂತೆ ಅವರು ಸೂಚಿಸಿದರು.
ಚುನಾವಣಾ ವೆಚ್ಚವೀಕ್ಷಕ ಮೆರುಗು ಸುರೇಶ್, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಆನಂದ್, ಜಿಲ್ಲಾ ಪೊಲೀಸ್ ಅಽಕ್ಷಕ ರಿಷ್ಯಂತ್ ಸಿ.ಬಿ.,ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆಯ ನೋಡಲ್ ಅಧಿಕಾರಿ ಮೀರಾ ಪಂಡಿತ್ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here