ಪುತ್ತೂರು ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕಿ ಪೂರ್ಣಿಮಾರವಿ ನಿರ್ದೇಶನದ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ್ಯ ಚಲನಚಿತ್ರ-ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವಕ್ಕೆ ನಾಮನಿರ್ದೇಶನ

0

ಪುತ್ತೂರು:ಪುತ್ತೂರಿನ ಯುವ ಸಂಶೋಧಕಿ, ಮಹಿಳಾ ಕಾಲೇಜಿನ ಅತಿಥಿ ಉಪನ್ಯಾಸಕಿ ಪೂರ್ಣಿಮಾರವಿ ಅವರು ನಿರ್ದೇಶಿಸಿರುವ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ್ಯ ಚಲನಚಿತ್ರ ಪ್ರತಿಷ್ಠಿತ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2024 (DSPFF-24)ಕ್ಕೆ ನಾಮ ನಿರ್ದೇಶನಗೊಂಡಿದೆ.


ಚಲನಚಿತ್ರ ನಿರ್ದೇಶಕಿ ಪೂರ್ಣಿಮಾ ರವಿ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಕಾಲೇಜಿನ ಇಂಗ್ಲಿಷ್ ಸಹ ಪ್ರಾಧ್ಯಾಪಕರಾದ ಡಾ|ನಯನಾ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.ಪ್ರಸ್ತುತ ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಈ ಸಾಕ್ಷ್ಯ ಚಲನಚಿತ್ರಕ್ಕೆ ಪೂರ್ಣಿಮಾ ರವಿ ಅವರೇ ಧ್ವನಿ ಮತ್ತು ಉಪಶೀರ್ಷಿಕೆಗಳ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ.ಚಂದ್ರಶೇಖರ ಹೆಗ್ಡೆ(ಸಂಗೀತ ನಿರ್ದೇಶಕ), ರಕ್ಷಿತ್ ರೈ (ಸಂಕಲನ), ನಿಹಾಲ್ ನೂಜಿಬೈಲ್ (ಡಿಒಪಿ), ಸುನೀತಾ ಪ್ರವೀಣ್ (ಗಾಯಕಿ),
ಸ್ವರ್ಣಶ್ರೀ ಪಟ್ಟೆ (ಗೀತೆರಚನೆ), ಪ್ರವೀಣ್ ವರ್ಣಕುಟೀರ(ಸೃಜನಾತ್ಮಕ ಸಲಹೆಗಾರ), ಅಲೋಕ್ ನೂಜಿಬೈಲು (ಸೃಜನಾತ್ಮಕ ಪಾಲುದಾರ) ಮತ್ತು ರವಿನಾರಾಯಣ (ಕಾರ್ಯನಿರ್ವಾಹಕ ನಿರ್ಮಾಪಕ)ಚಿತ್ರ ತಂಡದ ಭಾಗವಾಗಿದ್ದಾರೆ.


ಅಂತರ್ರಾಷ್ಟ್ರೀಯ ಪ್ರಶಸ್ತಿ:
ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ ಚಲನಚಿತ್ರ ಅಮೇರಿಕಾದ ಡಾಕ್ಯುಮೆಂಟರಿ ವಿಥೌಟ್ ಬಾರ್ಡರ್ಸ್ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಎಕ್ಸೆಪ್ಷನಲ್ ಮೆರಿಟ್ ಅವಾರ್ಡ್’ ಪ್ರಶಸ್ತಿಗೆ ಆಯ್ಕೆಯಾಗಿದೆ.ಈ ಪ್ರಶಸ್ತಿಯನ್ನು ಇತ್ತೀಚೆಗೆ ಘೋಷಿಸಲಾಯಿತು.ಸಾಕ್ಷ್ಯಚಿತ್ರವು ರಾಜ್ಯದ ಉತ್ತರ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ದೇವದಾಸಿ ಪದ್ಧತಿ, ದೇವದಾಸಿಯರ ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ.ಈ ಚಲನಚಿತ್ರವು ದೇವದಾಸಿಯರ ನೈಜ ಕಥೆಗಳಿಗೆ ಕನ್ನಡಿಯಾಗಿದೆ.ದೇವದಾಸಿ ಪದ್ಧತಿ ಸಂತ್ರಸ್ತರ ಮರು ಸಮೀಕ್ಷೆ, ಶಾಶ್ವತ ಪುನರ್ವಸತಿ ಮತ್ತು ಈ ಸಾಮಾಜಿಕ ಅನಿಷ್ಟಕ್ಕೆ ಶಾಶ್ವತ ಪರಿಹಾರದ ಕೂಗಿಗೆ ಈ ಸಾಕ್ಷ್ಯ ಚಲನಚಿತ್ರ ಧ್ವನಿಯಾಗಿದೆ.

LEAVE A REPLY

Please enter your comment!
Please enter your name here