ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮ- ಧಾರ್ಮಿಕ ಸಭೆ
ತರವಾಡು ಮನೆ ಕುಟುಂಬಕ್ಕೆ ತಾಯಿ ಬೇರು ಇದ್ದಂತೆ: ಒಡಿಯೂರು ಶ್ರೀ
ಪುತ್ತೂರು: ತರವಾಡು ಮನೆ ಎಂದರೆ ಅದೊಂದು ಮೂಲಮನೆ, ಎಲ್ಲಾ ಕುಟುಂಬಗಳಿಗೆ ಒಂದು ತಾಯಿ ಬೇರು ಇದ್ದಂತೆ, ಇಂತಹ ತರವಾಡು ಮನೆಯಲ್ಲಿ ಪ್ರೀತಿ ಮತ್ತು ವಿಶ್ವಾಸ ತುಂಬಿದಾಗ ಆ ತರವಾಡು ಮನೆಗಳು ಅಭಿವೃದ್ಧಿ ಕಾಣಲು ಸಾಧ್ಯವಿದೆ.ಮಾಧವನಲ್ಲಿ ಭಕ್ತಿ, ಮಾನವನಲ್ಲಿ ಪ್ರೀತಿ ಇರಬೇಕು ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ. ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ಈ ತರವಾಡು ಮನೆಯಲ್ಲಿ ಪ್ರೀತಿ, ವಿಶ್ವಾಸ ತುಂಬಿ ತುಳುಕಲಿ, ಕುಟುಂಬದ ಎಲ್ಲರಿಗೂ ನಂಬಿದ ದೈವ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಏ.22 ರಂದು ನಡೆದ ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅರಿಯಡ್ಕದ ಈ ಧರ್ಮಜಾಗೃತಿಯ ಮಣ್ಣಿನ ಗುಣವನ್ನು ತಿಳಿದಾಗ ಬಹಳಷ್ಟು ಆಶ್ಚರ್ಯವಾಗುತ್ತದೆ. ಭತ್ತದ ಗದ್ದೆಯಲ್ಲಿ ಭತ್ತದ ತೆನೆಯಲ್ಲಿ ಭತ್ತದ ಬದಲು ಅಕ್ಕಿಯೇ ಬೆಳೆದ ಈ ಅರಿಯಡ್ಕದ ಮಣ್ಣಲ್ಲಿ ಬಹಳ ಸುಂದರವಾರ ತರವಾಡು ಮನೆ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ಎಲ್ಲಾ ಸದಸ್ಯರಿಗೆ ದೈವ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭಾಶೀರ್ವಾದ ಮಾಡಿದರು.
ಸಮಾಜದಲ್ಲಿ ಆದರ್ಶ ತರವಾಡು ಆಗಿ ಬೆಳಗಲಿ: ಕುಂಟಾರು ರವೀಶ ತಂತ್ರಿ
ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಮಾತನಾಡಿ, ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ಈ ನವೀಕೃತ ತರವಾಡು ಮನೆಯು ಬಹಳಷ್ಟು ಸುಂದರವಾಗಿ ನಿರ್ಮಾಣಗೊಂಡಿದೆ. ಧರ್ಮದ ಈ ಮಣ್ಣಲ್ಲಿ ನಿರ್ಮಾಣಗೊಂಡ ಈ ತರವಾಡು ಮನೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಆದರ್ಶ ತರವಾಡು ಆಗಿ ಬೆಳಗಲಿ ಎಂದು ಆಶಿಸಿದರು.ಕಾಲ ಬದಲಾದರೂ ಸ್ಥಿತಿ ಬಲದಾಗಿಲ್ಲ,ಮನುಷ್ಯ ಮಾತ್ರ ಬದಲಾಗಿದ್ದು ಆದ್ದರಿಂದ ಇಂತಹ ತರವಾಡು ಮನೆಗಳು ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಮನೆಗಳಾಗಬೇಕು, ಮುಂದಿನ ಜನಾಂಗಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸುವ ಮನೆಗಳಾಗಬೇಕು ಎಂದ ಅವರು ಧರ್ಮ ಕ್ಷೇತ್ರಗಳಿಗೆ ಬಂಟ ಸಮಾಜದ ದೊಡ್ಡ ಕೊಡುಗೆ ಇದೆ ಎಂದು ಹೇಳಿ ಶುಭ ಹಾರೈಸಿದರು.
ತರವಾಡು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ -ಅಶೋಕ್ ಕುಮಾರ್ ರೈ
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈಯವರು ಮಾತನಾಡಿ, ಒಂದು ಕಾಲದಲ್ಲಿ ದೂರಾದ ಕುಟುಂಬಸ್ಥರು ಮತ್ತೆ ಒಂದಾಗುತ್ತಿದ್ದಾರೆ ಅವರ ಮೂಲಕ ಇಂತಹ ತರವಾಡು ಮನೆಗಳು ನಿರ್ಮಾಣಗೊಳ್ಳುತ್ತಿದೆ. ಇದು ತುಂಬಾ ಸಂತಸದ ವಿಷಯವಾಗಿದೆ. ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ ಕೆಲಸ ನಡೆಯುತ್ತಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ. ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆಯ ಎಲ್ಲಾ ಕಾರ್ಯಗಳು ಒಳ್ಳೆಯ ರೀತಿಯಲ್ಲಿ ನಡೆಯಲಿ, ಕುಟುಂಬಸ್ಥರಿಗೆ ಸುಖ, ಶಾಂತಿ, ಸಮೃದ್ದಿ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ದೈವ, ದೇವರು ಗ್ರಾಮದ ಎರಡು ಕಣ್ಣುಗಳಿದ್ದಂತೆ- ಸವಣೂರು ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಸೀತಾರಾಮ ರೈ ಸವಣೂರು ಮಾತನಾಡಿ, ದೈವ, ದೇವರುಗಳು ನಮ್ಮ ಗ್ರಾಮದ ಎರಡು ಕಣ್ಣುಗಳಿದ್ದಂತೆ,ಇಂತಹ ದೈವ ದೇವರುಗಳ ಕ್ಷೇತ್ರಗಳು ಅಭಿವೃದ್ಧಿಯಾದರೆ ನಮ್ಮ ಸಮಾಜದ,ಗ್ರಾಮದ ಅಭಿವೃದ್ಧಿಯಾದಂತೆ ಎಂದರು. ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ತರವಾಡು ಮನೆ ಬಹಳ ಸುಂದರವಾಗಿ ನಿರ್ಮಾಣಗೊಂಡಿದ್ದು ಮುಂದಿನ ದಿನಗಳಲ್ಲಿ ಈ ತರವಾಡು ಮನೆ ಸಮಾಜಕ್ಕೆ ಆದರ್ಶ ಮನೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಅರಿಯಡ್ಕದಲ್ಲಿ ಜಾತ್ರೆ ಸಂಭ್ರಮ- ಶಕುಂತಳಾ ಟಿ.ಶೆಟ್ಟಿ
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಅರಿಯಡ್ಕದ ಈ ಮಣ್ಣಿಗೆ ಬಂದಾಗ ಇಲ್ಲೊಂದು ಜಾತ್ರೆಯ ಅನುಭವ ನನಗಾಯಿತು. ಬಹಳ ಸುಂದರವಾದ, ಭವ್ಯವಾದ ತರವಾಡು ಮನೆ ಹಾಗೂ ಇಲ್ಲಿನ ವ್ಯವಸ್ಥೆ ಬಹಳಷ್ಟು ಖುಷಿ ಕೊಟ್ಟಿದ ಗತ್ತು ಉಳಿಯಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಅತೀ ಮುಖ್ಯ.ಮುಂದಿನ ದಿನಗಳಲ್ಲಿ ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಮನೆಯಗಲಿ ಎಂದು ಹೇಳಿ ಶುಭ ಹಾರೈಸಿದರು.
ಎಲ್ಲರಿಗೂ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ- ಅರಿಯಡ್ಕ ಚಿಕ್ಕಪ್ಪ ನಾೖಕ್
ಸಭಾಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಚಿಕ್ಕಪ್ಪ ನಾೖಕ್‌ರವರು ಮಾತನಾಡಿ, ಅರಿಯಡ್ಕ ಏಳ್ನಾಡುಗುತ್ತು ಕುಟುಂಬಸ್ಥರಿಗೆ ಇದೊಂದು ಸಂಭ್ರಮದ ದಿನವಾಗಿದೆ. ಇಂತಹ ಸಂಭ್ರಮದ ದಿನಕ್ಕಾಗಿ ನಮ್ಮೊಂದಿಗೆ ಸೇವೆ ಸಲ್ಲಿಸಿದ ಸರ್ವರಿಗೂ ಪ್ರೀತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ವಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ,ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಕರ್ನೂರುಗುತ್ತು ನರಸಿಂಹ ಪಕ್ಕಳ, ಕೃಷ್ಣ ರೈ ಪನ್ನೆಗುತ್ತು, ಗಿರೀಶ್ ರೈ, ಚಂದ್ರಹಾಸ ಬಲ್ಲಾಳ್ ಕೆದಂಬಾಡಿಬೀಡು, ಅರಿಯಡ್ಕ ಸುಬ್ಬಯ್ಯ ಶೆಟ್ಟಿ, ತರವಾಡು ಮನೆಯ ಆರ್ಕಿಟೆಕ್ಟ್ ಇಂಜಿನಿಯರ್ ಗೀತಾನಂದ ಅಡಪ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಮತಾ ರೈ, ಚೈತ್ರಾ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಅರಿಯಡ್ಕ, ರಮೇಶ್ ರೈ ಸಾಂತ್ಯ, ವಿನೋದ್ ಕುಮಾರ್ ಅರಿಯಡ್ಕ, ಕುಮುದಾ ಎಲ್.ಎನ್ ಶೆಟ್ಟಿ, ಡಾ.ದೀಪಕ್ ರೈ ಅರಿಯಡ್ಕ, ಅರಿಯಡ್ಕ ಕಿಶೋರ್ ಕುಮಾರ್ ಶೆಟ್ಟಿ, ಪ್ರೀತಂ, ಎ.ಕೆ ರೈ, ಅರಿಯಡ್ಕ ಸುಭಾಷ್ ರೈ, ಗೌತಮ್‌ರವರುಗಳು ಅತಿಥಿಗಳಿಗೆ ಹೂ, ಶಾಲು ಹಾಕಿ ಸ್ವಾಗತಿಸಿದರು. ಎ.ಕೆ ರೈ ವಂದಿಸಿದರು. ಮೋಹನ ಆಳ್ವ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು.
ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ, ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಪಿಲಿಭೂತದ ನೂತನ ದೈವಸ್ಥಾನ ಮತ್ತು ದೊಂಪದ ಬಲಿ ಉತ್ಸವ ನಡೆಯುವಲ್ಲಿ ನವೀಕೃತಗೊಂಡ ಉತ್ಸವ ಕಟ್ಟೆಗಳು, ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ನಿರ್ಮಿಸಿದ ಗುಳಿಗನ ಕಟ್ಟೆಯ ಪ್ರತಿಷ್ಠೆ ಬ್ರಹ್ಮಕಲಶೋತ್ಸವವವು ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ನೇತೃತ್ವದಲ್ಲಿ, ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ನಡೆಸಿಕೊಟ್ಟರು. ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 8.32 ರ ವೃಷಭ ಲಗ್ನದ ಸುಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ, 9.40 ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಶ್ರೀ ಸತ್ಯನಾರಾಯಣ ದೇವರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಶ್ರೀ ದುರ್ಗಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು.
ಅಚ್ಚುಕಟ್ಟಾದ ವ್ಯವಸ್ಥೆ
ವಿಶಾಲವಾದ ಗದ್ದೆಯ ನಡುವಲ್ಲಿ ಕಂಗೊಳಿಸುವ ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆ ಬಹಳ ಸುಂದರವಾಗಿ ನಿರ್ಮಾಣಗೊಂಡಿದೆ. ಇದರ ವಿನ್ಯಾಸ ಬಹಳ ಸೊಗಸಾಗಿದೆ.ಈ ತರವಾಡು ಮನೆಯ ಎದುರು ವಿಶಾಲವಾದ ಗದ್ದೆ ಇದೆ. ಅರಿ(ಅಕ್ಕಿ)ಬೆಳೆದ ಗದ್ದೆ (ಅಡ್ಕ) ಇದೇ ಎನ್ನಲಾಗಿದೆ. ಆದ್ದರಿಂದಲೇ ಇಲ್ಲಿಗೆ ಅರಿಯಡ್ಕ ಎಂಬ ಹೆಸರು ಬಂದಿದೆ. ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠಾ ಕಾರ್ಯಕ್ರಮವು ಬಹಳ ಸೊಗಸಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ವಿಶಾಲವಾದ ಪಾರ್ಕಿಂಗ್, ವ್ಯವಸ್ಥಿತವಾದ ಸಭಾ ವೇದಿಕೆ, ಕುಳಿತು ಊಟಮಾಡಲು ವಿಶಾಲವಾದ ಊಟದ ಚಪ್ಪರ ಹೀಗೆ ಎಲ್ಲವೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಇಡೀ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಳೆ ತರವಾಡು ಮನೆಯಲ್ಲಿ
ಏ.23 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಮುಡಿಪು ಶುದ್ಧಿ, ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅರಿಯಡ್ಕ ಧರ್ಮದೈವ ಪಿಲಿಭೂತದ ಭಂಡಾರ ನೂತನ ದೈವಸ್ಥಾನದಿಂದ ಬಂದು ಅರಿಯಡ್ಕ ಏಳ್ನಾಡುಗುತ್ತು ಧರ್ಮಚಾವಡಿಯಲ್ಲಿ ಏರುವುದು, ಶಿರಾಡಿ ದೈವದ ಭಂಡಾರ ಬಂದು ಅರಿಯಡ್ಕ ಮಂಟಮೆಯಲ್ಲಿ ಏರುವುದು, ಗ್ರಾಮ ದೈವ ಧೂಮಾವತಿಯ ಭಂಡಾರ ಕುತ್ಯಾಡಿ ಸ್ಥಾನದಿಂದ ಬಂದು ಅರಿಯಡ್ಕ ಮಂಟಮೆಯಲ್ಲಿ ಏರುವುದು, ರಾತ್ರಿ ಧರ್ಮದೈವ ಪಿಲಿಭೂತದ ನೇಮ ಆರಂಭ ಮತ್ತು ಗುರುಕಾರ್ನವರಿಗೆ ಬಡಿಸುವುದು, ಪ್ರಾತಃಕಾಲ ಪ್ರಸಾದ ವಿತರಣೆ, ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.