ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ನಾವು ಗ್ಯಾರಂಟಿಯನ್ನು ಕೊಟ್ಟಿದ್ದೇವೆ ನಿಮ್ಮದು ಏನಿದೆ-ಶಾಸಕ ಅಶೋಕ್ ರೈ


ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ವೋಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನಿದೆ ಎಂದು ಶಾಸಕರಾದ ಅಶೋಕ್ ರೈ ಯವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.ಅವರು ಪುಣಚ ದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ಗ್ಯಾರಂಟಿಯ ಬಗ್ಗೆ ಅಪಹಾಸ್ಯ‌ ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ವ್ಯಂಗ್ಯವಾಡಿದರು.
ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀ‌ ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮ‌ ಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಭೀತು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆಯಾಗಿದೆ ಎಂದು ಹೇಳಿದರು.

ಜನರಲ್ಲಿ‌ ಭಯ ಹುಟ್ಟಿಸುವುದು ಬಿಜೆಪಿ ಹುಟ್ಟು ಗುಣ
ಪ್ರತೀ ಚುನಾವಣೆ ಬಂದಾಗ ಮನೆ ಮನೆಗೆ ತೆರಳಿ ಜನರಲ್ಲಿ‌ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು‌ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ, ಗಂಡು‌ಮಕ್ಕಳನ್ನು ಜೈಲಿಗೆ ಹಾಕುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಸಮಾಜದಲ್ಲಿ‌ ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದು ಹೆಣ್ಣು‌ ಮಕ್ಕಳು ಸ್ವಾಭಿಮಾನದಿಂದ ಬದಕುವಂತಾಗಿದೆ ಇದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಹೇಳಿದರು.

ಸೊಸೈಟಿಯ ಸಕ್ಕರೆ,ಗೋದಿಯನ್ನು ನಿಲ್ಲಿಸಿದ್ದು ಬಿಜೆಪಿ ಸರಕಾರ:
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸೊಸೈಟಿಯಲ್ಲಿ ಸಕ್ಕರೆ,ಗೋದಿ, ಸೀಮೆ ಎಣ್ಣೆ , ಅಡುಗೆ ಎಣ್ಣೆ ಎಲ್ಲವೂ ಕೊಡುತ್ತಿದ್ದರು ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಎಲ್ಲವನ್ನೂ ಬಂದ್ ಮಾಡಿದೆ. ಸೊಸೈಟಿಯಲ್ಲಿ ಅಕ್ಕಿ ಕೊಡುವುದಕ್ಕೂ ಬಿಜೆಪಿ ವಿರೋಧ ಮಾಡಿದೆ. ಕೇಂದ್ರ ಬಡವರಿಗೆ ಕೊಡುವ ಅಕ್ಕಿಯನ್ನು ಕೇಂದ್ರದ ಬಿಜೆಪಿ ಸರಕಾರ ಕೊಡದೆ ಇರುವ ಕಾರಣ ಅದರ ಹಣವನ್ನು‌ ನಿಮ್ಮ ಖಾತೆಗೆ ಜಮೆ ಮಾಡುತ್ತಿದ್ದೇವೆ. ಬಿಜೆಪಿ ಎಂದೆಂದೂ ಬಡವರ ವಿರೋಧಿಯಾಗಿದೆ ಎಂದು ಹೇಳಿದರು.

ಉಪ್ಪಿಗೂ ಡಬಲ್ ರೇಟ್ ಆಗಿದೆ:
5 ರೂಗೆ ಸಿಗುತ್ತಿದ್ದ ಕಲ್ಲುಪ್ಪು ಇಂದು ಡಬಲ್ ರೇಟ್ ಆಗಿದೆ. 10 ರೂ ಹೆಚ್ಚು ಮಾಡಿದ ಬಿಜೆಪಿ ಸರಕಾರ ಜನರಿಗೆ ಉಪ್ಪು ಹಾಕಿ ಗಂಜಿ ಕುಡಿಯದ ಹಾಗೆ ಮಾಡಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್ ,ಡೀಸೆಲ್ ,ಕೃಷಿ ಉಪಕರಣಗಳು, ಪೈಪ್ ಫಿಟ್ಟಿಂಗ್ ಸೇರಿದಂತೆ ನಾವು ಬಳಸುವ ಪ್ರತೀಯೊಂದು ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ ಬಿಜೆಪಿ ಬಡವರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಶಾಸಕರು ಹೇಳಿದರು.

ಜನ‌ಮೋಸ ಹೋಗದಿರಿ;
ಈ ಬಾರಿ ಬಿಜೆಪಿಯ ನಕಲಿ ಹಿಂದುತ್ವಕ್ಕೆ ಯಾರೂ ಬಲಿಯಾಗಬಾರದು. ಚುನಾವಣೆಗೋಸ್ಕರ ಹಿಂದೂ‌ ಮುಸ್ಲಿಂ ವಿಚಾರ ಮುಂದಿಟ್ಟು ವೋಟು ಪಡೆಯುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯವರದ್ದು ನಕಲಿ ಹಿಂದುತ್ವವಾಗಿದೆ. ಎಲ್ಲರಲ್ಲೂ ಬಂಧುತ್ವವನ್ನು ಕಾಣುವುದೇ ನಿಜವಾದ ಹಿಂದುತ್ವವಾಗಿದೆ ಎಂದು ಹೇಳಿದರು.

ಮಹಿಳೆಯರೇ ಆಲೋಚಿಸಿ ಮತಚಲಾಯಿಸಿ:
ಮಹಿಳೆಯರಿಗೆ ಕರ್ನಾಟಕ ಕಾಂಗ್ರೆಸ್ ಶಕ್ತಿ ನೀಡಿದೆ ಅದನ್ನು ಉಳಿಸಲು ಕಾಂಗ್ರೆಸ್ ಗೆ ಮತ ಹಾಕಿ. ಕಾಂಗ್ರೆಸ್ ಗೆಲ್ಲದೇ ಇದ್ದರೆ ಬಿಜೆಪಿ ತನ್ನ ಹಣ ಬಲದಿಂದ ಸರಕಾರ ಬೀಳಿಸಲು ಮುಂದಾಗಬಹುದು. ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಅಪಾಯವಾದರೆ ಗ್ಯಾರಂಟಿ ಬಂದ್ ಆಗಬಹುದು. ಗ್ಯಾರಂಟಿ ಬಂದ್ ಆದರೆ ಏನಾಗಬಹುದು ಎಂಬುದನ್ನು ಊಹಿಸಿ, ಆಲೋಚಿಸಿ ಮತ ಚಲಾಯಿಸಿ, ಬಿಜೆಪಿಯವರ ಸುಳ್ಳು ಭರವಸೆಯನ್ನು ನಂಬಬೇಡಿ ಎಂದು ಹೇಳಿದರು.


ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.‌ರಾಜಾರಾಂ ಕೆ ಬಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ ಮಠ ಮಾತನಾಡಿ ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಮಾಹಿತಿ ನೀಡಿದರು. ದೇಶದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ನಾವು ಎಂದೂ‌ ಮರೆಯಬಾರದು ಎಂದು ಹೇಳಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಪಕ್ಷಕ್ಕೆ ಸೇರ್ಪಡೆ
ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಣ್ಣ ನಾಯ್ಕ ಮತ್ತು ರೈಲ್ವೇ ಉದ್ಯೋಗಿ ಮಹಾಲಿಂಗ ನಾಯ್ಕರು ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.

ವೇದಿಕೆಯಲ್ಲಿ ಉಸ್ತುವಾರಿಗಳಾದ ಮುರಳೀದರ್ ರೈ ಮಟಂತಬೆಟ್ಟು,ಪ್ರವೀಣ್ ಚಂದ್ರ ಆಳ್ವ,ವಲಯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ನೂರುದ್ದೀನ್ ಸಾಲ್ಮರ, ರಮಾನಾಥ ವಿಟ್ಲ, ಸಿರಾಜ್ ಮಾಣಿಲ, ಹನೀಫ್, ನಾರಾಯಣ ಪೂಜಾರಿ, ಅಲ್ಬರ್ಟ್ ಡಿಸೋಜಾ, ಕ್ಸೇವಿಯರ್ ಡಿಸೋಜಾ, ದಿವಾಕರ್ ನಾಯಕ್, ಹರೀಶ್ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here