ಚುನಾವಣೆ ಸೋಲಿನ ಭಯದಿಂದ ಪ್ರಧಾನಿಯಿಂದ ನಾರಾಯಣ ಗುರುಗಳ ಮೇಲೆ ನಾಟಕೀಯ ಗೌರವ – ಅಮಳ ರಾಮಚಂದ್ರ

0

ಪುತ್ತೂರು: ಚುನಾವಣೆಯ ಸೋಲಿನ ಭಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿಸಿದ್ದಾರೆ. ಇದೇ ಸಂದರ್ಭ ಅವರು ಒಂದು ಕಾಲನ್ನು ನಾರಾಯಣ ಗುರು ಸ್ವಾಮಿಯವರ ಪುತ್ಥಳಿಯ ಪೀಠದ ಸಮೀಪದಲ್ಲಿ ಇಟ್ಟು ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಅವರು ಉದ್ದೇಶ ಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆ. ಇದೊಂದು ನಾಟಕೀಯ ಗೌರವ ಎಂದು ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.


ದಕ್ಷಿಣ ಕನ್ನಡಕ್ಕೆ ನರೇಂದ್ರ ಮೋದಿ ಬಂದಾಗ ಸಭೆ ಮಾಡಿದರೆ ಗೋಲ್ಡ್ ಪಿಂಚಿನಲ್ಲಿ ಕಾರ್ಯಕರ್ತರು ಸಂಖ್ಯೆ ಸಾಕಾಗುವುದಿಲ್ಲ ಎಂದು ಕಿರಿದಾದ ರಸ್ತೆಯಲ್ಲಿ ಜನ ತುಂಬಾ ಕಾಣುವಂತ ಸ್ಥಳದಲ್ಲಿ ರೋಡ್ ಶೋ ಮಾಡಿದ್ದಾರೆ. ಹಾಗೆ ರೋಡ್ ಶೋಗೆ ಮೊದಲು ಲೇಡಿಹಿಲ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯ ಸಮೀಪ ಹೋಗಿ ಅಲ್ಲಿ ಗೌರವ ನೀಡಿ ಮಾಲಾರ್ಪಣೆ ಮಾಡಿದ್ದಾರೆ. ಅವರು ಈ ಭಾರಿ ಮಾತ್ರ ಯಾಕೆ ನಾರಾಯಣ ಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಕೊಡುವ ನಾಟಕ ಮಾಡಿದ್ದಾರೆ. ಈ ಹಿಂದೆ ಅವರು ಎಷ್ಟೋ ಸಲ ದಕ್ಷಿಣ ಕನ್ನಡಕ್ಕೆ ಬಂದಿದ್ದಾರೆ. ಆದರೆ ಇಷ್ಟರ ತನಕ ಒಮ್ಮೆಯೂ ನಾರಾಯಣ ಗುರುಗಳ ನೆನಪಾಗದವರಿಗೆ ಚುನಾವಣೆ ಸಂದರ್ಭ ಯಾಕೆ ನೆನಪಾಗಿದೆ ಎಂದು ಪ್ರಶ್ನಿಸಿದ ಅವರು ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜ ಸುಧಾರಕರು, ದಾರ್ಶನಿಕರು, ತತ್ವಜ್ಞಾನಿಗಳಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಚುನಾವಣೆಗೆ ನಿಂತಿರುವ ಪದ್ಮರಾಜ್ ಆರ್ ಪೂಜಾರಿ ಅವರು ನಾರಾಯಣ ಗುರುಗಳ ಪರಮ ಭಕ್ತರು ಮತ್ತು ಅವರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿಯಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಯವರು ಕಾಂಗ್ರೆಸ್ ಅಭ್ಯರ್ಥಿಗೆ ಈ ಚುನಾವಣೆಯಲ್ಲಿ ಅತ್ಯಂತ ಅಪಾರ ಜನಬೆಂಬಲ ಕಂಡು ಅದನ್ನು ತಪ್ಪಿಸುವ ಉದ್ದೇಶದಿಂದಲೇ ನಾರಾಯಣಗುರುಗಳಿಗೆ ಗೌರವ ನೀಡುವ ನಾಟಕ ಮಾಡಿದ್ದಾರೆ ಎಂದರು.

ಇದಲ್ಲದೆ 2022ನೇ ಇಸವಿಯಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲವಾದರೂ 2023ನೇ ಮತ್ತು 2024ನೇ ಇಸವಿಯಲ್ಲಾದರೂ ಅವಕಾಶ ನೀಡಬಹುದಿತ್ತು. ಪಠ್ಯಪುಸ್ತಕದಿಂದಲೂ ನಾರಾಯಣ ಗುರುಗಳ ವಿಚಾರ ತೆಗೆದು ಹಾಕಲಾಗಿತ್ತು. ಆಗಲೂ ಅವರು ಆದ ತಪ್ಪನ್ನು ಸರಿ ಮಾಡಿಕೊಂಡಿಲ್ಲ. ಇವತ್ತು ರೋಡ್ ಶೋ ಸಂದರ್ಭ ಒಂದು ಕಾಲನ್ನು ನಾರಾಯಣ ಗುರು ಸ್ವಾಮಿಯವರ ಪುತ್ಥಳಿಯ ಪೀಠದ ಸಮೀಪದಲ್ಲಿ ಇಟ್ಟು ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ಅವರು ಉದ್ದೇಶ ಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆ. ಆದರೆ ಒಬ್ಬ ವ್ಯಕ್ತಿಯಿಂದ ಇಂತಹ ಕೃತ್ಯಗಳು ಯಾವಾಗ ನಡೆಯುತ್ತದೆ ಎಂದರೆ ಯಾರಿಗೆ ತಾನು ಮಾಡಿದ ಕೃತ್ಯದಲ್ಲಿ ಅಸಡ್ಡೆ ಇರುತ್ತದೆಯೋ ಮತ್ತು ಗೌರವ ಸ್ವೀಕರಿಸುವ ವ್ಯಕ್ತಿಯ ಮೇಲೆ ಗೌರವ ಕಡಿಮೆ ಆದಾಗ ಕಾಲೂ ಇಡುತ್ತಾರೆ. ಶ್ರದ್ಧೆ ಇರುತ್ತಿದ್ದರೆ ಹಾಗೆ ಮಾಡುತ್ತಿರಲಿಲ್ಲ. ಇದು ಒಂದು ಕಡೆಯಿಂದ ಗುರುಗಳಿಗೆ ಗೌರವ ಕೊಟ್ಟಂತೆ ಆಗಬೇಕು ಮತ್ತು ಓಟು ಪಡೆಯುವಂತಗಾಗಬೇಕೆಂಬ ನಾಟಕ ಮಾಡಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೋತಿಮಾರ್, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಎಸ್.ಸಿ ಘಟಕದ ಅಧ್ಯಕ್ಷ ಮುಕೇಶ್ ಕೆಮ್ಮಿಂಜೆ, ರಿಯಾಝ್ ಪರ್ಲಡ್ಕ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here