ಪುತ್ತೂರು: ಸರಕಾರಿ ಜಮೀನಿನಿಂದ ಶ್ರೀಗಂಧ ಕಡಿದು ಸಾಗಾಟ ಮಾಡಲು ವಶದಲ್ಲಿಟ್ಟುಕೊಂಡಿದ್ದ ಪ್ರಕರಣವನ್ನು ಎ.22ರಂದು ಪತ್ತೆ ಹಚ್ಚಿರುವ ಅರಣ್ಯ ಸಂಚಾರಿ ದಳದ ಎಸ್.ಐ. ಜಾನಕಿ ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ. ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸ್ ಉಪ ಮಹಾ ನಿರೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೋಲಿಸ್ ಅಧೀಕ್ಷಕ ಎಸ್. ಎಸ್. ಕಾಶಿರವರ ಮಾರ್ಗದರ್ಶನದಲ್ಲಿ ಮಂಗಳೂರು ಪೊಲೀಸ್ ಸಿಐಡಿ ಅರಣ್ಯ ಸಂಚಾರಿದಳದ ಪಿ.ಎಸ್.ಐ ಜಾನಕಿ ಕೆ.ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಸಿ.ಆರ್. ಕಾಲೋನಿಯ ವೇಲು ಎಂಬವರ ಪುತ್ರ ಕಮಲ್ ಯಾನೆ ಕಮಲ್ ವಾಸನ್ (46 ವ) ಎಂಬಾತ ಸುಮಾರು 1,43,000 ರೂಪಾಯಿ ಮೌಲ್ಯದ 22 ಕೆ.ಜಿ. ಶ್ರೀಗಂಧದ ಕೊರಡುಗಳನ್ನು ಅಕ್ರಮವಾಗಿ ಕೊಳ್ತಿಗೆ ಗ್ರಾಮದ ಕಣಿಯಾರು ಸರಕಾರಿ ಜಮೀನಿನಿಂದ ಕಡಿದು ಸಾಗಾಟಕ್ಕೆ ತನ್ನ ವಶದಲ್ಲಿಟ್ಟು ಕೊಂಡಿದ್ದಾತನನ್ನು ಕೊಳ್ತಿಗೆ ಗ್ರಾಮದ ಪೆರ್ಲಲಂಪಾಡಿ ಸಿ.ಆರ್. ಕಾಲನಿ ಬಳಿ ಬಂಧಿಸಲಾಗಿದ್ದು ಆತನಿಂದ ಶ್ರೀಗಂಧ ವಶಕ್ಕೆ ಪಡೆಯಲಾಗಿದೆ. ಆರೋಪಿ ಮತ್ತು ಶ್ರೀಗಂಧವನ್ನು ಪುತ್ತೂರು ಆರ್.ಎಫ್.ಓ ಅವರಿಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಗಳಾದ ಜಯರಾಮ ಕೆ.ಟಿ, ಶಿವಾನಂದ, ಜಗದೀಶ ಸಾಲ್ಯಾನ್, ತಾರನಾಥ ಹಾಗೂ ಅಬ್ದುಲ್ ರವೂಫ್ ಭಾಗವಹಿಸಿದ್ದರು.