ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಸಹಯೋಗದೊಂದಿಗೆ 1 ವಾರ ನಡೆಯುವ ಮಕ್ಕಳ ಮೋಜಿನ ಬೇಸಿಗೆ ಶಿಬಿರದ ಉದ್ಘಾಟನೆ ಎ.19ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಜೆಸಿಐ ಇಂಡಿಯಾದ 15ರ ವಲಯ ನಿರ್ದೇಶಕರಾದ ಜೇಸಿ ಭರತ್ ಶೆಟ್ಟಿಯವರು ಮಾತನಾಡಿ, ವಾರವಿಡೀ ಪಾಠ ಪ್ರವಚನದಲ್ಲಿ ನಿರತರಾಗಿರುವ ಮಕ್ಕಳು ಇತರೆ ಚಟುವಟಿಕೆಗಳಿಗೆ ವಾರದಲ್ಲಿ ಒಂದು ದಿನ ಮೀಸಲಿಡುವ ಪರಿಪಾಠ ಜಾರಿಯಾಗಬೇಕು. ವೇದಿಕೆಯಲ್ಲಿನ ಭಯ ನೀಗಿಸುವ ಕಾರ್ಯ ಎಳವೆಯಿಂದಲೇ ಆರಂಭಿಸಬೇಕು. ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಈ ಪ್ರತಿಭೆ ಹೊರ ಹಾಕುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ, ಕಲೆಯನ್ನು ಪರಿಚಯಿಸುವ ಕೆಲಸ ನಡೆಸಬೇಕು ಎಂದರು. ಈ ಸಂದರ್ಭದಲ್ಲಿ ಜೇಸಿ ವತಿಯಿಂದ ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಜೆಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್. ಕೆ.ಎಸ್., ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್ ಉಪಸ್ಥಿತರಿದ್ದರು. ಜೇಸಿ ಪೂರ್ವಾಧ್ಯಕ್ಷ ವೆಂಕಟರಮಣ ಆರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜ್ಞಾಹ್ನವಿ ಜೇಸಿವಾಣಿ ವಾಚಿಸಿದರು. ಜೇಸಿ ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ವಂದಿಸಿದರು.
ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ ಪೇಪರ್ ಕ್ರಾಫ್ಟ್, ಹಳ್ಳಿಯ ಆಟಗಳು, ಗಾಳಿಪಟ, ಗೂಡುದೀಪ, ಸ್ಪೋಕನ್ ಇಂಗ್ಲೀಷ್, ಅಬಾಕಾಸ್, ಸ್ಲ್ಯಾಬ್ ಬುಕ್ ತಯಾರಿ, ಚಿತ್ರಕಲೆ, ಬೆಂಕಿಯಿಲ್ಲದೆ ಅಡುಗೆ, ಮೋಜಿನ ಆಟಗಳು, ಯೋಗ, ಡ್ಯಾನ್ಸ್, ಸಂಗೀತ ಮೊದಲಾದವುಗಳನ್ನು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದು ಜೆಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ತಿಳಿಸಿದರು.