ಪುಣಚ: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

0

ಪುತ್ತೂರು: ಬಾವಿಗೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಎ.23ರಂದು ನಡೆದಿದೆ.


ಸುಳ್ಯ ತಾಲೂಕು ಜಾಲ್ಸೂರು ನಿವಾಸಿ ಮಹಮ್ಮದ್ ಮನ್ಸೂರ್(36ವ.)ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಿಸಲ್ಪಟ್ಟವರು. ಇವರು ಪುಣಚ ಗ್ರಾಮದ ಕಲ್ಲಾಜೆ ಎಂಬಲ್ಲಿರುವ ಬಾವ ಅಬೀದ್‌ರವರ ಮನೆಗೆ ಬಂದಿದ್ದು ಅಲ್ಲಿ ಸುಮಾರು 60 ಅಡಿಗಿಂತಲೂ ಆಳದ ಬಾವಿಗೆ ಇಳಿದು ನೀರು ಸ್ವಚ್ಛಗೊಳಿಸಿ ಹಗ್ಗದ ಮೂಲಕ ಮೇಲಕ್ಕೆ ಬರುತ್ತಿರುವಾಗ ಹಗ್ಗದಿಂದ ಕೈ ಜಾರಿ ಬಾವಿಯೊಳಗೆ ಬಿದ್ದು ಗಾಯಗೊಂಡು ಮೇಲಕ್ಕೆ ಬರಲಾಗದೆ ಸಿಲುಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮನೆಯವರು ಪುತ್ತೂರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಬಾವಿಯೊಳಗೆ ಸಿಲುಕಿಕೊಂಡಿದ್ದ ಮಹಮ್ಮದ್ ಮನ್ಸೂರ್ ಅವರನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿದ್ದಾರೆ.

ಸದ್ರಿ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಶಂಕರ್, ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡ, ಅಗ್ನಿಶಾಮಕ ಚಾಲಕ ಕಾಂತರಾಜ್, ಅಗ್ನಿಶಾಮಕರಾದ ಮಂಜುನಾಥ ಪಾಟೀಲ, ಜಾಫರ್ ಅಹಮದ್ ಮತ್ತು ಸಿದ್ದರೂಡರವರು ಸಹಕರಿಸಿದರು. ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಅವರು ಬಾವಿಗೆ ಇಳಿದು ಬಾವಿಗೆ ಬಿದ್ದಿರುವ ವ್ಯಕ್ತಿಯನ್ನು ಮೇಲಕ್ಕೆ ತರಲು ಸಹಕರಿಸಿದ್ದರು. ಗಾಯಾಳು ಮನ್ಸೂರು ಅವರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here